ADVERTISEMENT

ಎಸ್‌ಸಿಪಿ, ಟಿಎಸ್‌ಪಿ ಅನುದಾನ ಹಂಚಿಕೆಗೆ ಮಾರ್ಗಸೂಚಿ: ಕೋಟ ಶ್ರೀನಿವಾಸ ಪೂಜಾರಿ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2022, 19:30 IST
Last Updated 23 ಮಾರ್ಚ್ 2022, 19:30 IST
ಕೋಟ ಶ್ರೀನಿವಾಸ ಪೂಜಾರಿ
ಕೋಟ ಶ್ರೀನಿವಾಸ ಪೂಜಾರಿ   

ಬೆಂಗಳೂರು: ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್‌ಸಿಪಿ) ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆ (ಟಿಎಸ್‌ಪಿ) ಅನುದಾನ ಹಂಚಿಕೆಗೆ ಮಾರ್ಗಸೂಚಿ ಜಾರಿಗೊಳಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ವಿಧಾನಸಭೆಯಲ್ಲಿ ಬಿಜೆಪಿಯ ಅಭಯ ಪಾಟೀಲ ಪ್ರಶ್ನೆಗೆ ಬುಧವಾರ ಉತ್ತರಿಸಿದ ಅವರು, ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಸಂಖ್ಯೆಯ ಆಧಾರದಲ್ಲಿ ವಿಧಾನಸಭಾ ಕ್ಷೇತ್ರಗಳಿಗೆ ಎಸ್‌ಸಿಪಿ ಹಾಗೂ ಟಿಎಸ್‌ಪಿ ಅನುದಾನ ಹಂಚಿಕೆ ಮಾಡಲಾಗುವುದು. ಮೀಸಲು ಕ್ಷೇತ್ರಗಳಿಗೆ ಪ್ರಥಮ ಆದ್ಯತೆ, ಒಟ್ಟು ಜನಸಂಖ್ಯೆಯ ಶೇಕಡ 30ಕ್ಕಿಂತ ಹೆಚ್ಚು ಮಂದಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರು ವಾಸಿಸುವ ಕ್ಷೇತ್ರಗಳಿಗೆ ಎರಡನೆ ಆದ್ಯತೆ ಮತ್ತು ಇತರ ಕ್ಷೇತ್ರಗಳಿಗೆ ಕೊನೆಯ ಆದ್ಯತೆ ನೀಡಿ ಅನುದಾನ ಹಂಚಿಕ ಮಾಡುವ ಕ್ರಮ ಜಾರಿಗೆ ಬರಲಿದೆ’ ಎಂದರು.

‘ನನ್ನ ಕ್ಷೇತ್ರಕ್ಕೆ ಸರಿಯಾಗಿ ಅನುದಾನ ಬಿಡುಗಡೆಯಾಗಿಲ್ಲ. ₹ 5 ಕೋಟಿ ಮಂಜೂರು ಮಾಡಿದರೆ, ಬಿಡುಗಡೆ ಆಗಿರುವುದು ₹ 1.25 ಕೋಟಿ ಮಾತ್ರ. ನನ್ನ ಕ್ಷೇತ್ರ ಕರ್ನಾಟಕದಲ್ಲಿ ಇದೆಯೋ? ಇಲ್ಲವೊ’ ಎಂದು ಅಭಯ ಪಾಟೀಲ ಪ್ರಶ್ನಿಸಿದರು.

ADVERTISEMENT

‘2018–19ರಿಂದ ಈವರೆಗೆ ನನ್ನ ಕ್ಷೇತ್ರಕ್ಕೆ ಎಸ್‌ಸಿಪಿ, ಟಿಎಸ್‌ಪಿ ಅಡಿಯಲ್ಲಿ ಅನುದಾನವನ್ನೇ ನೀಡಿಲ್ಲ. ನಮ್ಮದು ಗಡಿ ಜಿಲ್ಲೆ. ಈಗಾಗಲೇ ಜನರು ಬೇರೆ ರಾಜ್ಯಕ್ಕೆ ಹೋಗುವುದಾಗಿ ಹೇಳುತ್ತಿದ್ದಾರೆ. ಹಾರಿಕೆ ಉತ್ತರ ನೀಡಬೇಡಿ. ಅನುದಾನ ಹಂಚಿಕೆಯಲ್ಲಿ ಆಗಿರುವ ತಾರತಮ್ಯ ಸರಿಪಡಿಸಿ’ ಎಂದು ಆಗ್ರಹಿಸಿದರು.

ಆಗ ಮಧ್ಯ ಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ರಾಜ್ಯ ಸರ್ಕಾರ ಆರ್ಥಿಕವಾಗಿ ಸದೃಢವಾಗಿದೆ ಎಂದು ಮುಖ್ಯಮಂತ್ರಿ ಹೇಳುತ್ತಿದ್ದಾರೆ. ನೀವು ನೋಡಿದರೆ ಅನುದಾನವೇ ಬಿಡುಗಡೆಯಾಗಿಲ್ಲ ಎನ್ನುತ್ತಿದ್ದೀರಿ. ₹ 30,000 ಕೋಟಿ ಬಿಲ್‌ ಬಾಕಿ ಇವೆ. ಏನು ಕತೆ’ ಎಂದು ಪ್ರಶ್ನಿಸಿದರು.

ಎಸ್‌ಸಿಪಿ, ಟಿಎಸ್‌ಪಿ ಅನುದಾನ ಹಂಚಿಕೆಯಲ್ಲಿ ಮೀಸಲು ವಿಧಾನಸಭಾ ಕ್ಷೇತ್ರಗಳಿಗೆ ಆದ್ಯತೆ ನೀಡುವಂತೆ ಜೆಡಿಎಸ್‌ನ ಎಚ್‌.ಕೆ. ಕುಮಾರಸ್ವಾಮಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.