ADVERTISEMENT

ಕೆಪಿಎಸ್‌ಸಿ | 428 ಹುದ್ದೆಗಳ ನೇಮಕಾತಿಯಲ್ಲಿ ಅವಾಂತರ: ‘ಏಕರೂಪ’ ಅಂಕ ತಂದ ಅಚ್ಚರಿ

ರಾಜೇಶ್ ರೈ ಚಟ್ಲ
Published 3 ಮಾರ್ಚ್ 2020, 18:53 IST
Last Updated 3 ಮಾರ್ಚ್ 2020, 18:53 IST
   

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) 2015ನೇ ಸಾಲಿನ 428 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ನಡೆಸಿದ ಮುಖ್ಯಪರೀಕ್ಷೆಯ ಪತ್ರಿಕೆಗಳ (ಒಟ್ಟು ಏಳು) ಪೈಕಿ, ಕೆಲವು ಪತ್ರಿಕೆಗಳಲ್ಲಿ ಅಭ್ಯರ್ಥಿಗಳು ಏಕರೂಪದ ಅಂಕ ಗಳಿಸಿದ್ದಾರೆ!

ಹಲವರಿಗೆ ಮೂರು ಪತ್ರಿಕೆಗಳಲ್ಲಿ ತಲಾ 101, ಕೆಲವರು ತಲಾ 115 ಅಂಕಗಳನ್ನು ಗಳಿಸಿದ್ದಾರೆ. ಇನ್ನೂ ಕೆಲವು ಅಭ್ಯರ್ಥಿಗಳಿಗೆ ಎರಡು ಪತ್ರಿಕೆಗಳಲ್ಲಿ ತಲಾ 103, ಇನ್ನೂ ಕೆಲವರಿಗೆ ತಲಾ 92 ಅಂಕಗಳು ಬಂದಿದೆ. ಅನೇಕ ಅಭ್ಯರ್ಥಿಗಳು ಸಮಾನವಾಗಿ ಗಳಿಸಿರುವ ಅಂಕಪಟ್ಟಿಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ.

2015ನೇ ಸಾಲಿನ ನೇಮಕಾತಿಯಲ್ಲಿ ಅಕ್ರಮ‌ ನಡೆದಿದೆ ಎಂದು ಅನುಮಾನಿಸಿ ಅಭ್ಯರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದು, ಕೆಪಿಎಸ್‌ಸಿ ಮತ್ತು ರಾಜ್ಯ ಸರ್ಕಾರಕ್ಕೆ ದ್ವಿಸದಸ್ಯ ಪೀಠ ನೋಟಿಸ್ ನೀಡಿದೆ. ಅದರ ಬೆನ್ನಲ್ಲೆ, ಮುಖ್ಯಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿ, ಹುದ್ದೆಗೆ ಆಯ್ಕೆ ಆಗಬಹುದೆಂಬ ನಿರೀಕ್ಷೆಯಲ್ಲಿದ್ದ ಹಲವು ಅಭ್ಯರ್ಥಿಗಳು ಪರೀಕ್ಷೆಗಳಲ್ಲಿ ತಮಗೆ ಬಂದ ಅಂಕಗಳನ್ನು ಕಂಡು ಅಚ್ಚರಿಗೊಂಡಿದ್ದಾರೆ. ಹುದ್ದೆಗೆ ಆಯ್ಕೆಯಾಗದೆ ನಿರಾಶೆ ಅನುಭವಿಸುತ್ತಿರುವ ಅಭ್ಯರ್ಥಿಗಳಿಗೆ ‘ಸಮಾನ ಅಂಕ ನಾವು ಗಳಿಸಿದ್ದೇ ಅಥವಾ ಡಿಜಿಟಲ್‌ ಮೌಲ್ಯಮಾಪನದ ‘ಕೃಪೆ’ಯೇ’ ಎಂಬ ಅನುಮಾನ ಕಾಡುತ್ತಿದೆ.

