ADVERTISEMENT

ಕೊಡಗು: ಕ್ವಾರಂಟೈನ್‌ಗೆ ಜಿಲ್ಲೆಯ 13 ಹೋಟೆಲ್

‘ಉಳ್ಳವರು ಬೇಕಿದ್ದರೆ ಹೋಟೆಲ್‌ಗೆ ತೆರಳಿ, ನೀವೇ ವೆಚ್ಚ ಭರಿಸಿ’: ಜಿಲ್ಲಾಡಳಿತದ ನಿರ್ದೇಶನ

ಅದಿತ್ಯ ಕೆ.ಎ.
Published 11 ಮೇ 2020, 19:30 IST
Last Updated 11 ಮೇ 2020, 19:30 IST
ಮಂಙನಡ್ಕ ರಸ್ತೆ ಮೂಲಕ ಕದ್ದುಮುಚ್ಚಿ ಕೇರಳದ ಕಾಸರಗೋಡಿನಿಂದ ಕೊಡಗು ಜಿಲ್ಲೆಗೆ ಕೆಲವರು ಓಡಾಟ ನಡೆಸುತ್ತಿದ್ದರು. ಭಾಗಮಂಡಲ ಪೊಲೀಸರು ಈ ರಸ್ತೆಯನ್ನು ಮುಚ್ಚಿದ್ದಾರೆ 
ಮಂಙನಡ್ಕ ರಸ್ತೆ ಮೂಲಕ ಕದ್ದುಮುಚ್ಚಿ ಕೇರಳದ ಕಾಸರಗೋಡಿನಿಂದ ಕೊಡಗು ಜಿಲ್ಲೆಗೆ ಕೆಲವರು ಓಡಾಟ ನಡೆಸುತ್ತಿದ್ದರು. ಭಾಗಮಂಡಲ ಪೊಲೀಸರು ಈ ರಸ್ತೆಯನ್ನು ಮುಚ್ಚಿದ್ದಾರೆ    

ಮಡಿಕೇರಿ: ಕೆಲಸದ ನಿಮಿತ್ತ ಬೇರೆ ಜಿಲ್ಲೆ ಹಾಗೂ ರಾಜ್ಯಕ್ಕೆ ತೆರಳಿದ್ದ ಕೊಡಗು ಜಿಲ್ಲೆಯ ಜನರು ತಮ್ಮೂರುಗಳಿಗೆ ಮರಳುತ್ತಿದ್ದು ಜಿಲ್ಲಾಡಳಿತದ ಎದುರು ಹಸಿರು ವಲಯವಾಗಿಯೇ ಜಿಲ್ಲೆಯನ್ನು ಉಳಿಸಿಕೊಳ್ಳುವ ಸವಾಲು ಎದುರಾಗಿದೆ.

ಕೆಲವು ಹಾಸ್ಟೆಲ್‌ಗಳಲ್ಲಿ ಕೇರಳ ಹಾಗೂ ತಮಿಳುನಾಡಿನಿಂದ ಬಂದವರನ್ನು ಕ್ವಾರಂಟೈನ್‌ ಮಾಡಲಾಗಿತ್ತು. ಅವರಲ್ಲಿ ಬಹತೇಕರು ಇಲ್ಲಿಸಮಸ್ಯೆಯಾಗುತ್ತಿದೆ,ಮನೆಗೆ ತೆರಳುತ್ತೇವೆ ಎಂದೂ ಗಲಾಟೆ ಮಾಡಿದ್ದಾರೆ.ಪ್ರತ್ಯೇಕ ಶೌಚಾಲಯದ ವ್ಯವಸ್ಥೆ ಇಲ್ಲ, ಸೊಳ್ಳೆ ಕಾಟ, ಊಟವನ್ನು ವಿಳಂಬವಾಗಿ ಕೊಡುತ್ತಾರೆ. ಸ್ಯಾನಿಟೈಸರ್‌ ವ್ಯವಸ್ಥೆಯೂ ಇಲ್ಲ. ಹಾಸ್ಟೆಲ್‌ಗಳಲ್ಲಿ ನೀರಿನ ವ್ಯವಸ್ಥೆ ಇಲ್ಲ. ಅಲ್ಲಿನ ಸಿಬ್ಬಂದಿಗಳು ನಾವು ಅಪರಾಧ ಮಾಡಿ ಬಂದವರಂತೆ ನಡೆಸಿಕೊಳ್ಳುತ್ತಿದ್ದಾರೆ ಎಂದು ಕೆಲವರು ದೂರಿದ್ದರು.

