ADVERTISEMENT

ಕೆಪಿಎಸ್‌ಸಿ ಎಡವಟ್ಟು ತೆರೆದಿಟ್ಟ ಐಸಿಐ!

2015ರ ನೇಮಕಾತಿ: ಡಿಜಿಟಲ್‌ ಮೌಲ್ಯಮಾಪನದಲ್ಲಿ ಅಕ್ರಮ ಆರೋಪ

ರಾಜೇಶ್ ರೈ ಚಟ್ಲ
Published 16 ಜೂನ್ 2020, 19:30 IST
Last Updated 16 ಜೂನ್ 2020, 19:30 IST
ಉದ್ಯೋಗ ಸೌಧ
ಉದ್ಯೋಗ ಸೌಧ   

ಬೆಂಗಳೂರು: ‘2015ನೇ ಸಾಲಿನಲ್ಲಿ ನಡೆದ ಗೆಜೆಟೆಡ್‌ ಪ್ರೊಬೇಷನರಿ 428 ಹುದ್ದೆಗಳ ನೇಮಕಾತಿಯ ಮುಖ್ಯ ಪರೀಕ್ಷೆಯ ಡಿಜಿಟಲ್‌ ಮೌಲ್ಯಮಾಪನದಲ್ಲಿ ಅಕ್ರಮ ನಡೆದಿರುವ ಸಾಧ್ಯತೆ ದಟ್ಟವಾಗಿದ್ದು, ಸತ್ಯಶೋಧನಾ ಸಮಿತಿ ರಚಿಸಿ ತನಿಖೆ ನಡೆಸಬೇಕು’ ಎಂದು ದೇಶದ ಪ್ರತಿಷ್ಠಿತ ಖಾಸಗಿ ಸೈಬರ್‌ ಕಾನೂನು ಸಲಹಾ ಸಂಸ್ಥೆ ಇಂಡಿಯನ್‌ ಸೈಬರ್‌ ಇನ್‌ಸ್ಟಿಟ್ಯೂಟ್‌ (ಐಸಿಐ) ತನ್ನ ವರದಿಯಲ್ಲಿ ಪ್ರತಿಪಾದಿಸಿದೆ.

‘ಡಿಜಿಟಲ್‌ ಮೌಲ್ಯಮಾಪನದಲ್ಲಿ ಅಂಕಗಳನ್ನು ತಿರುಚಲಾಗಿದೆ’ ಎಂದು ದೂರಿ 52 ಅಭ್ಯರ್ಥಿಗಳು ಸಲ್ಲಿಸಿರುವ ರಿಟ್‌ ಅರ್ಜಿ ಹೈಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿದೆ. ಈ ಮಧ್ಯೆ, ಈಅಭ್ಯರ್ಥಿಗಳ ಕೋರಿಕೆಯಂತೆ, ಆರ್‌ಟಿಐ ಮೂಲಕ ಪಡೆದಿರುವ ಮತ್ತು ಕೆಪಿಎಸ್‌ಸಿ ನೀಡಿದ ಮುಖ್ಯಪರೀಕ್ಷೆಯ ಫಲಿತಾಂಶದ ದಾಖಲೆಗಳನ್ನು ತಜ್ಞರ ಮೂಲಕ ಅಧ್ಯಯನ ಮಾಡಿಸಿ ಐಸಿಐ ವರದಿ ನೀಡಿದೆ. ಈ ವರದಿಯನ್ನು ಹೈಕೋರ್ಟ್‌ಗೂ ಸಲ್ಲಿಸಲಾಗಿದೆ.

ಡಿಜಿಟಲ್‌ ಮೌಲ್ಯಮಾಪನದ ಅಂಕಗಳನ್ನು ಅಭ್ಯರ್ಥಿಗಳಿಗೆ ಕಳುಹಿಸುವ ಸಂದರ್ಭದಲ್ಲಿ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಹಲವು ಎಡವಟ್ಟು ಎಸಗಿರುವುದನ್ನು ಐಸಿಐ ಪಟ್ಟಿ ಮಾಡಿದೆ.

ADVERTISEMENT

ವರದಿಯಲ್ಲಿ ಏನಿದೆ: 2015ರ ಮುಖ್ಯಪರೀಕ್ಷೆಯ ಡಿಜಿಟಲ್‌ ಮೌಲ್ಯಮಾಪನವನ್ನು ಟಿಸಿಎಸ್‌ ಕಂಪನಿಗೆ ಹೊರಗುತ್ತಿಗೆ ನೀಡಲಾಗಿದೆ. ಕಂಪನಿಯು ‘ಟಿಸಿಎಸ್‌ ಐಯಾನ್‌’ ಸಾಫ್ಟ್‌ವೇರ್ ಮೂಲಕ ಈ ಪ್ರಕ್ರಿಯೆಯನ್ನು ನಿರ್ವಹಿಸುತ್ತದೆ. ಮುಖ್ಯ ಪರೀಕ್ಷೆಯ ಅಂಕಗಳನ್ನು ಪಾಸ್‌ವರ್ಡ್‌ ಸುರಕ್ಷತೆ ಇರುವ ಪಿಡಿಎಫ್‌ ಸ್ವರೂಪದಲ್ಲಿ ಕಳುಹಿಸಲಾಗುತ್ತದೆ ಎಂದು ಟಿಸಿಎಸ್ ಒಪ್ಪಂದದ ದಾಖಲೆಗಳಲ್ಲಿ ತಿಳಿಸಿತ್ತು.

