
ಬೆಂಗಳೂರು: ಹಣ ಪಡೆದು ಕೋಗಿಲು ಬಡಾವಣೆಯಲ್ಲಿ ಅನಧಿಕೃತವಾಗಿ ಮನೆ ನಿರ್ಮಾಣಕ್ಕೆ ಸಹಕರಿಸಿದ್ದಾರೆಂಬ ಆರೋಪದಡಿ ನಾಲ್ವರ ವಿರುದ್ಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ವಿಜಯ್, ವಸೀಂ ಉಲ್ಲಾ ಬೇಗ್, ಮುನಿ ಆಂಜಿನಪ್ಪ, ರಾಬಿನ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ಘನ ತ್ಯಾಜ್ಯ ನಿರ್ವಹಣೆಗಾಗಿ ಕೋಗಿಲು ಗ್ರಾಮದ ಸರ್ವೆ ನಂಬರ್ 99ರಲ್ಲಿ 14 ಎಕರೆ 36 ಗುಂಟೆ ಜಮೀನನ್ನು ಜಿಲ್ಲಾಧಿಕಾರಿ ಬಿಬಿಎಂಪಿಗೆ ಹಸ್ತಾಂತರ ಮಾಡಿದ್ದರು. ಆ ಪ್ರದೇಶದಲ್ಲಿ ಮುಕ್ಕಾಲು ಭಾಗ ಕಾಂಪೌಂಡ್ ನಿರ್ಮಾಣ ಕಾರ್ಯ ಪೂರ್ಣವಾಗಿದೆ. ಸ್ಥಳದಲ್ಲಿ ಎಳನೀರು ಬುರುಡೆ ಸಂಸ್ಕರಣಾ ಘಟಕ, ಪ್ರಾಣಿ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣ ಕಾಮಗಾರಿಗೆ ಟೆಂಡರ್ ಆಹ್ವಾನಿಸಲಾಗಿತ್ತು. ಆ ಸ್ಥಳದಲ್ಲಿ ಕಾಮಗಾರಿ ನಡೆಸಲು 2023ರಲ್ಲಿ ಕಾರ್ಯಾದೇಶ ನೀಡಲಾಗಿತ್ತು. ಈ ಜಾಗದ ಪೈಕಿ ನಾಲ್ಕು ಎಕರೆ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ಅನಧಿಕೃತವಾಗಿ ಮನೆ ನಿರ್ಮಿಸಲಾಗಿತ್ತು. ಸ್ಥಳದಲ್ಲಿದ್ದ 160 ಅನಧಿಕೃತ ಮನೆಗಳನ್ನು ತೆರವು ಮಾಡಲಾಗಿದೆ. ಅನಧಿಕೃತಮನೆ ನಿರ್ಮಾಣಕ್ಕೆ ನಾಲ್ವರು ಆರೋಪಿಗಳು ಸಹಕಾರ ನೀಡಿದ್ದಾರೆ ಎಂದು ಆರೋಪಿಸಿ ಎಂಜಿನಿಯರ್ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ಬಿಗುವಿನ ವಾತಾವರಣ ಸೃಷ್ಟಿ– ಎಫ್‌ಐಆರ್: ಅನಧಿಕೃತವಾಗಿ ನಿರ್ಮಿಸಿದ್ದ ಮನೆ ತೆರವು ಕಾರ್ಯಾಚರಣೆ ವೇಳೆ ಸ್ಥಳಕ್ಕೆ ಬಂದು ಬಿಗುವಿನ ವಾತಾವರಣ ಸೃಷ್ಟಿಸಿದ್ದ ಆರೋಪದಡಿ ನಾಲ್ವರ ವಿರುದ್ಧ ಇದೇ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಜನಪರ ವೇದಿಕೆಯ ಮುಖಂಡರಾದ ಗೌರಮ್ಮ, ಮನೋಹರ್, ದಲಿತ ಸಂಘಟನೆಯ ಮುಖಂಡ ಮರಿಯಪ್ಪ, ದುಡಿಯುವ ಜನರ ಪರ ವೇದಿಕೆ ಮುಖಂಡ ಇಸಾಕ್ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಮೂಲಗಳು ಹೇಳಿವೆ.