ಇದೀಗ ಜಿಲ್ಲಾಡಳಿತ ಅಗತ್ಯವಿದ್ದವರು ಹೋಟೆಲ್‌ಗಳಲ್ಲಿ ವಾಸ್ತವ್ಯ ಮಾಡಬಹುದು. ಆದರೆ, ಅದರ ವೆಚ್ಚವನ್ನು ನೀವೇ ಭರಿಸಬೇಕು ಎಂದು ಖಡಕ್‌ ಸೂಚನೆ ನೀಡಿದೆ.

ADVERTISEMENT

ಮಹಾರಾಷ್ಟ್ರ, ದೆಹಲಿ, ಕೇರಳ, ತಮಿಳುನಾಡು, ಗುಜರಾತ್‌ ಹಾಗೂ ರಾಜಸ್ಥಾನ ಹೈರಿಸ್ಕ್‌ ರಾಜ್ಯಗಳಾಗಿದ್ದು ಅಲ್ಲಿಂದ ಬಂದವರನ್ನು ಚೆಕ್‌ಪೋಸ್ಟ್‌ನಲ್ಲಿಯೇ ತಡೆದು ಸೀಲ್‌ (ಮೊಹರು) ಹಾಕಿ ಕ್ವಾರಂಟೈನ್‌ ಮಾಡಲಾಗುತ್ತಿದೆ. ಅಲ್ಲಿಯೇ ಹಿರಿಯ ಅಧಿಕಾರಿಗಳು ಮೊಕ್ಕಾಂ ಹೂಡಿದ್ದು, ಹೋಟೆಲ್‌ ಬೇಕೇ ಅಥವಾ ಜಿಲ್ಲಾಡಳಿತದಿಂದ ನಡೆಯುತ್ತಿರುವ ಕ್ವಾರಂಟೈನ್‌ ಕೇಂದ್ರಕ್ಕೆ ತೆರಳುತ್ತೀರಾ ಎಂಬ ಮಾಹಿತಿ ಪಡೆದು, ಅವರ ಆಯ್ಕೆ ಕೇಂದ್ರಕ್ಕೆ ಕಳುಹಿಸಲು ನಿರ್ಧರಿಸಲಾಗಿದೆ. ಆಯ್ಕೆಯನ್ನು ಹೊರ ರಾಜ್ಯದಿಂದ ಬಂದವರಿಗೇ ಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಹೊರ ರಾಜ್ಯಗಳಿಂದ ಜಿಲ್ಲೆಗೆ ಮರಳುವವರು 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಬೇಕು. ಗಂಟಲು ದ್ರವ ಮಾದರಿಯನ್ನು 14ನೇ ದಿನದಂದು ತೆಗೆದು ಪರೀಕ್ಷೆಗೆ ಕಳುಹಿಸಲಾಗುವುದು. ಪ್ರಯೋಗಾಲಯ ಪರೀಕ್ಷೆಯ ಫಲಿತಾಂಶ ಬರುವವರೆಗೂ ಅವರು ಸಾಂಸ್ಥಿಕ ಸಂಪರ್ಕ ತಡೆಯಲ್ಲಿ ಇರಬೇಕು ಎಂದು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ತಿಳಿಸಿದರು.

ಸಾಂಸ್ಥಿಕ ಸಂಪರ್ಕ, ಸಂಪರ್ಕ ತಡೆ ಸೌಲಭ್ಯವನ್ನು ಕಲ್ಪಿಸಲು ಸರ್ಕಾರದ ವಿವಿಧ ಇಲಾಖೆಗಳ ಅಧೀನದಲ್ಲಿ ಬರುವ ಹಾಸ್ಟೆಲ್‌ ಮತ್ತು ವಸತಿ ಶಾಲೆ ಗುರುತಿಸಲಾಗಿದೆ. ಹಾಸ್ಟೆಲ್‌ ಮತ್ತು ವಸತಿ ಶಾಲೆಗಳಲ್ಲಿ ಸಂಪರ್ಕ ತಡೆ ಮಾಡಿರುವವರಿಗೆ ಊಟ ಮತ್ತು ವಸತಿಯನ್ನು ಸರ್ಕಾರದ ವತಿಯಿಂದ ಉಚಿತವಾಗಿ ನೀಡಲಾಗುವುದು. 13 ಹೋಟೆಲ್‌ಗಳನ್ನು ಸಾಂಸ್ಥಿಕ ಸಂಪರ್ಕ ತಡೆಗಾಗಿ ಗುರುತಿಸಲಾಗಿದೆ. ಹೋಟೆಲ್‌ಗಳಲ್ಲಿ ಸಂಪರ್ಕ ತಡೆಯಲ್ಲಿ ಇರುವವರು ಊಟ, ವಸತಿಯ ವೆಚ್ಚ ತಾವೇ ಭರಿಸಬೇಕಾಗುತ್ತದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.