ADVERTISEMENT

ಕೆಪಿಎಸ್‌ಸಿ: ಡಿಜಿಟಲ್ ಮೌಲ್ಯಮಾಪನದ ಅಂಕ ತಿರುಚಿ ಅಕ್ರಮ?

428 ಗೆಜೆಟೆಡ್‌ ಪ್ರೊಬೇಷನರಿ ಆಯ್ಕೆ ಪಟ್ಟಿ

ರಾಜೇಶ್ ರೈ ಚಟ್ಲ
Published 6 ಜನವರಿ 2020, 1:10 IST
Last Updated 6 ಜನವರಿ 2020, 1:10 IST
ಕೆಪಿಎಸ್‌ಸಿ
ಕೆಪಿಎಸ್‌ಸಿ   

ಬೆಂಗಳೂರು: ಮುಖ್ಯ ಪರೀಕ್ಷೆಯ ಡಿಜಿಟಲ್ ಮೌಲ್ಯಮಾಪನದ ಅಂಕಗಳನ್ನು ತಿರುಚುವ ಮೂಲಕ 2015ನೇ ಸಾಲಿನ 428 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ಆಯ್ಕೆಯಲ್ಲಿ ವ್ಯಾಪಕ ಅಕ್ರಮ ಎಸಗಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ ಸಿ) ಡಿ. 23ರಂದು ಪ್ರಕಟಿಸಿತ್ತು. ಅದರ ಬೆನ್ನಲ್ಲೇ, ಈ ಬಗ್ಗೆ ಶಂಕೆ ವ್ಯಕ್ತಪಡಿಸಿ 262 ಅಭ್ಯರ್ಥಿಗಳು ಕೆಪಿಎಸ್‌ಸಿಗೆ ಆಕ್ಷೇಪಣೆ ಸಲ್ಲಿಸಿದ್ದಾರೆ. ಜೊತೆಗೆ, ಪಟ್ಟಿಯನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಲು 100ಕ್ಕೂ ಹೆಚ್ಚು ಅಭ್ಯರ್ಥಿಗಳು ಸಿದ್ಧತೆ ನಡೆಸಿದ್ದಾರೆ.

ಅಲ್ಲದೆ, ಕೆಪಿಎಸ್‌ಸಿ ಸದಸ್ಯರ ಪೈಕಿ ಕೆಲವರು ಈ ಪಟ್ಟಿಯ ವಿರುದ್ಧ ಅಪಸ್ವರ ಎತ್ತಿದ್ದಾರೆ. ಈ ಮಧ್ಯೆಯೇ, ಅಭ್ಯರ್ಥಿಗಳು ಸಲ್ಲಿಸಿರುವ ಆಕ್ಷೇಪಣೆಗಳ ಪರಿಶೀಲನೆ ನಡೆಯುತ್ತಿದ್ದು,ಅಂತಿಮ ಆಯ್ಕೆ ಪಟ್ಟಿಯನ್ನು ತರಾತುರಿಯಲ್ಲಿ ಪ್ರಕಟಿಸಲು ಕೆಪಿಎಸ್‌ಸಿ ಮುಂದಾಗಿದೆ ಎಂದೂ ತಿಳಿದು ಬಂದಿದೆ.

ADVERTISEMENT

ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನಕ್ಕೆ ಆಗ್ರಹಿಸುತ್ತಿರುವ ಈ ಅಭ್ಯರ್ಥಿಗಳು, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರಿಗೂ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.

