ADVERTISEMENT

ಕೋವಿಡ್‌ ನಿಯಂತ್ರಣಕ್ಕೆ ₹ 30 ಸಾವಿರ ಕೋಟಿ ಮೀಸಲಿಡಿ: ಡಿ.ಕೆ.ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2021, 7:16 IST
Last Updated 19 ಏಪ್ರಿಲ್ 2021, 7:16 IST
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್   

ಬೆಂಗಳೂರು: ‘ಕೊರೊನಾ ಎರಡನೇ ಅಲೆ ವ್ಯಾಪಕವಾಗುತ್ತಿರುವುದರಿಂದ ನಿಯಂತ್ರಣ ಕಾರ್ಯಗಳಿಗೆ ಆರೋಗ್ಯ ಕ್ಷೇತ್ರಕ್ಕೆ ₹ 30 ಸಾವಿರ ಕೋಟಿ ಮೀಸಲಿಡಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

‘ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿ ದಿನೇ ದಿನೇ ಗಂಭೀರವಾಗುತ್ತಿದೆ. ಸೋಂಕಿತರಿಗೆ ಹಾಸಿಗೆಗಳು ಸಿಗುತ್ತಿಲ್ಲ. ಐಸಿಯು, ರೆಮ್‌ಡಿಸಿವಿಯರ್ ಲಸಿಕೆ, ಆಮ್ಲಜನಕ ಅಭಾವ ಸೃಷ್ಟಿಯಾಗಿವೆ. ಪ್ರತಿ ವಿಚಾರದಲ್ಲೂ ಪರಿಸ್ಥಿತಿ ಬಿಗಡಾಯಿಸುತ್ತಿದ್ದು, ಸರ್ಕಾರ ಕೂಡಲೇ ಅಭಿವೃದ್ಧಿ ಯೋಜನೆಗಳನ್ನು ನಿಲ್ಲಿಸಿ, ಆ ಹಣವನ್ನು ಕೊರೊನಾ ನಿಯಂತ್ರಣಕ್ಕೆ ವಿನಿಯೋಗಿಸಬೇಕು. ಸಮರೋಪಾದಿಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

‘ರಾಜ್ಯದಲ್ಲಿ ಅತಿ ಹೆಚ್ಚು ವೈದ್ಯಕೀಯ ಕಾಲೇಜುಗಳಿವೆ. ಸಾಕಷ್ಟು ಪ್ರಮಾಣದಲ್ಲಿ ವೈದ್ಯರು, ಆರೋಗ್ಯ ಸಿಬ್ಬಂದಿಗಳಿದ್ದಾರೆ. ಈ ಎಲ್ಲ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಪ್ರತಿಯೊಬ್ಬರಿಗೂ ಉಚಿತ ಚಿಕಿತ್ಸೆ ಸಿಗುವಂತಾಗಬೇಕು. ಪರೀಕ್ಷೆ ಪ್ರಮಾಣ ಹೆಚ್ಚಿಸಬೇಕು. ಈ ಎಲ್ಲ ಕಾರಣಕ್ಕೆ ಆರೋಗ್ಯ ಕ್ಷೇತ್ರಕ್ಕೆ ಕನಿಷ್ಠ ₹ 30 ಸಾವಿರ ಕೋಟಿಯಾದರೂ ಮೀಸಲಿಡಬೇಕು’ ಎಂದು ಶಿವಕುಮಾರ್ ಮನವಿ ಮಾಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.