ADVERTISEMENT

‘ಮೊದಲು ಒಟ್ಟು ಅಂಕಗಳನ್ನು ಕೆಪಿಎಸ್‌ಸಿ ಅಭ್ಯರ್ಥಿಗಳಿಗೆ ಕಳುಹಿಸಿತ್ತು. ಇದೀಗ, ವಿಷಯವಾರು ಗಳಿಸಿದ ಅಂಕಪಟ್ಟಿಯನ್ನು ಕಳುಹಿಸುತ್ತಿದೆ. ತಲಾ 250 ಅಂಕಗಳ ಏಳು ಕಡ್ಡಾಯ ಪತ್ರಿಕೆಗಳಲ್ಲಿ ಮೂರರಲ್ಲಿ ಸಮಾನ ಅಂಕಗಳು ಬಂದಿವೆ. ಹೀಗೆ ಅಂಕ ನಿರೀಕ್ಷೆ ಇರಲಿಲ್ಲ. ಕೆಪಿಎಸ್‌ಸಿ ಮೊದಲು ಕಳುಹಿಸಿದ್ದ ಒಟ್ಟು ಅಂಕಗಳನ್ನು ಸರಿ ಹೊಂದಿಸಲು, ಅಂಕಗಳನ್ನು ಹಂಚಿಕೆ ಮಾಡಿದಂತೆ ಭಾಸವಾಗುತ್ತಿದೆ’ ಎಂದು ಕೆಲವರು ಸಂದೇಹ ವ್ಯಕ್ತಪಡಿಸಿದ್ದಾರೆ.

ಮತ್ತೊಂದು ಅವಕಾಶ: 2011ನೇ ಸಾಲಿನಲ್ಲಿ ಗೆಜೆಟೆಡ್‌ ಪ್ರೊಬೇಷನರಿ ಪರೀಕ್ಷೆ ಬರೆದ ಎಲ್ಲ ಅಭ್ಯರ್ಥಿಗಳಿಗೆ 2017ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ಆಯ್ಕೆ ಪರೀಕ್ಷೆ ಬರೆಯಲು ರಾಜ್ಯ ಸರ್ಕಾರ ಮತ್ತೊಮ್ಮೆ ವಿಶೇಷ ಅವಕಾಶ ನೀಡಿದೆ.

ಕೆಪಿಎಸ್‌ಸಿಗೇ ‘ತಂತ್ರಾಂಶ’ ಗೊತ್ತಿಲ್ಲ!
ಮುಖ್ಯಪರೀಕ್ಷೆಯ ಡಿಜಿಟಲ್ ಮೌಲ್ಯಮಾಪನಕ್ಕೆ ಯಾವ ತಂತ್ರಾಂಶ (ಸಾಫ್ಟ್‌ವೇರ್)ವನ್ನು ಬಳಸಲಾಗಿದೆ ಎನ್ನುವ ಮಾಹಿತಿ ಕೆಪಿಎಸ್‌ಸಿ ಬಳಿಯಲ್ಲೇ ಇಲ್ಲ. ಮಾಹಿತಿ ಹಕ್ಕಿನಡಿ ಕೇಳಿದ ಪ್ರಶ್ನೆಗೆ ಹೀಗೆ ಉತ್ತರಿಸಿರುವ ಕೆಪಿಎಸ್‌ಸಿ, ‘ಹೊರಗುತ್ತಿಗೆ ಸಂಸ್ಥೆಯ ಮೂಲಕ ಮೌಲ್ಯಮಾಪನ ನೆರವೇರಿಸಲಾಗಿದೆ’ ಎಂದಿದೆ. ಕಚೇರಿಯಲ್ಲಿ ಆಂತರಿಕವಾಗಿ ಬಳಸುವ ತಂತ್ರಾಂಶವನ್ನು ಆಯೋಗದ ಗಣಕ ಕೇಂದ್ರದ ಸಿಬ್ಬಂದಿ ನಿರ್ವಹಿಸುತ್ತಾರೆ. ಕೆಲವು ಸೇವೆಗಳನ್ನು ಹೊರಗುತ್ತಿಗೆ ಆಧಾರದಲ್ಲಿ ವಿವಿಧ ಸಂಸ್ಥೆಗಳಿಂದ ಪಡೆಯಲಾಗುತ್ತಿದೆ. ಮೌಲ್ಯಮಾಪನ ಅತ್ಯಂತ ಸೂಕ್ಷ್ಮ ಮತ್ತು ಗೋಪ್ಯ ಕಾರ್ಯವಾಗಿರುವುದರಿಂದ ಯಾವುದೇ ಟೆಂಡರ್ ಕರೆಯುವುದಿಲ್ಲ’ ಎಂದೂ ಕೆಪಿಎಸ್‌ಸಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.