ADVERTISEMENT

ಕೆಪಿಎಸ್‌ಸಿಗೆ ತಟ್ಟದ 'ಕೋವಿಡ್ 19'!

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗಳಿಗೆ 22ರಂದು ಪೂರ್ವಭಾವಿ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2020, 20:44 IST
Last Updated 18 ಮಾರ್ಚ್ 2020, 20:44 IST
   

ಬೆಂಗಳೂರು: ಕೋವಿಡ್ 19 ಸೋಂಕು ಹರಡುತ್ತಿರುವ ಮಧ್ಯೆಯೇ ಕರ್ನಾಟಕ ಲೋಕಸೇವಾ ಆಯೋಗ ,(ಕೆಪಿಎಸ್ ಸಿ), ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್‌ 'ಎ' ವೃಂದದ 24 ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಹುದ್ದೆಗಳಿಗೆ ನೇಮಕಾತಿಗೆಇದೇ 22ರಂದು (ಭಾನುವಾರ) ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ನಿರ್ಧರಿಸಿದೆ.

ಇದೇ 16ರಂದು ಪ್ರಕಟಣೆ ಹೊರಡಿಸಿರುವ ಕೆಪಿಎಸ್‌ಸಿ, ನೇಮಕಾತಿಗೆ ಪೂರ್ವಭಾವಿ ಪರೀಕ್ಷೆ ಒಎಂಆರ್ ಮಾದರಿಯಲ್ಲಿ ಬೆಂಗಳೂರು ಕೇಂದ್ರದಲ್ಲಿ ನಡೆಯಲಿದೆ. ಅರ್ಜಿ ಸಲ್ಲಿರುವ ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಇದೇ 17ರಿಂದ ಆಯೋಗದ ವೆಬ್ ಸೈಟ್ ನಿಂದಡೌನ್ ಲೋಡ್ ಮಾಡಿಕೊಳ್ಳಬಹುದು ಎಂದು ತಿಳಿಸಿದೆ.

ಆಯೋಗವು ಸ್ಪರ್ಧಾತ್ಮಕ ಪರೀಕ್ಷೆಗೆ ಏಕೈಕ ಕೇಂದ್ರವಾಗಿ ಬೆಂಗಳೂರನ್ನು ಮಾತ್ರ ಆಯ್ಕೆ ಮಾಡಿರುವುದು ಮತ್ತು ಕೋವಿಡ್ 19 ಸೋಂಕು ಹರಡುತ್ತಿರುವ ಆತಂಕದ ನಡುವೆಯೇ ಪರೀಕ್ಷೆ ನಡೆಸಲು ಮುಂದಾಗಿರುವುದಕ್ಕೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ರಾಜ್ಯದಾದ್ಯಂತ ಸಾವಿರಾರು ಉದ್ಯೋಗಾಂಕ್ಷಿಗಳು ಹುದ್ದೆಗೆ ಅರ್ಜಿ ಸಲ್ಲಿಸಿದ್ದು, ಬೆಂಗಳೂರಿನ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಕೋವಿಡ್ 19 ಸೋಂಕು ತಡೆಯುವ ಉದ್ದೇಶದಿಂದ ರಾಜ್ಯ ಸರ್ಕಾರ ಜನದಟ್ಟಣೆ ನಿಯಂತ್ರಣಕ್ಕೆ ಹಲವು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿರುವಾಗ ಕೆಪಿಎಸ್ ಸಿ ಯ ಈ ನಡೆ ಸರಿಯಲ್ಲ. ಪರೀಕ್ಷೆಯ ದಿನಾಂಕ ಮುಂದೂಡಬೇಕು ಎಂದು ಪರೀಕ್ಷಾರ್ಥಿಗಳು ಆಗ್ರಹಿಸಿದ್ದಾರೆ

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಕೆಪಿಎಸ್‌ಸಿ ಕಾರ್ಯದರ್ಶಿಗೆ ಕರೆ ಮಾಡಿದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.