ADVERTISEMENT

ಕೋಮುಲ್ ನೇಮಕಾತಿ ಪ್ರಕರಣ: ಶಾಸಕ ನಂಜೇಗೌಡರ ₹1.32 ಕೋಟಿ ಆಸ್ತಿ ಮುಟ್ಟುಗೋಲು

​ಪ್ರಜಾವಾಣಿ ವಾರ್ತೆ
Published 17 ಜುಲೈ 2025, 14:49 IST
Last Updated 17 ಜುಲೈ 2025, 14:49 IST
ಕೆ.ವೈ.ನಂಜೇಗೌಡ
ಕೆ.ವೈ.ನಂಜೇಗೌಡ   

ಬೆಂಗಳೂರು: ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘದ (ಕೋಮುಲ್) ನೇಮಕಾತಿ ಅಕ್ರಮ ಪ್ರಕರಣದಲ್ಲಿ, ಸಂಘದ ಅಧ್ಯಕ್ಷ ಮತ್ತು ಕಾಂಗ್ರೆಸ್‌ ಶಾಸಕ ಕೆ.ವೈ.ನಂಜೇಗೌಡ ಅವರ ₹1.32 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯವು (ಇ.ಡಿ) ಮುಟ್ಟುಗೋಲು ಹಾಕಿಕೊಂಡಿದೆ. 

ಸರ್ಕಾರಿ ಜಮೀನು ಮಂಜೂರಾತಿ ಪ್ರಕರಣವೊಂದರ ತನಿಖೆಯ ಭಾಗವಾಗಿ ನಂಜೇಗೌಡ ಅವರ ಮನೆಯಲ್ಲಿ ಶೋಧ ನಡೆಸಿದ್ದ ಇ.ಡಿ ಅಧಿಕಾರಿಗಳು, 2023ರಲ್ಲಿ ಕೋಮುಲ್‌ನ ವಿವಿಧ ಹುದ್ದೆಗಳಿಗೆ ನಡೆಸಿದ್ದ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಮಾಹಿತಿ ದೊರೆತಿದೆ ಎಂದು ತಿಳಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದರು. ಜತೆಗೆ ಕರ್ನಾಟಕ ಲೋಕಾಯುಕ್ತಕ್ಕೂ ಪತ್ರ ಬರೆದಿದ್ದರು.

ವಿವಿಧ ಹುದ್ದೆಗಳ ನೇಮಕಾತಿಗಾಗಿ ಕೋಮುಲ್‌ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ನಡೆಸಿತ್ತು. ಅಭ್ಯರ್ಥಿಗಳ ಒಎಂಆರ್‌ ಶೀಟ್‌ಗಳನ್ನು ತಿದ್ದಿ, ತಮ್ಮ ಶಿಫಾರಸಿನವರಿಗೆ ನೇಮಕಾತಿ ನೀಡಿ ಎಂದು ನಂಜೇಗೌಡ ಅವರು ಕೋಮುಲ್‌ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು. ಈ ಅಕ್ರಮದಲ್ಲಿ ಕೋಮುಲ್‌ನ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್‌.ಗೋಪಾಲಮೂರ್ತಿ ಭಾಗಿಯಾಗಿದ್ದರು ಎಂದು ಇ.ಡಿ ಹೇಳಿತ್ತು.

ADVERTISEMENT

ಈ ಅಕ್ರಮದ ಮೂಲಕ ಇಬ್ಬರೂ ಅಭ್ಯರ್ಥಿಗಳಿಂದ ಒಟ್ಟು ₹1.56 ಕೋಟಿ ವಸೂಲಿ ಮಾಡಿದ್ದರು. ನಂಜೇಗೌಡ ಒಬ್ಬರೇ ₹80 ಲಕ್ಷ ಪಡೆದುಕೊಂಡಿದ್ದರು ಎಂದು ಇ.ಡಿ ಮಾಹಿತಿ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.