ADVERTISEMENT

ಕೆಪಿಎಸ್‌ಸಿ: ವಿಚಾರಣೆ ನಾಲ್ಕು ವಾರ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2019, 19:29 IST
Last Updated 18 ಜೂನ್ 2019, 19:29 IST

ಬೆಂಗಳೂರು: ‘1998ರ ಸಾಲಿನ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿಯಲ್ಲಿ ಪರಿಷ್ಕೃತ ಪಟ್ಟಿ ಪ್ರಕಾರ 91 ಜನ ಅಭ್ಯರ್ಥಿಗಳ ಸೇರ್ಪಡೆ ಮಾಡಿದರೆ ಉಂಟಾಗುವ ಬದಲಾವಣೆಗಳ ಬಗ್ಗೆ ಹೇಗೆ ಮುಂದುವರಿಯಬೇಕು ಎಂಬ ಬಗ್ಗೆ ಮಾರ್ಗದರ್ಶನ ನೀಡಬೇಕು’ ಎಂದು ಕೋರಿ ಕೆಪಿಎಸ್‌ಸಿ ಸಲ್ಲಿಸಿರುವ ಮನವಿ ಕುರಿತ ವಿಚಾರಣೆಯನ್ನು ಹೈಕೋರ್ಟ್‌ ನಾಲ್ಕು ವಾರ ಮುಂದೂಡಿದೆ.

ಈ ಕುರಿತಂತೆ ಬೆಂಗಳೂರಿನ ಬಿ.ವಿ.ಉಮೇಶ್‌ ಸೇರಿದಂತೆ 10ಕ್ಕೂ ಹೆಚ್ಚು ಜನರು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು ನ್ಯಾಯಮೂರ್ತಿ ರವಿ ಮಳಿಮಠ ಹಾಗೂ ನ್ಯಾಯಮೂರ್ತಿ ಎಚ್‌.ಪಿ.ಸಂದೇಶ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಏನಿದು ಅರ್ಜಿ?: ‘ಅನರ್ಹ ಅಭ್ಯರ್ಥಿಗಳನ್ನು ಕೈಬಿಟ್ಟು ಅರ್ಹ ಅಭ್ಯರ್ಥಿಗಳ ನೇಮಕ ಮಾಡಿ ಎಂದು ಹೈಕೋರ್ಟ್ 2016ರ ಜೂನ್‌ 21ರಂದು ಆದೇಶಿಸಿತ್ತು. ಈ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು. ಆದರೂ, ಸರ್ಕಾರ ಕೋರ್ಟ್ ತೀರ್ಪು ಪಾಲಿಸಿಲ್ಲ’ ಎಂದು ದೂರಿರುವ ನ್ಯಾಯಾಂಗ ನಿಂದನೆ ಅರ್ಜಿ ಇದಾಗಿದೆ.

ADVERTISEMENT

ಏತನ್ಮಧ್ಯೆ ಹೈಕೋರ್ಟ್‌ ಆದೇಶ ಪಾಲಿಸುವ ದಿಸೆಯಲ್ಲಿ ಕೆಪಿಎಸ್‌ಸಿ ಈ ಮಧ್ಯಂತರ ಅರ್ಜಿಗಳನ್ನು ಸಲ್ಲಿಸಿದೆ.

‘1998ರ ಸಾಲಿನ ಬ್ಯಾಚ್‌ನಲ್ಲಿ 91 ಜನರನ್ನು ಮೂರನೇ ಮೌಲ್ಯಮಾಪನದ ಅಂಕಗಳ ಅನುಸಾರ ಸೇರ್ಪಡೆ ಮಾಡುವುದರಿಂದ ನಾಲ್ವರು ಹಾಲಿ ಐಎಎಸ್‌ ಅಧಿಕಾರಿಗಳು ಕೆಳ ಹಂತದ ಸ್ಥಾನಕ್ಕೆ ಇಳಿಯುತ್ತಾರೆ. ಅಂತೆಯೇ ಇನ್ನೂ ಹಲವರ ಸ್ಥಾನಪಲ್ಲಟವಾಗಲಿದೆ ಮತ್ತೂ ಕೆಲವರು ಪಟ್ಟಿಯಿಂದ ಹೊರಗುಳಿಯುತ್ತಾರೆ. ಇದನ್ನು ಬಗೆಹರಿಸಲು ಮಾರ್ಗೋಪಾಯ ಸೂಚಿಸುವಂತೆ’ ಕೋರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.