ADVERTISEMENT

ಪ್ರಕಾಂಡ ಪಂಡಿತರನ್ನು ಮಣಿಸಿದ್ದ ಬಾಲಯತಿ

ಪೇಜಾವರ ಶ್ರೀಗಳ ಪಾಂಡಿತ್ಯಕ್ಕೆ ತಲೆದೂಗದವರಿಲ್ಲ

ಬಾಲಚಂದ್ರ ಎಚ್.
Published 29 ಡಿಸೆಂಬರ್ 2019, 5:04 IST
Last Updated 29 ಡಿಸೆಂಬರ್ 2019, 5:04 IST
ಪಂಡಿತರ ಸಮ್ಮೇಳನದಲ್ಲಿ ಭಾಗವಹಿಸಿದ್ದ ಪೇಜಾವರ ಶ್ರೀಗಳು.
ಪಂಡಿತರ ಸಮ್ಮೇಳನದಲ್ಲಿ ಭಾಗವಹಿಸಿದ್ದ ಪೇಜಾವರ ಶ್ರೀಗಳು.   

ಉಡುಪಿ: 1961ರಲ್ಲಿ ದೆಹಲಿಯಲ್ಲಿ ವಿಶ್ವ ಕಲ್ಯಾಣ ಯಾಗ ನಡೆದಿತ್ತು. ವಿಶ್ವೇಶ ತೀರ್ಥರೂ ಭಾಗವಹಿಸಿದ್ದರು. ಅಂದು ನಡೆದ ವಿದ್ವತ್ ಸಭೆಯಲ್ಲಿ ತರುಣಯತಿಯ ಪಾಂಡಿತ್ಯಕ್ಕೆ ಪ್ರಕಾಂಡ ಪಂಡಿತರೂ ತಲೆಬಾಗಿದರು.

ಕಾಶಿಯ ಪಂಡಿತ ಷಡಂಗ ರಾಮಚಂದ್ರ ಶಾಸ್ತ್ರಿಗಳು ಸಭೆಯಲ್ಲಿ ತರ್ಕಶಾಸ್ತ್ರದ ಅತ್ಯಂತ ಜಟಿಲ ಪ್ರಶ್ನೆಯನ್ನು ಮುಂದಿಟ್ಟಿದ್ದರು. ಪಂಡಿತರೆಲ್ಲ ಉತ್ತರ ಕಾಣದೆ ಒಬ್ಬರ ಮುಖವನ್ನೊಮ್ಮೆ ನೋಡುವಾಗ ಪೇಜಾವರಶ್ರೀಗಳು ಸಮಸ್ಯೆಯನ್ನು ಸುಲಭವಾಗಿ ಬಿಡಿಸಿದರು. ಅಲ್ಲಿಗೆ ರಾಮಚಂದ್ರ ಶಾಸ್ತ್ರಿಗಳ ಅಹಂ ಇಳಿದಿತ್ತು.

1965ರಲ್ಲಿ ಕೊಚ್ಚಿಯ ಮಹಾರಾಜರನ್ನು ಭೇಟಿಯಾದ ಶ್ರೀಗಳಿಗೆ ವಾಕ್ಯಾರ್ಥ ರಚನೆಗೆ ಆಹ್ವಾನ ನೀಡಲಾಯಿತು. ಮೊದಲು ನ್ಯಾಯ ಶಾಸ್ತ್ರ ಚರ್ಚೆ, ನಂತರ ದ್ವೈತಾದ್ವೈತ ವಿಮರ್ಶೆ ನಡೆಯಿತು. ಶ್ರೀಗಳು ಕೊಟ್ಟ ಸಮರ್ಥನೆಗೆ ಸ್ವತಃ ಮಹಾರಾಜರು ಮನಸೋತು ಅರಮನೆಯಲ್ಲಿ ಅದ್ಧೂರಿ ಸನ್ಮಾನ ಮಾಡಿ ಬೀಳ್ಕೊಟ್ಟಿದ್ದರು.

ADVERTISEMENT

1966ರಲ್ಲಿ ಕಾಶಿಯಲ್ಲಿ ನಡೆದ ವಿದ್ವತ್ ಸಭೆಯಲ್ಲಿ ಖ್ಯಾತ ಅದ್ವೈತ ವಿದ್ವಾಂಸರಾದ ಅನಂತಕೃಷ್ಣ ಶಾಸ್ತ್ರಿ, ಮಹಾ ತರ್ಕ ಪಂಡಿತರಾದ ರಾಜರಾಜೇಶ್ವರ ಶಾಸ್ತ್ರಿ ದ್ರಾವಿಡರ ಜತೆ ಶಾಸ್ತ್ರಾರ್ಥ ಚರ್ಚೆ ನಡೆಯಿತು. ಅಲ್ಲಿಯೂತರುಣ ಯತಿಯ ಮುಂದೆ ಎಲ್ಲರೂ ತಲೆಬಾಗಬೇಕಾಯಿತು.‌