ಸರ್ವೆ ನಂ. 99ರಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಮನೆಗಳು ತೆರವು ಕಾರ್ಯಾಚರಣೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಸ್ಥಳದಲ್ಲಿ ಬಂದೋಬಸ್ತ್ ಕೆಲಸಕ್ಕೆ ನನ್ನನ್ನು ನೇಮಿಸಲಾಗಿತ್ತು. ಡಿ.20 ಬೆಳಿಗ್ಗೆ 11.30ರ ಸುಮಾರಿಗೆ ಏಕಾಏಕಿ ಸ್ಥಳಕ್ಕೆ ಬಂದಿದ್ದ ನಾಲ್ವರು, ಸ್ಥಳದಲ್ಲಿದ್ದವರನ್ನು ಶಾಲಾ ಆವರಣಕ್ಕೆ ಕರೆದೊಯ್ದು ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಸಿದ್ದರು ಎಂದು ಹೆಡ್ ಕಾನ್‌ಸ್ಟೆಬಲ್ ಶಂಕರ್‌ನಾಯ್ಕ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.
ಕೋಗಿಲು ನಿರಾಶ್ರಿತರಿಗೆ ಅಗತ್ಯ ಸೌಕರ್ಯ: ಹೈಕೋರ್ಟ್‌ಗೆ ರಾಜ್ಯ ಸರ್ಕಾರ
‘ಯಲಹಂಕ ವ್ಯಾಪ್ತಿಯ ಕೋಗಿಲು ಲೇ ಔಟ್ ವ್ಯಾಪ್ತಿಯ ಫಕೀರ್ ಹಾಗೂ ವಸೀಂ ಕಾಲೋನಿಯಿಂದ ತೆರವುಗೊಳಿಸಲಾಗಿರುವ ಅನಧಿಕೃತ ನಿವಾಸಿಗಳಿಗೆ ತಾತ್ಕಾಲಿಕ ಆಶ್ರಯ ಕಲ್ಪಿಸಲು ಮೂರು ಜಾಗಗಳನ್ನು ಗುರುತಿಸಲಾಗಿದೆ. ಅವರಿಗೆ ಆಹಾರ, ಔಷಧಿ ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸಲಾಗುವುದು’ ಎಂದು ರಾಜ್ಯ ಸರ್ಕಾರ, ಹೈಕೋರ್ಟ್‌ಗೆ ಅರುಹಿದೆ.
‘ತೆರವು ಕಾರ್ಯಾಚರಣೆಯನ್ನು ಅಸಾಂವಿಧಾನಿಕ ಎಂದು ಘೋಷಿಸಬೇಕು, ಸಂತ್ರಸ್ತರಿಗೆ ಪುನರ್ವಸತಿ ಹಾಗೂ ಪರಿಹಾರ ನೀಡಲು ನಿರ್ದೇಶಿಸಬೇಕು’ ಎಂದು ಕೋರಿ ಈ ಪ್ರದೇಶದಲ್ಲಿ ವಾಸವಿದ್ದ ಝೈಬಾ ತಬಸ್ಸುಮ್, ರೆಹಾನ ಮತ್ತು ಅರೀಫಾ ಬೇಗಂ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ‘ಒತ್ತುವರಿ ತೆರವು ಕಾರ್ಯಾಚರಣೆ ನಡೆಸುವುದಕ್ಕೂ ಮುನ್ನ ಯಾವುದೇ ರೀತಿಯ ನೋಟಿಸ್ ನೀಡಲಾಗಿಲ್ಲ. ಸಹಜ ನ್ಯಾಯ ತತ್ವ ಪಾಲನೆ ಮಾಡಲಾಗಿಲ್ಲ. ಬುಲ್ಡೋಜರ್ ಬಳಸಿ ನೆಲಸಮಗೊಳಿಸಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ, ಈ ತೀರ್ಪಿಗೆ ವಿರುದ್ಧವಾಗಿ ಈ ಪ್ರಕರಣದಲ್ಲಿ ನಡೆದುಕೊಳ್ಳಲಾಗಿದೆ’ ಎಂದು ಆಕ್ಷೇಪಿಸಿದರು.