ಅಭ್ಯರ್ಥಿಗಳಿಗೆ ಕೆಪಿಎಸ್‌ಸಿ ಕಳುಹಿಸಿದ ಅಂಕಗಳು ನಾಲ್ಕು ಡೆಸಿಮಲ್‌ (ಉದಾ: 987.0000 ಅಂದರೆ, ಡಾಟ್ ಆದ ಬಳಿಕ ನಾಲ್ಕು ಡೆಸಿ
ಮಲ್‌ ಸ್ಥಾನಗಳು) ಒಳಗೊಂಡಿದೆ. ಇದನ್ನು ಅಧ್ಯಯನ ನಡೆಸಿರುವ ಐಸಿಐ ತಜ್ಞರು, ಬ್ಯಾಕ್‌ ಎಂಡ್‌ನಿಂದ (ಹಿಂಬಾಗಿಲು) ಕೊಟ್ಟಾಗ ಮಾತ್ರ ಈ ರೀತಿ ಅಂಕಗಳು ದಾಖಲಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. (2014ನೇ ಸಾಲಿನಲ್ಲೂ ಮುಖ್ಯಪರೀಕ್ಷೆಯ ಡಿಜಿಟಲ್ ಮೌಲ್ಯಮಾಪನ ನಡೆದಿತ್ತು. ಆದರೆ, ಅಭ್ಯರ್ಥಿಗಳಿಗೆ ಅಂಕಗಳು ಈ ರೀತಿಯಲ್ಲಿ ಬಂದಿರಲಿಲ್ಲ)

ಹಿಂಬಾಗಿಲಿನ ಮೂಲಕ ಅಂಕಗಳನ್ನು ಪಡೆದು ಅದನ್ನು ಬದಲಿಸಬಹುದಾದ ನೋಟ್‌ ಪ್ಯಾಡ್‌ಗೆ ಕಳುಹಿಸಿ ನಂತರ ಪಿಡಿಎಫ್‌ ಸ್ವರೂಪದಲ್ಲಿ (ಪಾಸ್‌ವರ್ಡ್ ರಹಿತ) ಅಭ್ಯರ್ಥಿಗಳಿಗೆ ಕೆಪಿಎಸ್‌ಸಿ ಕಳುಹಿಸಿದೆ. ಅಲ್ಲದೆ, ಮುಖ್ಯ ಪರೀಕ್ಷೆ ಬರೆದ 8,000ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಬೇರೆ ಬೇರೆ ಮೂಲಗಳಿಂದ ಅಂಕಗಳನ್ನು ರವಾನಿಸಲಾಗಿದೆ. ಕೆಲವು ಅಭ್ಯರ್ಥಿಗಳಿಗೆ ಕೆಪಿಎಸ್‌ಸಿಯ ಅಧಿಕೃತ ಇ–ಮೇಲ್‌ kpsc-ka@nic.in ನಿಂದ ಬಂದಿದೆ. ಇನ್ನೂ ಕೆಲವರಿಗೆ ಅನಧಿಕೃತವಾದ ಇ–ಮೇಲ್‌ ಐಡಿ psckar@gmail. com ಮೂಲಕ ಕಳುಹಿಸಲಾಗಿದೆ. ಮುಖ್ಯ ಪರೀಕ್ಷೆ ಮತ್ತು ವ್ಯಕ್ತಿತ್ವ ಪರೀಕ್ಷೆಯ (ಸಂದರ್ಶನ) ಅಂಕಗಳನ್ನು ಎರಡು ಪ್ರತ್ಯೇಕ ಇ– ಮೇಲ್‌ ಸರ್ವರ್‌ಗಳಿಂದ (ಜಿ ಮೇಲ್‌ ಮತ್ತು ಎನ್‌ಐಸಿ) ಕಳುಹಿಸಲಾಗಿದೆ. ಕೆಪಿಎಸ್‌ಸಿಯ ಈ ನಡೆ ಅನುಮಾನಗಳಿಗೆ ಕಾರಣವಾಗುವಂತಿದೆ ಎಂಬ ಅಂಶ ವರದಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.