ADVERTISEMENT

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ: ಇ.ಡಿ ವಿರುದ್ಧ ಕಾಂಗ್ರೆಸ್‌ ತೀವ್ರ ಪ್ರತಿಭಟನೆ

ಸೋನಿಯಾ, ರಾಹುಲ್‌ ಗಾಂಧಿ ವಿರುದ್ಧ ಆರೋಪ ಪಟ್ಟಿಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 23:30 IST
Last Updated 16 ಏಪ್ರಿಲ್ 2025, 23:30 IST
ಶಾಂತಿನಗರದಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿ ಎದುರು ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ
ಶಾಂತಿನಗರದಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿ ಎದುರು ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ    

ಬೆಂಗಳೂರು: ನ್ಯಾಷನಲ್ ಹೆರಾಲ್ಡ್‌ ಪ್ರಕರಣದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ವಿರುದ್ಧ ಜಾರಿ ನಿರ್ದೇಶನಾಲಯವು (ಇ.ಡಿ) ಆರೋಪಪಟ್ಟಿ ಸಲ್ಲಿಸಿರುವುದನ್ನು ಖಂಡಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಕಾರ್ಯಕರ್ತರು, ಇಲ್ಲಿನ ಶಾಂತಿ ನಗರದಲ್ಲಿರುವ ಇ.ಡಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್ ಹಾಗೂ ವಿಧಾನ ಪರಿಷತ್ತಿನಲ್ಲಿ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮದ್ ನೇತೃತ್ವದಲ್ಲಿ ಮಧ್ಯಾಹ್ನ 3ರ ವೇಳೆಗೆ ಶಾಂತಿನಗರದ ಟಿಟಿಎಂಸಿ ಬಳಿ ಸೇರಿದ ಕಾಂಗ್ರೆಸ್‌ ಕಾರ್ಯಕರ್ತರು, ಪ್ರತಿಭಟನೆಗೆ ಮುಂದಾದರು. ಅವರನ್ನು ಪೊಲೀಸರು ತಡೆದರು. ಆಗ ಕಾಂಗ್ರೆಸ್‌ ಕಾರ್ಯಕರ್ತರು ಬಸ್‌ ನಿಲ್ದಾಣದಲ್ಲಿಯೇ ಪ್ರತಿಭಟನೆ ನಡೆಸಿದರು.

ಈ ವೇಳೆ ಚಂದ್ರಶೇಖರ್‌, ‘ವಿರೋಧ ಪಕ್ಷಗಳನ್ನು ಹತ್ತಿಕ್ಕಲು ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ತುಳಿಯಲೆಂದೇ ಇಲ್ಲಸಲ್ಲದ ಆರೋಪಗಳನ್ನು ಇ.ಡಿ ಹೊರಿಸಿದೆ. ಕೇಂದ್ರದ ಈ ನಡೆಯ ವಿರುದ್ಧ ತೀವ್ರ ಹೋರಾಟ ನಡೆಸುತ್ತೇವೆ’ ಎಂದು ಹೇಳಿದರು.

ADVERTISEMENT

ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಚಿತ್ರವಿದ್ದ ಫಲಕಗಳನ್ನು ಹಿಡಿದಿದ್ದ ಕಾಂಗ್ರೆಸ್‌ ಕಾರ್ಯಕರ್ತರು, ಕೇಂದ್ರ ಸರ್ಕಾರ, ಬಿಜೆಪಿ ಹಾಗೂ ಇ.ಡಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆ ನಿಲ್ಲಿಸುವಂತೆ ಪೊಲೀಸರು ಮನವಿ ಮಾಡಿದರು. ಆಗ ಕಾಂಗ್ರೆಸ್‌ ಕಾರ್ಯಕರ್ತರು, ಪೊಲೀಸರು ಹಾಕಿದ್ದ ತಡೆಯನ್ನು ಬೀಳಿಸಿ ಇ.ಡಿ ಕಚೇರಿಯತ್ತ ನುಗ್ಗಲು ಯತ್ನಿಸಿದರು. 

ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಬಸ್‌ಗಳಿಗೆ ತುಂಬಲು ಮುಂದಾದರು. ಇದಕ್ಕೆ ತೀವ್ರ ಪ್ರತಿರೋಧ ಒಡ್ಡಿದ್ದ ಕಾರ್ಯಕರ್ತರು ರಸ್ತೆಯ ಮೇಲೆ ಮಲಗಿದರು. ಪೊಲೀಸರು ಅವರನ್ನು ಎತ್ತೊಯ್ದು ಬಸ್‌ಗಳಿಗೆ ತುಂಬಿದರು. ಕೆಲಕಾಲ ವಶದಲ್ಲಿ ಇರಿಸಿಕೊಂಡು, ನಂತರ ಬಿಡುಗಡೆ ಮಾಡಿದರು.

ಪ್ರತಿಭಟನಾನಿರತರನ್ನು ಪೊಲೀಸರು ಎಳೆದೊಯ್ದರು –ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.