ADVERTISEMENT

ಕೋಗಿಲು: ಪುನರ್ವಸತಿ ವಿವರ ಸಲ್ಲಿಸಲು ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 16:29 IST
Last Updated 6 ಫೆಬ್ರುವರಿ 2026, 16:29 IST
ವಿವರ ಸಲ್ಲಿಕೆಗೆ ಹೈಕೋರ್ಟ್‌ ನಿರ್ದೇಶನ
ವಿವರ ಸಲ್ಲಿಕೆಗೆ ಹೈಕೋರ್ಟ್‌ ನಿರ್ದೇಶನ   

ಬೆಂಗಳೂರು: ‘ಕೋಗಿಲು ಬಡಾವಣೆಯಲ್ಲಿನ ಅಕ್ರಮ ಮನೆಗಳ ತೆರವು ಕಾರ್ಯಾಚರಣೆಯಲ್ಲಿ ಸಂತ್ರಸ್ತರಿಗೆ ಕಲ್ಪಿಸಲಾಗಿರುವ ಪುನರ್ವಸತಿ ಹಾಗೂ ನಿರ್ಗತಿಕರಾದವರ ಮಾಹಿತಿಯನ್ನು ಒಳಗೊಂಡ ವರದಿ ಸಲ್ಲಿಸಿ’ ಎಂದು ಹೈಕೋರ್ಟ್‌, ಪ್ರಕರಣದ ಅಮಿಕಸ್‌ ಕ್ಯೂರಿಗೆ ನಿರ್ದೇಶಿಸಿದೆ.

‘ತೆರವು ಕಾರ್ಯಾಚರಣೆಯನ್ನು ಅಸಾಂವಿಧಾನಿಕ ಎಂದು ಘೋಷಿಸಬೇಕು, ಸಂತ್ರಸ್ತರಿಗೆ ಪುನರ್ವಸತಿ ಹಾಗೂ ಪರಿಹಾರ ನೀಡಲು ನಿರ್ದೇಶಿಸಬೇಕು’ ಎಂದು ಕೋರಿ ಈ ಪ್ರದೇಶದಲ್ಲಿ ವಾಸವಿದ್ದ ಝೈಬಾ ತಬಸ್ಸುಮ್, ರೆಹಾನ ಮತ್ತು ಅರೀಫಾ ಬೇಗಂ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ನ್ಯಾಯಪೀಠವು, ‘ತೆರವು ಕಾರ್ಯಾಚರಣೆಯಿಂದ ಎಷ್ಟು ಮಂದಿ ನಿರ್ಗತಿಕರಾಗಿದ್ದಾರೆ. ಎಷ್ಟು ಜನರ ಮನೆ ತೆರವು ಮಾಡಲಾಗಿದೆ. ಎಷ್ಟು ಗುಡಿಸಲುಗಳನ್ನು ನಾಶಪಡಿಸಲಾಗಿದೆ. ಎಷ್ಟು ಕುಟುಂಬ ನಿರ್ಗತಿಕವಾಗಿವೆ. ಪುನರ್ವಸತಿಯ ವ್ಯವಸ್ಥೆ ಹೇಗಿದೆ ಎಂಬೆಲ್ಲಾ ಅಂಶಗಳನ್ನು ಒಳಗೊಂಡ ವಿವರವಾದ ವರದಿ ಸಲ್ಲಿಸಬೇಕು. ಇದಕ್ಕೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು (ಕೆಎಸ್‌ಎಲ್‌ಎಸ್‌ಎ) ಸಂಪೂರ್ಣ ನೆರವು ನೀಡಬೇಕು’ ಎಂದು ಆದೇಶಿಸಿತು.

ADVERTISEMENT

ಮತ್ತೊಂದು ಅರ್ಜಿ: ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ, ‘ಫಕೀರ್‌ ಲೇ ಔಟ್‌ನಲ್ಲಿ 1990ರಿಂದ ನೆಲೆಸಿರುವ 15 ಮಂದಿಯ ನಿವಾಸಗಳನ್ನು ತೆರವು ಮಾಡಲಾಗಿದೆ’ ಎಂಬ ಮತ್ತೊಂದು ಅರ್ಜಿಯನ್ನು ಇದೇ ನ್ಯಾಯಪೀಠ ವಿಚಾರಣೆ ನಡೆಸಿತು.

ಈ ಸಂಬಂಧ ಕೋಗಿಲು ಬಡಾವಣೆಯ ರಬಿಯಾ, ಮೊಹಮ್ಮದ್‌ ರಫೀಕ್‌ ಸೇರಿದಂತೆ 15 ಮಂದಿ ಅರ್ಜಿದಾರರ ಪರ ಹೈಕೋರ್ಟ್ ವಕೀಲ ಕ್ಲಿಫ್ಟನ್‌ ಡಿ. ರೋಜಾರಿಯಾ, ‘ಅರ್ಜಿದಾರರು ಫಕೀರ್‌ ಲೇ ಔಟ್‌ನಲ್ಲಿ 1990ರಿಂದ ನೆಲೆಸಿದ್ದಾರೆ. ಎಲ್ಲರಿಗೂ ಕರ್ನಾಟಕ ಭೂ ಕಂದಾಯ ಕಾಯ್ದೆಯ ಅಡಿ ಕಾನೂನುಬದ್ಧ ಹಕ್ಕು ಪತ್ರ ನೀಡಲಾಗಿದೆ. ಇದಕ್ಕೆ ಪೂರಕವಾದ ದಾಖಲೆಗಳಿವೆ. ಆದರೂ ತೆರವು ಮಾಡಲಾಗಿದೆ ಎಂದು ಆಕ್ಷೇಪಿಸಿದರು. ಇದನ್ನು ಆಲಿಸಿದ ನ್ಯಾಯಪೀಠ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.