ADVERTISEMENT

KMF: ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಜಿದ್ದಾಜಿದ್ದಿ ಸ್ಪರ್ಧೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 0:10 IST
Last Updated 2 ಜುಲೈ 2025, 0:10 IST
<div class="paragraphs"><p>ಬೆಂಗಳೂರು ಡೇರಿ</p></div>

ಬೆಂಗಳೂರು ಡೇರಿ

   

ಬೆಂಗಳೂರು: ಕರ್ನಾಟಕ ಸಹಕಾರಿ ಹಾಲು ಮಹಾಮಂಡಳದ (ಕೆಎಂಎಫ್‌) ಅಧ್ಯಕ್ಷ ಸ್ಥಾನಕ್ಕೆ ಜಿದ್ದಾಜಿದ್ದಿ ಸ್ಪರ್ಧೆ ಏರ್ಪಡುವ ಲಕ್ಷಣಗಳು ಗೋಚರಿಸುತ್ತಿದೆ.

ಕೆಎಂಎಫ್ ಅಧ್ಯಕ್ಷ ಸ್ಥಾನದ ಸ್ಪರ್ಧೆಯಲ್ಲಿ ಮಾಜಿ ಸಂಸದ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಅವರ ಹೆಸರು ಕೇಳಿಬಂದಿತ್ತು. ‘ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟೇ ಸುರೇಶ್ ಅವರು ಬಮೂಲ್ ಅಧ್ಯಕ್ಷರಾಗಿದ್ದಾರೆ’ ಎಂದು ಹೇಳಲಾಗಿತ್ತು.

ADVERTISEMENT

ಇದರ ಬೆನ್ನಲ್ಲೇ ಕೆಎಂಎಫ್ ಮಾಜಿ ಅಧ್ಯಕ್ಷ ಭೀಮಾನಾಯ್ಕ ಅವರು ‘ನಾನು ಮತ್ತೊಮ್ಮೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನನ್ನು ಮತ್ತೊಂದು ಅವಧಿಗೆ ಅಧ್ಯಕ್ಷರಾಗಿ ಆಯ್ಕೆ ಮಾಡುವ ಭರವಸೆ ನೀಡಿದ್ದಾರೆ’ ಎಂದು ಸಭೆಯೊಂದರಲ್ಲಿ ಹೇಳಿಕೊಂಡಿದ್ದರು.

ಮಾಲೂರು ಶಾಸಕ ಕೆ.ವೈ.ನಂಜೇಗೌಡ, ‘ಕೆಎಂಎಫ್ ಅಧ್ಯಕ್ಷ ಸ್ಥಾನ ನನಗೇ ಸಿಗುವ ವಿಶ್ವಾಸವಿದೆ. ಭೀಮಾನಾಯ್ಕ ನಂತರ ಅಧ್ಯಕ್ಷ ಸ್ಥಾನವನ್ನು ನನಗೆ ಕೊಡಬೇಕೆಂದು ಮಾತುಕತೆ ಆಗಿತ್ತು. ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನನ್ನ ಪರವಾಗಿ ಮುಖ್ಯಮಂತ್ರಿ ಬಳಿ ಮಾತಾಡಿದ್ದರು. ಮಾಜಿ ಶಾಸಕರ ಬದಲಿಗೆ ಹಾಲಿ ಶಾಸಕ ನಂಜೇಗೌಡರಿಗೆ ಅಧ್ಯಕ್ಷ ಸ್ಥಾನ ಕೊಡಿ ಎಂದೂ ಹೇಳಿದ್ದರು’ ಎಂಬುದಾಗಿ ಸುದ್ದಿಗಾರರಿಗೆ ಮಂಗಳವಾರ ತಿಳಿಸಿದ್ದಾರೆ.

‘ಈಗ ಡಿ.ಕೆ ಸುರೇಶ್ ಬಮೂಲ್ ಅಧ್ಯಕ್ಷರಾಗಿದ್ದಾರೆ. ಅವರು ಮನಸ್ಸು ಮಾಡಿದರೆ ರಾಜ್ಯಸಭಾ ಸದಸ್ಯರಾಗಬಹುದು. ಅವರು ಕೆಎಂಎಫ್ ಅಧ್ಯಕ್ಷ ಸ್ಥಾನ ಬಯಸುವುದಿಲ್ಲ. ಒಂದೊಮ್ಮೆ ಅಧ್ಯಕ್ಷ ಸ್ಥಾನಕ್ಕೆ ಆಸೆಪಟ್ಟರೆ ನಾನೇ ಸುರೇಶ್ ಅವರೊಂದಿಗೆ ಮಾತನಾಡುತ್ತೇನೆ’ ಎಂದೂ ಹೇಳಿದರು.

ಸುರೇಶ್ ಅವರಿಗೆ ಸಹೋದರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಅವರ ಗುಂಪು ಬೆಂಬಲಕ್ಕೆ ನಿಂತಿದ್ದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ ಕೆ.ವೈ. ನಂಜೇಗೌಡರ ಬೆನ್ನಿಗೆ ನಿಂತಿದೆ.

ಈ ನಡುವೆ ‘ಮಾಲೂರು ಶಾಸಕ ನಂಜೇಗೌಡರಿಗೆ ನೀವು ಕೆಎಂಎಫ್ ಸ್ಥಾನ ಕೊಡಿಸುವುದಾಗಿ ಹೇಳಿದ್ದೀರಿ ಎಂದು ಸ್ವತಃ ಶಾಸಕರೇ ಹೇಳಿದ್ದಾರೆ’ ಎಂದು ಸುದ್ದಿಗಾರರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಕೇಳಿದಾಗ, ‘ರಾಜಕೀಯ ಬೆಳವಣಿಗೆಗಳೇ ಬೇರೆ, ಸಹಕಾರ ಕ್ಷೇತ್ರವೇ ಬೇರೆ. ಅದರ ಬಗ್ಗೆ ಈಗ ಚರ್ಚೆ ಮಾಡುವುದಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.