ADVERTISEMENT

KPSC Exams: ಪರೀಕ್ಷೆಗಳನ್ನು ಮುಂದೂಡಿದ ಕೆಪಿಎಸ್‌ಸಿ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2024, 15:49 IST
Last Updated 13 ಸೆಪ್ಟೆಂಬರ್ 2024, 15:49 IST
KPSC
KPSC   

ಬೆಂಗಳೂರು: ವಿವಿಧ ಇಲಾಖೆಗಳ ಗ್ರೂಪ್‌–ಬಿ ಹುದ್ದೆಗಳ ನೇಮಕಾತಿಗಾಗಿ ಇದೇ ಶನಿವಾರ (ಸೆ.14), ಭಾನುವಾರ (ಸೆ.15) ನಡೆಯಬೇಕಿದ್ದ ಕನ್ನಡ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ಶುಕ್ರವಾರ ಮುಂದೂಡಿದೆ.

ಇದೇ ಹುದ್ದೆಗಳ ನೇಮಕಾತಿಗಾಗಿ ಇತರೆ ದಿನಾಂಕಗಳಲ್ಲಿ ನಡೆಯಬೇಕಿದ್ದ ವಿಷಯವಾರು ಪತ್ರಿಕೆಗಳ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನೂ ಮುಂದೂಡಲಾಗಿದೆ. 

ಗ್ರೂಪ್‌ ಬಿ ಮತ್ತು ಸಿ ಹುದ್ದೆಗಳ ನೇಮಕಾತಿಯಲ್ಲಿ ಎಲ್ಲ ಪ್ರವರ್ಗಗಳ ಅಭ್ಯರ್ಥಿಗಳಿಗೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿಯನ್ನು ಮೂರು ವರ್ಷ ಸಡಿಲಿಸಿ ಇದೇ 10ರಂದು ರಾಜ್ಯ ಸರ್ಕಾರ ಆದೇಶಿಸಿತ್ತು.

ADVERTISEMENT

ಈ ವಯೋಮಿತಿ ಸಡಿಲಿಕೆಯು ಒಂದು ಬಾರಿ ಮಾತ್ರ ಅನ್ವಯವಾಗಲಿದ್ದು, ಈಗಾಗಲೇ ಹೊರಡಿಸಲಾಗಿರುವ ನೇರ ನೇಮಕಾತಿ ಅಧಿಸೂಚನೆಗಳು ಮತ್ತು ಮುಂದಿನ ಒಂದು ವರ್ಷದಲ್ಲಿ ನಡೆಯಲಿರುವ ನೇಮಕಾತಿಗಳಲ್ಲಿ ಇದನ್ನು ಪಾಲಿಸಬೇಕು ಎಂದು ಸರ್ಕಾರ ಆದೇಶಿಸಿತ್ತು. ಈ ಕಾರಣದಿಂದ ಶನಿವಾರ ಮತ್ತು ಭಾನುವಾರ ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಗರಿಷ್ಠ ವಯೋಮಿತಿ ಮೂರು ವರ್ಷ ಸಡಿಲಿಕೆ ಅನ್ವಯವಾಗುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡುವ ಉದ್ದೇಶದಿಂದ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಅಭ್ಯರ್ಥಿಗಳು ಹೊಸದಾಗಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ನಂತರ ಪರೀಕ್ಷೆಗಳ ದಿನಾಂಕವನ್ನು ನಿಗದಿ ಮಾಡಲಾಗುತ್ತದೆ ಎಂದು ಪ್ರಕಟಣೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.