ಏನಿದು ಆರೋಪ: ‘ಮುಖ್ಯ ಪರೀಕ್ಷೆಯ ಡಿಜಿಟಲ್ ಮೌಲ್ಯಮಾಪನ ಪಾರದರ್ಶಕವಾಗಿ ನಡೆದಿಲ್ಲ. ಸ್ಕ್ಯಾನ್‌ ಮಾಡಿದ ಉತ್ತರ ಪತ್ರಿಕೆಗಳನ್ನು ಆನ್‌ಲೈನ್‌ ಮೂಲಕ ಮೌಲ್ಯಮಾಪಕರಿಗೆ ಕಳುಹಿಸಲಾಗುತ್ತದೆ. ಅವರು ತಮ್ಮ ‘ಯೂಸರ್‌ ನೇಮ್‌’ಗಳಿಗೆ ಹೊಸ ‘ಪಾಸ್‌ವರ್ಡ್‌’ಗಳನ್ನು ಅಳವಡಿಸಿಕೊಂಡು ಮೌಲ್ಯಮಾಪನ ಮಾಡಬೇಕು. ಆದರೆ, ಕೆಲವು ಮೌಲ್ಯಮಾಪಕರಿಗೆ ಕೆಪಿಎಸ್‌ಸಿ ಪರೀಕ್ಷಾ ವಿಭಾಗವೇ ಪಾಸ್‌ವರ್ಡ್‌ ಒದಗಿಸಿರುವ ಮಾಹಿತಿಯಿದೆ’ ಎಂದು ನೊಂದ ಅಭ್ಯರ್ಥಿಗಳು ದೂರಿದ್ದಾರೆ.

‘ಕೆಪಿಎಸ್‌ಸಿ ಬಳಿಯೇ ಪಾಸ್‌ವರ್ಡ್‌ ಇದ್ದುದರಿಂದ, ಮೌಲ್ಯಮಾಪಕರು ನಮೂದಿಸಿದ ಅಂಕಗಳನ್ನು ಯಾವುದೇ ಸಂದರ್ಭದಲ್ಲೂ ತಿಳಿದುಕೊಳ್ಳಲು ಮತ್ತು ತಿರುಚಲು ದಾರಿ ಮಾಡಿಕೊಟ್ಟಿದೆ. ಹೊಸ ಪಾಸ್‌ವರ್ಡ್‌ಗಳನ್ನು ತಾವಾಗಿಯೇ ಅಳವಡಿಸಿಕೊಂಡ ಮೌಲ್ಯಮಾಪಕರ ಪೈಕಿ ಕೆಲವರು, ಮೌಲ್ಯಮಾಪನದ ಬಳಿಕ ಅದನ್ನು ಅಳಿಸಿಲ್ಲ. ಇದು ಕೂಡಾ ಅಂಕ ಬದಲಿಸಲು ಅವಕಾಶ ಮಾಡಿಕೊಟ್ಟಿದೆ’ ಎನ್ನುವುದು ಅಭ್ಯರ್ಥಿಗಳ ಆರೋಪ.

