ADVERTISEMENT

ಕೆಪಿಎಸ್‌ಸಿ: ಅಕ್ರಮ ತಡೆಗೆ ಕಣ್ಗಾವಲು, ಅಭ್ಯರ್ಥಿ ಖಾತ್ರಿಗೆ ಐರಿಸ್‌ ಸ್ಕ್ಯಾನ್‌!

ಬ್ಲೂಟೂತ್‌ ಪತ್ತೆಗೆ ಫ್ರಿಸ್ಕಿಂಗ್

ರಾಜೇಶ್ ರೈ ಚಟ್ಲ
Published 9 ನವೆಂಬರ್ 2022, 19:41 IST
Last Updated 9 ನವೆಂಬರ್ 2022, 19:41 IST
ಕೆಪಿಎಸ್‌ಸಿ
ಕೆಪಿಎಸ್‌ಸಿ   

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕಳ್ಳ ಮಾರ್ಗದ ಮೂಲಕ ಎದುರಿಸುವ ಅಭ್ಯರ್ಥಿಗಳ ಪತ್ತೆಗೆ ಅತ್ಯಾಧುನಿಕ ‘ಕಣ್ಗಾವಲು’ ವ್ಯವಸ್ಥೆ ಅಳವಡಿಸಲು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಮುಂದಾಗಿದೆ.

ಪರೀಕ್ಷೆಗೆ ಅಸಲಿ ಅಭ್ಯರ್ಥಿ ಬದಲು ನಕಲಿ ವ್ಯಕ್ತಿ ಹಾಜರಾಗುವುದು, ಬ್ಲೂಟೂತ್‌ ಸಾಧನ ಬಳಕೆ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿದೆ. ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ, ಪರೀಕ್ಷೆ ಆರಂಭಕ್ಕೂ ಮೊದಲೇ ಅಭ್ಯರ್ಥಿಗಳ ನೈಜತೆ ಪರಿಶೀಲಿಸಲು ಐರಿಸ್‌ (ಕಣ್ಣಿನ ಪಾಪೆ) ಸ್ಕ್ಯಾನ್‌ ಮತ್ತು ದೇಹದ ಯಾವುದೇ ಭಾಗದಲ್ಲಿ ಸೂಕ್ಷ್ಮ ಎಲೆಕ್ಟ್ರಾನಿಕ್ ಉಪಕರಣ ಹೊಂದಿದ್ದರೂ ಶೋಧಿಸುವ (ಫ್ರಿಸ್ಕಿಂಗ್) ಸಾಧನವನ್ನು ಪರೀಕ್ಷಾ ಕೇಂದ್ರದಲ್ಲಿ ಅಳವಡಿಸಲು ಕೆಪಿಎಸ್‌ಸಿ ತೀರ್ಮಾನಿಸಿದೆ.

ಬ್ಲೂ ಟೂತ್‌ ಬಳಸಿ ಪರೀಕ್ಷೆ ಬರೆದು ಲೋಕೋಪಯೋಗಿ ಇಲಾಖೆಯ (ಪಿಡಬ್ಲ್ಯುಡಿ) ಸಹಾಯಕ ಎಂಜಿನಿಯರ್‌ ಹುದ್ದೆ ಗಿಟ್ಟಿಸಲು ಯತ್ನಿಸಿದ ಮೂವರನ್ನು ಕೆಪಿಎಸ್‌ಸಿ ಡಿಬಾರ್‌ ಮಾಡಿದೆ. ಎಸ್‌ಡಿಎ, ಎಫ್‌ಡಿಎ ನೇಮಕಾತಿಗೆ ನಡೆದ ಪರೀಕ್ಷೆಯಲ್ಲೂ ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ನಡೆಯುವ ಇಂಥ ಅಕ್ರಮಗಳನ್ನು ತಡೆಯಲು ಇದೇ ಮೊದಲ ಬಾರಿಗೆ ಹೊಸ ವ್ಯವಸ್ಥೆ ಅಳವಡಿಸಲು ಉದ್ದೇಶಿಸಲಾಗಿದೆ.

ADVERTISEMENT

ಈ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಕೆಪಿಎಸ್‌ಸಿ ಕಾರ್ಯದರ್ಶಿ ವಿಕಾಸ್‌ ಕಿಶೋರ್‌ ಸುರಳ್ಕರ್‌, ‘ಸ್ಪರ್ಧಾತ್ಮಕ ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಅತಿ ಸೂಕ್ಷ್ಮ, ಸೂಕ್ಷ್ಮವೆಂದು ಗುರುತಿಸಿದ ಪರೀಕ್ಷಾ ಕೇಂದ್ರಗಳ ಮೇಲೆ ಇನ್ನು ಮುಂದೆ ನಮ್ಮ ಕೇಂದ್ರ ಕಚೇರಿಯಿಂದಲೇ ಕಣ್ಣಿಡಲು ತೀರ್ಮಾನಿಸಲಾಗಿದೆ. ಆ ಮೂಲಕ, ಪರೀಕ್ಷಾ ಹಂತದಲ್ಲಿ ಯಾವುದೇ ಅಕ್ರಮ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು’ ಎಂದರು.

