ADVERTISEMENT

ಬೆಂಗಳೂರು: ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ‘ಕೈ’ ನಾಯಕರ ದಂಡು

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2022, 15:40 IST
Last Updated 7 ನವೆಂಬರ್ 2022, 15:40 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ಬೆಂಗಳೂರು: ಕಾಂಗ್ರೆಸ್‌ ಕಾರ್ಯಕರ್ತರು, ವಿಧಾನಸಭೆ ಚುನಾವಣೆಯ ಟಿಕೆಟ್‌ ಆಕಾಂಕ್ಷಿಗಳ ದಂಡು ಮಲ್ಲಿಕಾರ್ಜುನ ಖರ್ಗೆ ಅವರ ಸದಾಶಿವನಗರದಲ್ಲಿರುವ ನಿವಾಸಕ್ಕೆ ಸೋಮವಾರ ಹರಿದು ಬಂತು. ಎಐಸಿಸಿ ಚುಕ್ಕಾಣಿ ಹಿಡಿದ ಬಳಿಕ ಮೊದಲ ಬಾರಿಗೆ ರಾಜ್ಯಕ್ಕೆ ಭಾನುವಾರ ಬಂದಿದ್ದ ಖರ್ಗೆ ಅವರನ್ನು ಅಭಿನಂದಿಸುವ ನೆಪದಲ್ಲಿ ಭೇಟಿ ಮಾಡಿದ ನಾಯಕರ ಪೈಕಿ ಕೆಲವರು ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡುವಂತೆ ದುಂಬಾಲು ಬಿದ್ದರು.

ಮಾಜಿ ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಅವರು ಪುತ್ರ ಪ್ರಕಾಶ್ ಜೊತೆ ಖರ್ಗೆ ಅವರನ್ನು ಭೇಟಿ ಮಾಡಿದರು. ಈ ವೇಳೆ ಮಾತನಾಡಿದ ಕೋಳಿವಾಡ, ‘ಎಐಸಿಸಿ ಅಧ್ಯಕ್ಷರಾದ ಬಳಿಕ ರಾಜ್ಯ ಕಾಂಗ್ರೆಸ್‌ಗೆ ಹೆಚ್ಚಿನ ಶಕ್ತಿ ಬಂದಿದೆ. ನಮ್ಮ ಪಕ್ಷ 2023ರ ಚುನಾವಣೆಯಲ್ಲಿ ಖಂಡಿತವಾಗಿಯೂ ಬಹುಮತ ಪಡೆಯಲಿದೆ. 2024ರಲ್ಲಿ ರಾಷ್ಟ್ರದಲ್ಲಿಯೂ ಅಧಿಕಾರಕ್ಕೆ ಬರುವ ನಿರೀಕ್ಷೆ ಇದೆ. ನಮ್ಮಲ್ಲಿ ಯಾವ ಬಣ ರಾಜಕೀಯವೂ ಇಲ್ಲ’ ಎಂದರು.

‘ಯುವಕರಿಗೆ, ಮಹಿಳೆಯರಿಗೆ ಟಿಕೆಟ್ ಕೊಡೋಣ ಎಂದೂ ಹೇಳಿದ್ದಾರೆ. ಯುವಕರು ರಾಜಕೀಯಕ್ಕೆ ಬಂದರೆ ತಪ್ಪೇನಿದೆ? ಹಿರಿಯರಿಗೆ ಟಿಕೆಟ್‌ ತಪ್ಪ ಬಹುದು ಅಷ್ಟೆ. ನಾನು ಅಥವಾ ನನ್ನ ಮಗನಿಗೆ ಟಿಕೆಟ್ ಕೇಳುತ್ತೇನೆ. ಇಬ್ಬರಲ್ಲಿ ಯಾರಿಗೆ ಕೊಡುತ್ತಾರೊ ನೋಡೋಣ’ ಎಂದರು.

ADVERTISEMENT

150 ಸ್ಥಾನಗಳ ಗುರಿ: ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ ಮಾತನಾಡಿ, ‘2023ರ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲಬೇಕೆಂದು ರಾಜ್ಯ ನಾಯಕರಿಗೆ ರಾಹುಲ್ ಗಾಂಧಿ ಗುರಿ ನೀಡಿದ್ದಾರೆ. ಎಐಸಿಸಿ ಅಧ್ಯಕ್ಷರು ಕೂಡಾ ಇದೇ ಗುರಿ ನೀಡಿದ್ದಾರೆ. ಪಕ್ಷವನ್ನು ಅಧಿಕಾರಕ್ಕೆ ತರುವಂತೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಇಬ್ಬರಿಗೂ ಮಲ್ಲಿಕಾರ್ಜುನ ಖರ್ಗೆ ಸೂಚನೆ ನೀಡಿದ್ದಾರೆ. ಸಣ್ಣಪುಟ್ಟ ಭಿನ್ನಾಭಿಪ್ರಾಯ ಇರುವುದು ಸಹಜ. ಅದನ್ನು ಸರಿಪಡಿಸಿಕೊಂಡು ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ’ ಎಂದರು.

‘ಮಲ್ಲಿಕಾರ್ಜುನ ಖರ್ಗೆ ಕೇವಲ ದಲಿತ ಸಮುದಾಯದ ನಾಯಕರಲ್ಲ. ಆದರೆ, ಅವರ ನೇತೃತ್ವದಿಂದ ಮುಂದಿನ ಚುನಾವಣೆಯಲ್ಲಿ ದಲಿತ ಮತಗಳು ಪಕ್ಷಕ್ಕೆ ಹೆಚ್ಚು ಬರುವ ನಿರೀಕ್ಷೆ ಇದೆ. ಕಲಬುರಗಿಯಲ್ಲೂ ಪಕ್ಷದಿಂದ ಸಮಾವೇಶ ಆಯೋಜಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ’ ಎಂದರು.

ಅಲ್ಲಂ ವೀರಭದ್ರಪ್ಪ, ಮಾರ್ಗರೇಟ್ ಆಳ್ವಾ, ಬಿ.ಎಲ್. ಶಂಕರ್‌, ಮಲ್ಲಾಜಮ್ಮ ಸೇರಿದಂತೆ ಹಲವರು ಖರ್ಗೆ ಅವರನ್ನು ಭೇಟಿ ಮಾಡಿ ಹೂಗುಚ್ಛ ನೀಡಿ ಅಭಿನಂದಿಸಿದರು.

ಒಗ್ಗಟ್ಟಿನಿಂದ ಕೆಲಸ– ಖರ್ಗೆ ವಿಶ್ವಾಸ
ದೆಹಲಿಗೆ ಸೋಮವಾರ ಸಂಜೆ ತೆರಳುವ ಮೊದಲು ಸುದ್ದಿಗಾರರ ಜೊತೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ‘ರಾಜ್ಯದಲ್ಲಿ ಪಕ್ಷದ ನಾಯಕರು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಒಗ್ಗಟ್ಟಾಗಿ ಹೋರಾಟ ಮಾಡುವಂತೆ ಎಲ್ಲ ನಾಯಕರಿಗೂ ನಾನು ಸ್ಪಷ್ಟವಾಗಿ ಹೇಳಿದ್ದೇನೆ. ಪಕ್ಷಕ್ಕಾಗಿ ಎಲ್ಲರೂ ಕೆಲಸ ಮಾಡುತ್ತೇವೆಂದು ಹೇಳಿದ್ದಾರೆ‌. ಎಲ್ಲರೂ ಸಹಕಾರ ನೀಡುತ್ತಾರೆಂಬ ವಿಶ್ವಾಸವಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.