1951ರಲ್ಲಿ ನಂಜನಗೂಡಿನಲ್ಲಿ ಆಗಮತ್ರಯ ಸಮ್ಮೇಳನ ನಡೆದಿತ್ತು. ಆಗಿನ ಮೈಸೂರು ಮಹಾರಾಜ ಜಯಚಾಮರಾಜೇಂದ್ರ ಒಡೆಯರ್‌ ಉಪಸ್ಥಿತರಿದ್ದರು. ಅಧ್ಯಕ್ಷತೆ 20ರ ಹರೆಯದ ಪೇಜಾವರ ಯತಿಗಳಿಗೆ ಒಲಿದಿತ್ತು.‘ನಮ್ಮ ಹೃದಯದಲ್ಲಿ ದೇವರಿಲ್ಲದಿದ್ದರೆ ನಾವು ಹಂಪೆಯ ಶೂನ್ಯ ಗುಡಿಗಳಂತೆ ಆದೇವು’ ಎಂಬ ಶ್ರೀಗಳ ಮಾತು ನೆರೆದಿದ್ದವರ ರೋಮಾಂಚನಗೊಳಿಸಿತ್ತು.

‘ರಾಜಸತ್ತೆ, ಗುರುಪೀಠಗಳು ಜತೆಯಾಗಿ ಧಾರ್ಮಿಕ ಜಗತ್ತಿನಲ್ಲಿ ಹೊಸ ಜಾಗೃತಿ ನಿರ್ಮಾಣ ಮಾಡಲಿ’ ಎಂದು ಶ್ರೀಗಳು ನೀಡಿದ ಕರೆಗೆ ಹಾಗೂ ವಿದ್ವತ್ ಪೂರ್ಣ ಭಾಷಣಕ್ಕೆ ಮಹಾರಾಜರು ಮನಸೋತು ಅರಮನೆಗೆ ಕರೆಸಿ ಸನ್ಮಾನಿಸಿ ಬೀಳ್ಕೊಟ್ಟಿದ್ದರು.

ಪೇಜಾವರ ಶ್ರೀಗಳಲ್ಲಿದ್ದ ಶಾಸ್ತ್ರದ ಅರಿವಿನ ಆಳ, ವಿಸ್ತಾರಗಳು ವಿದ್ವಾಂಸರನ್ನು ನಿಬ್ಬೆರಗಾಗಿಸುವಂತಿದ್ದವು. ಪೂನಾ ವಿಶ್ವವಿದ್ಯಾಲಯದ ಕುಲಪತಿ ಶ್ರೀದತ್ತೋವಾಮನ ಪೊದ್ದಾರ, ಕಾಶಿಯ ವಿದ್ವಾಂಸ ಮಹಾಮಹೋಪಾಧ್ಯಾಯ ರಾಜರಾಜೇಶ್ವರ ಶಾಸ್ತ್ರಿ, ಶೃಂಗೇರಿ ಜಗದ್ಗುರು ಸೇರಿದಂತೆ ಹಲವರು ಇವರ ಪಾಂಡಿತ್ಯಕ್ಕೆ ಮನಸೋತಿದ್ದರು.

ಆಶುಕವಿ:

ವಿದ್ವತ್ತಿನ ಜತೆಗೆ ಸಂದರ್ಭೋಚಿತ ಆಶುಕವಿತೆಯ ಸಾಮರ್ಥ್ಯವೂ ಶ್ರೀಗಳಲ್ಲಿತ್ತು. ‘ಸಾಂಬವಿಜಯ’ ಸಂಸ್ಕೃತ ಕಾವ್ಯ ರಚಿಸಿದ್ದರು. ಇದನ್ನು ರಚಿಸಿದಾಗ ಅವರ ವಯಸ್ಸು 25.

ಆಕರ್ಷಕ ವ್ಯಕ್ತಿತ್ವ:‌

ತೆಳ್ಳಗೆ, ಬೆಳ್ಳಗೆ, ಪಾದರಸದಂತಹ ಚುರುಕಿನ ವ್ಯಕ್ತಿತ್ವ ಹೊಂದಿದ್ದ ಯತಿಗಳು, ಮಠಾಧಿಪತಿ ಎಂಬ ಅಹಂ ಕಳಚಿಟ್ಟು ಸರಳ, ನಿರಾಡಂಬರರಾಗಿ ಬದುಕಿನುದ್ದಕ್ಕೂ ಜೀವಿಸಿದವರು. ಮಗುವಿನಂತಹ ನಗು, ಹೊಳೆವ ಕಣ್ಣುಗಳು, ಪ್ರೀತಿ, ಸಹಾನುಭೂತಿ ತುಂಬಿದ ಹೃದಯ ಭಕ್ತರ ಮನಸ್ಸಿನಲ್ಲಿ ಮಾಸದೆ ಉಳಿದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.