‘ಪರೀಕ್ಷೆ ನಡೆಸಲು ಆಯ್ಕೆ ಮಾಡುವ ಕೇಂದ್ರಗಳ ಮ್ಯಾಪಿಂಗ್‌ ನಡೆಸಿ ಸೂಕ್ಷ್ಮ, ಅತಿಸೂಕ್ಷ ಕೇಂದ್ರಗಳನ್ನು ಗುರುತಿಸುವ ಕೆಲಸ ಈಗಾಗಲೇ ಆರಂಭವಾಗಿದೆ. ಅಭ್ಯರ್ಥಿಗಳ ನೈಜತೆ ಪರಿಶೀಲನೆ, ಸಿಟಿಟಿವಿ ಕ್ಯಾಮೆರಾ ಅಳವಡಿಕೆ, ಎಲೆಕ್ಟ್ರಾನಿಕ್ ಉಪಕರಣ ಇದೆಯೇ ಎಂದು ಶೋಧಿಸುವ ವ್ಯವಸ್ಥೆಗಳನ್ನು ಯಾವ ಕೇಂದ್ರಗಳಲ್ಲಿ ಅಳವಡಿಸಬೇಕೆಂದು ಪರೀಕ್ಷಾ ಕೇಂದ್ರಗಳ ಸೂಕ್ಷ್ಮತೆಯನ್ನು ತಿಳಿದುಕೊಂಡ ಬಳಿಕ ನಿರ್ಧರಿಸಲಾಗುವುದು’ ಎಂದು ಹೇಳಿದರು.

‘ಪರೀಕ್ಷಾ ಕೇಂದ್ರವಾಗಿ ಆಯ್ಕೆ ಮಾಡುವ ಬಹುತೇಕ ಶೈಕ್ಷಣಿಕ ಸಂಸ್ಥೆಗಳಲ್ಲಿ ಈಗಾಗಲೇ ಸಿಸಿಟಿವಿ ಕ್ಯಾಮೆರಾಗಳಿವೆ. ಆದರೆ, ಅವುಗಳನ್ನು ಶಾಲಾ ಆಡಳಿತ ಮಂಡಳಿಗಳೇ ನಿರ್ವಹಿಸುತ್ತಿವೆ. ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆದರೆ ಅಲ್ಲಿನ ಸಿಸಿಟಿವಿ ಕ್ಯಾಮೆರಾದ ವಿಡಿಯೊ ತುಣುಕುಗಳನ್ನು ಪಡೆದು ಪರಿಶೀಲಿಸಲಾಗುತ್ತದೆ. ಆದರೆ, ಕೆಲವು ಸಂಸ್ಥೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಕೆಲಸವೇ ಮಾಡುತ್ತಿಲ್ಲ. ಇನ್ನೂ ಕೆಲವು ಸಂಸ್ಥೆಯವರು ವಿಡಿಯೊ ತುಣುಕುಗಳನ್ನು ಸಂಗ್ರಹಿಸಿಡುತ್ತಿಲ್ಲ. ಈ ಕಾರಣಕ್ಕೆ ಖಾಸಗಿ ವೃತಿಪರ ಸಂಸ್ಥೆಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಗುತ್ತಿಗೆ ನೀಡಿ, ಪರೀಕ್ಷಾ ವ್ಯವಸ್ಥೆಯ ಮೇಲೆ ನಿಗಾ ವಹಿಸಲು ಉದ್ದೇಶಿಸಲಾಗಿದೆ. ಎಲೆಕ್ಟ್ರಾನಿಕ್‌ ಉಪಕರಣವಿದೆಯೇ ಎಂದು ಪುರುಷ ಮತ್ತು ಮಹಿಳಾ ಅಭ್ಯರ್ಥಿಯ ಇಡೀ ದೇಹವನ್ನು ಶೋಧಿಸುವ (ಫ್ರಿಸ್ಕಿಂಗ್) ಪ್ರತ್ಯೇಕ ವ್ಯವಸ್ಥೆಯನ್ನೂ ಮಾಡಲಾಗುವುದು’ ಎಂದು ವಿವರ ನೀಡಿದರು.

ಪರೀಕ್ಷೆ – ಏನೆಲ್ಲ ಇರಲಿದೆ?

* ಪರೀಕ್ಷೆ ವೇಳೆಯಲ್ಲಿ ಹೊರಜಗತ್ತಿನ ಸಂಪರ್ಕದಿಂದಅಭ್ಯರ್ಥಿಯನ್ನು ಬೇರ್ಪಡಿಸಲು ಜಾಮರ್‌ ಅಳವಡಿಕೆ

* ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಸಿಸಿಟಿವಿ ಕ್ಯಾಮೆರಾ ಮೂಲಕ ಚಿತ್ರೀಕರಿಸಿ, ಕೆಪಿಎಸ್‌ಸಿ ಕೇಂದ್ರ ಕಚೇರಿಯಲ್ಲಿ ನೇರ ವೀಕ್ಷಣೆ

* ಕೇಂದ್ರೀಯ ಮೇಲ್ವಿಚಾರಣೆಯಲ್ಲಿ ಇನ್ನು ಮುಂದೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆ

*
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ ತಡೆಯುವ ಉದ್ದೇಶದಿಂದ ಅಭ್ಯರ್ಥಿಗಳು, ಪರೀಕ್ಷಾ ಕೇಂದ್ರಗಳ ಮೇಲೆ ಕಣ್ಣಿಡುವ ವ್ಯವಸ್ಥೆಯ ಸೇವೆ ಪಡೆಯಲು ಅಲ್ಪಾವಧಿ ಟೆಂಡರ್‌ ಕರೆಯಲಾಗಿದೆ.
–ವಿಕಾಸ್‌ ಕಿಶೋರ್‌ ಸುರಳ್ಕರ್‌, ಕಾರ್ಯದರ್ಶಿ, ಕೆಪಿಎಸ್‌ಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.