‘ಈ ಪ್ರದೇಶಲ್ಲಿದ್ದ ಅರ್ಜಿದಾರ ನಿವಾಸಿಗಳಿಗೆ 2014ರಲ್ಲಿಯೇ ಈ ಹಿಂದಿನ ಬಿಬಿಎಂಪಿ ಸ್ಥಳ ಹಂಚಿಕೆ ಮಾಡಿತ್ತು. ಕಾರ್ಯಾಚರಣೆಯಲ್ಲಿ ನಿರ್ಗತಿಕರಾಗಿರುವ 300 ಕುಟುಂಬಗಳ 3,000 ಮಂದಿಗೆ ಮೂಲಸೌಕರ್ಯ ಕಲ್ಪಿಸಬೇಕು’ ಎಂದು ಮನವಿ ಮಾಡಿದರು.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅಡ್ವೊಕೇಟ್ ಜನರಲ್ (ಎಜಿ) ಕೆ.ಶಶಿಕಿರಣ ಶೆಟ್ಟಿ, ‘ಒತ್ತುವರಿಯಾಗಿದ್ದ ಪ್ರದೇಶವು ಸರ್ಕಾರದ ಜಾಗ. ಇಲ್ಲಿನ ಕಟ್ಟಡಗಳ ತೆರವು ಕಾರ್ಯಾಚರಣೆಯಲ್ಲಿ ಸುಪ್ರೀಂ ಕೋರ್ಟ್ ಮಾರ್ಗಸೂಚಿ ಅನ್ವಯ ಆಗುವುದಿಲ್ಲ. ಈ ನಿರ್ದಿಷ್ಟ ಜಾಗವು ಕ್ವಾರಿ ಪ್ರದೇಶವಾಗಿದ್ದು, ನಂತರದಲ್ಲಿ ಇದನ್ನು ನೀರಿನ ಕೆರೆ ಪ್ರದೇಶವನ್ನಾಗಿ ಬಳಕೆ ಮಾಡಲಾಗಿತ್ತು. ಏತನ್ಮಧ್ಯೆ, ಸಂತ್ರಸ್ತರು ಮನೆ ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದ ಕಾರಣ ಆ ನೀರು ಕಲುಷಿತಗೊಂಡಿತ್ತು. ಹಾಗಾಗಿ, ಇದು ಕೊಳಚೆ ಪ್ರದೇಶವಲ್ಲ’ ಎಂದು ಸ್ಪಷ್ಟಪಡಿಸಿದರು.
‘ಅರ್ಜಿದಾರರು 28 ವರ್ಷಗಳಿಂದ ಈ ಸ್ಥಳದಲ್ಲಿದ್ದೆವು ಎಂಬ ಹೇಳಿಕೆ ವಾಸ್ತವಕ್ಕೆ ದೂರ. ಇಲ್ಲಿ ಕಟ್ಟಿಕೊಳ್ಳಲಾಗಿದ್ದ ಪ್ರತಿಯೊಂದು ಅಕ್ರಮ ಮನೆಯ ಬಗ್ಗೆ ಉಪಗ್ರಹ ಫೋಟೊ ಹಾಜರುಪಡಿಸಲಾಗುವುದು. ಈ ನಿಟ್ಟಿನಲ್ಲಿ ಆಕ್ಷೇಪಣೆ ಸಲ್ಲಿಸಲು ಒಂದು ವಾರ ಕಾಲಾವಕಾಶ ನೀಡಬೇಕು’ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿತು. ‘ನಿರಾಶ್ರಿತರಿಗೆ ತಾತ್ಕಾಲಿಕ ಆಶ್ರಯ ಕಲ್ಪಿಸಲು ಗುರುತಿಸಲಾದ ಜಾಗದ ಬಗ್ಗೆ ಒಂದು ವಾರದಲ್ಲಿ ಸಮಗ್ರ ವರದಿ ಸಲ್ಲಿಸಿ’ ಎಂದು ಸರ್ಕಾರಕ್ಕೆ ನಿರ್ದೇಶಿಸಿ ವಿಚಾರಣೆಯನ್ನು ಇದೇ 22ಕ್ಕೆ ಮುಂದೂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.