‘ಮೌಲ್ಯಮಾಪನ ಕೊಠಡಿಗೆ ಪ್ರವೇಶ ನಿರ್ಬಂಧವಿದೆ. ಆದರೆ, ಕೆಪಿಎಸ್‌ಸಿ ಕೆಲವು ಸದಸ್ಯರು ಈ ಕೊಠಡಿಗೆ ಪ್ರವೇಶಿಸಿದ್ದಾರೆ. ಇದು ಕೂಡಾ ಅನುಮಾನಗಳಿಗೆ ಕಾರಣವಾಗಿದೆ. ವರ್ಷದ ಹಿಂದೆಯೇ ಡಿಜಿಟಲ್ ಮೌಲ್ಯಮಾಪನ ಪೂರ್ಣಗೊಂಡಿದ್ದು, ಆ ನಂತರ ನಿವೃತ್ತರಾದ ಕೆಪಿಎಸ್‌ಸಿ ಕೆಲವು ಸದಸ್ಯರು, ಅಂಕ ಮಾರ್ಪಾಡು ಆಗಿರುವ ಸಾಧ್ಯತೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಮುಖ್ಯ ಪರೀಕ್ಷೆ ಮತ್ತು ವ್ಯಕ್ತಿತ್ವ ಪರೀಕ್ಷೆಯಲ್ಲಿ (ಸಂದರ್ಶನ) ಗಳಿಸಿದ ಅಂಕಗಳನ್ನು ಇ–ಮೇಲ್‌ ಮೂಲಕ ಅಭ್ಯರ್ಥಿಗಳಿಗೆ ಕೆಪಿಎಸ್‌ಸಿ ಕಳುಹಿಸುತ್ತಿದೆ. ಆದರೆ, ಈ ಹಿಂದೆ (2014ನೇ ಸಾಲಿನ ನೇಮಕಾತಿ) ಅಭ್ಯರ್ಥಿಗಳು ಪರೀಕ್ಷೆ ಬರೆದ ವಿಷಯಗಳ ಅಂಕಗಳನ್ನು ಪ್ರತ್ಯೇಕ, ಪ್ರತ್ಯೇಕವಾಗಿ ನಮೂದಿಸಲಾಗಿತ್ತು. ಆದರೆ, ಈ ಬಾರಿ ಮುಖ್ಯ ಪರೀಕ್ಷೆಯಲ್ಲಿ ಗಳಿಸಿದ ಎಲ್ಲ ವಿಷಯಗಳ ಒಟ್ಟು ಅಂಕ ಮತ್ತು ವ್ಯಕ್ತಿತ್ವ ಪರೀಕ್ಷೆಯ ಅಂಕಗಳನ್ನು ಮಾತ್ರ ನಮೂದಿಸಲಾಗಿದೆ. ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿದ ಬಳಿಕ ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡುತ್ತಿದ್ದ ಕೆಪಿಎಸ್‌ಸಿ, ಈ ಬಾರಿ ಕೇವಲ ಏಳು ದಿನ ಮಾತ್ರ ನೀಡಿದೆ. ಈ ತರಾತುರಿಯ ಅಗತ್ಯವೇನು ಎಂಬ ಪ್ರಶ್ನೆಯೂ ವ್ಯಕ್ತವಾಗಿದೆ.

ಪರೀಕ್ಷಾ ನಿಯಮ ಉಲ್ಲಂಘಿಸಿ ಆಯ್ಕೆ

ಪರೀಕ್ಷಾ ನಿಯಮ ಉಲ್ಲಂಘಿಸಿದ ಕಾರಣಕ್ಕೆ ವ್ಯಕ್ತಿತ್ವ ಪರೀಕ್ಷೆಯಿಂದ ಕೆಪಿಎಸ್‌ಸಿ ಹೊರಗಿಟ್ಟಿದ್ದ 30 ಅಭ್ಯರ್ಥಿಗಳು, ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಮೆಟ್ಟಿಲೇರಿದ್ದರು. ಅಷ್ಟೇ ಅಲ್ಲ, ಕೆಎಟಿ ಆದೇಶದಂತೆ ವ್ಯಕ್ತಿತ್ವ ಪರೀಕ್ಷೆಗೆ ಅರ್ಹತೆ ಪಡೆದಿದ್ದರು. ಈ ಪೈಕಿ, ನಾಲ್ವರು ವಿವಿಧ ಹುದ್ದೆಗೆ ಆಯ್ಕೆಯಾಗಿದ್ದಾರೆ.

ಆದರೆ, ಕೆಎಟಿ ಆದೇಶದ ವಿರುದ್ಧ ಹೈಕೋರ್ಟ್‌ಗೆ ಕೆಪಿಎಸ್‌ಸಿ ಅರ್ಜಿ ಸಲ್ಲಿಸದಿರುವುದು ಚರ್ಚೆಗೆ ಗ್ರಾಸವಾಗಿದೆ. ‘ನೇಮಕಾತಿ ಪ್ರಕ್ರಿಯೆ ಇನ್ನಷ್ಟು ವಿಳಂಬ ಆಗಬಹುದೆಂಬ ಕಾರಣಕ್ಕೆ ಈ ಕ್ರಮಕ್ಕೆ ಮುಂದಾಗಿಲ್ಲ’ ಎನ್ನುವುದು ಕೆಪಿಎಸ್‌ಸಿ ಸಮರ್ಥನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.