ADVERTISEMENT

ಮಾದಿಗರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ನೀಡಿ: ಕಾಂಗ್ರೆಸ್‌ ನಿಯೋಗ ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2021, 20:31 IST
Last Updated 5 ಆಗಸ್ಟ್ 2021, 20:31 IST
ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಅವರನ್ನು ರಾಜ್ಯಸಭೆ ಸದಸ್ಯ ಡಾ.ಎಲ್.ಹನುಮಂತಯ್ಯ ಅವರು ಗುರುವಾರ ನವದೆಹಲಿಯಲ್ಲಿ ಗೌರವಿಸಿದರು. ಕೆ.ಬಿ.ಕೃಷ್ಣಮೂರ್ತಿ, ಎಚ್.ಆಂಜನೆಯ, ಆರ್.ಬಿ.ತಿಮ್ಮಾಪುರ ಚಿತ್ರದಲ್ಲಿದ್ದಾರೆ
ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಅವರನ್ನು ರಾಜ್ಯಸಭೆ ಸದಸ್ಯ ಡಾ.ಎಲ್.ಹನುಮಂತಯ್ಯ ಅವರು ಗುರುವಾರ ನವದೆಹಲಿಯಲ್ಲಿ ಗೌರವಿಸಿದರು. ಕೆ.ಬಿ.ಕೃಷ್ಣಮೂರ್ತಿ, ಎಚ್.ಆಂಜನೆಯ, ಆರ್.ಬಿ.ತಿಮ್ಮಾಪುರ ಚಿತ್ರದಲ್ಲಿದ್ದಾರೆ   

ನವದೆಹಲಿ: ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಮಾದಿಗ ಸಮುದಾಯಕ್ಕೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಕಾರ್ಯಾಧ್ಯಕ್ಷ ಸ್ಥಾನ ನೀಡುವಂತೆ ಸಮುದಾಯದ ಕಾಂಗ್ರೆಸ್‌ ಮುಖಂಡರ ನಿಯೋಗ ಎಐಸಿಸಿ ವರಿಷ್ಠರಲ್ಲಿ ಮನವಿ ಮಾಡಿದೆ.

ಮಾಜಿ ಸಚಿವರಾದ ಎಚ್.ಆಂಜನೇಯ, ಆರ್.ಬಿ. ತಿಮ್ಮಾಪುರ, ರಾಜ್ಯಸಭೆ ಸದಸ್ಯ ಡಾ.ಎಲ್. ಹನುಮಂತಯ್ಯ, ಮಾಜಿ ಸಂಸದ ಕೆ.ಬಿ. ಕೃಷ್ಣಮೂರ್ತಿ ನೇತೃತ್ವದ ನಿಯೋಗವು ಗುರುವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹಾಗೂ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ ಈ ಮನವಿ ಸಲ್ಲಿಸಿದೆ.

ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಮಾದಿಗ ಸಮುದಾಯದ ಏಳ್ಗೆಗಾಗಿ ಪಕ್ಷ ಪ್ರಾತಿನಿಧ್ಯ ನೀಡಿ, ವಿಶೇಷ ಯೋಜನೆ ಜಾರಿಗೊಳಿಸಿದೆ. ಆದರೆ, ಆಡಳಿತಾರೂಢ ಬಿಜೆಪಿಯು ಸಮುದಾಯದ ಮತಗಳನ್ನು ಸೆಳೆಯಲು ವಿಶಿಷ್ಟ ತಂತ್ರ ರೂಪಿಸುತ್ತಿದೆ ಎಂದು ಅವರು ಹೇಳಿದರು.

ADVERTISEMENT

ಬಿಜೆಪಿಯು ಮಾದಿಗ ಮುಖಂಡರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಸಚಿವ ಸ್ಥಾನ ಹಾಗೂ ವಿವಿಧ ಮಂಡಳಿಗಳ ಸದಸ್ಯತ್ವ ನೀಡಿ ಸೆಳೆಯುತ್ತಿದೆ. ಪಕ್ಷವು ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಮುದಾಯದ ಮುಖಂಡರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ಹಾಗೂ ಜಿಲ್ಲಾ ಮಟ್ಟದ ಪದಾಧಿಕಾರಿಗಳ ನೇಮಕಾತಿಯಲ್ಲೂ ಅವಕಾಶ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.

ಅಸ್ಪೃಶ್ಯ ವರ್ಗಕ್ಕೆ ಸೇರುವ ಮಾದಿಗ ಸಮುದಾಯವು ಕಾಂಗ್ರೆಸ್‌ನ ಬಗ್ಗೆ ವಿಶ್ವಾಸ ಹೊಂದಿದೆ. ರಾಜಕೀಯ ಪ್ರಾತಿನಿಧ್ಯ ನೀಡುವ ಮೂಲಕ ಈ ನಿರ್ಲಕ್ಷಿತ ಸಮುದಾಯದ ಬೆಂಬಲ ಮುಂದುವರಿಯುವಂತೆ ನೋಡಿಕೊಳ್ಳಬೇಕು ಎಂದು ನಿಯೋಗದ ಮುಖಂಡರು ಮನವರಿಕೆ ಮಾಡಿದರು.

ಬಿಜೆಪಿಯು ವಿವಿಧ ರೀತಿಯ ಆಮಿಷವೊಡ್ಡಿ ಸಮುಯದಾಯದ ಯುವಕರನ್ನು ತನ್ನಡೆಗೆ ಸೆಳೆದೊಕೊಳ್ಳುವ ಪ್ರಯತ್ನ ನಡೆಸಿದೆ. ಆದರೆ ಅದಕ್ಕೆ ಬಲಿಯಾಗದ ಶೇ 95ರಷ್ಟು ಜನ ಪಕ್ಷ ನಿಷ್ಠೆ ಮುಂದುವರಿಸಿದ್ದಾರೆ. ಸಮುದಾಯದ ಬದ್ಧತೆ ಗುರುತಿಸಿ ಪ್ರಮುಖ ಹುದ್ದೆ ನೀಡಬೇಕು ಎಂದು ಅವರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.