ADVERTISEMENT

ಕೆಪಿಎಸ್‌ಸಿ: ಅಂತಿಮ ಪಟ್ಟಿ ವಿಳಂಬಕ್ಕೆ ಸಿಟ್ಟು

ವಿವಿಧ ಇಲಾಖೆಯ ಗ್ರೂಪ್‌ ‘ಸಿ’ ಹುದ್ದೆ * ಮೂರು ವರ್ಷ ಹಿಂದೆ ಹೊರಡಿಸಿದ್ದ ಅಧಿಸೂಚನೆ

​ಪ್ರಜಾವಾಣಿ ವಾರ್ತೆ
Published 11 ಮೇ 2020, 20:00 IST
Last Updated 11 ಮೇ 2020, 20:00 IST
ಕರ್ನಾಟಕ ಲೋಕಸೇವಾ ಆಯೋಗ ಕಚೇರಿ
ಕರ್ನಾಟಕ ಲೋಕಸೇವಾ ಆಯೋಗ ಕಚೇರಿ    

ಬೆಂಗಳೂರು: ಸರ್ಕಾರದ ನಾನಾ ಇಲಾಖೆಗಳಲ್ಲಿ ಖಾಲಿ ಇರುವ ಗ್ರೂಪ್‌ ‘ಸಿ’ ತಾಂತ್ರಿಕೇತರ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಮೂರು ವರ್ಷಗಳ ಹಿಂದೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದ್ದರೂ ಅಂತಿಮ ಪಟ್ಟಿ ಪ್ರಕಟಿಸದೆ ವಿಳಂಬ ಧೋರಣೆ ಅನುಸರಿಸುತ್ತಿರುವುದು ಉದ್ಯೋಗಾಕಾಂಕ್ಷಿಗಳ ಸಿಟ್ಟಿಗೆ ಕಾರಣವಾಗಿದೆ.

ಈ ಹುದ್ದೆಗಳಿಗೆ ಕೆಪಿಎಸ್‌ಸಿ 2017ರ ಮಾರ್ಚ್ 1ರಂದು ಅಧಿಸೂಚನೆ ಹೊರಡಿಸಿ, ಅದೇ ವರ್ಷ ಜೂನ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿತ್ತು. ಸರಿಸುಮಾರು ಒಂದು ವರ್ಷದ ನಂತರ 1:5 ಅನುಪಾತದಲ್ಲಿ ಆಯ್ಕೆ ಪಟ್ಟಿಯನ್ನೂ ಪ್ರಕಟಿಸಿತ್ತು. ಒಂದೂವರೆ ವರ್ಷದ ಬಳಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನೂ ಪ್ರಕಟಿಸಿತ್ತು.

ತಾತ್ಕಾಲಿಕ ಪಟ್ಟಿಗೆ ಆಕ್ಷೇಪಣೆ ಆಹ್ವಾನಿಸಿ, ಒಂದೆರಡು ವಾರಗಳಲ್ಲಿ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಬೇಕಿದ್ದ ಕೆಪಿಎಸ್‌ಸಿ, 6 ತಿಂಗಳು ಕಳೆದರೂ ಮೌನವಾಗಿದೆ. ಆಯ್ಕೆ ಪಟ್ಟಿಯಲ್ಲಿ ಹೆಸರಿರುವ ಅಭ್ಯರ್ಥಿಗಳು ಕೆಪಿಎಸ್‌ಸಿಯ ಈ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

‘ನನ್ನಂಥ ನೂರಾರು ಉದ್ಯೋಗ ಆಕಾಂಕ್ಷಿಗಳು ಜೀವನ ನಡೆಸಲು ಪರದಾಡುತ್ತಿದ್ದಾರೆ. ಆಯ್ಕೆ ಪಟ್ಟಿಯಲ್ಲಿ ಹೆಸರಿದ್ದರೂ ಕೆಲಸ ಸಿಗದ ಪರಿಸ್ಥಿತಿ ಬಂದಿದೆ. ಉದ್ಯೋಗ ಸಿಗುವ ಭರವಸೆಯಿಂದ ಹೆಣ್ಣು ಕೊಡಲು ಮುಂದಾದವರು, ಇದೀಗ ಸುಳ್ಳು ಹೇಳುತ್ತಿರಬೇಕೆಂದು ಕೆಲವರನ್ನು ನಿರಾಕರಿಸಿದ್ದೂ ಇದೆ‘ ಎಂದು ಅಭ್ಯರ್ಥಿಯೊಬ್ಬರು ದೂರಿದ್ದಾರೆ.

‘ಕೊರೊನಾ ಮಧ್ಯೆಯೂ ಕೆಲಸ ಮಾಡಿರುವ ಕೆಪಿಎಸ್‌ಸಿ, ಕೆಲವು ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿದೆ. ಆದರೆ, ಗ್ರೂಪ್‌ ‘ಸಿ’ ಹುದ್ದೆಗೆ ನೇಮಕಗೊಂಡವರ ಅಂತಿಮ ಪಟ್ಟಿ ಪ್ರಕಟಿಸಲು ಹಿಂದೇಟು ಹಾಕುತ್ತಿರುವುದೇಕೆ’ ಎಂದೂ ಅವರು ಪ್ರಶ್ನಿಸಿದ್ದಾರೆ.

‘ಕೆಲವು ನೇಮಕಾತಿ ಪ್ರಕ್ರಿಯೆಗಳನ್ನು ಅಂತಿಮಗೊಳಿಸಲು ಕೆಪಿಎಸ್‌ಸಿ ಏ. 23ರಂದು ಕೆಲವು ಅಧಿಕಾರಿ, ಸಿಬ್ಬಂದಿಯನ್ನು ನಿಯೋಜಿಸಿದೆ. ಮೋಟಾರು ವಾಹನ ನಿರೀಕ್ಷಕರ ಹುದ್ದೆ, ಉದ್ಯೋಗ ಮತ್ತು ತರಬೇತಿ ಇಲಾಖೆಯ ವಿವಿಧ ವೃತ್ತಿಯ 23 ಹಿರಿಯ ತರಬೇತಿ ಅಧಿಕಾರಿಗಳ ನೇಮಕಾತಿ, 30 ಸೆಷನ್ಸ್ ನ್ಯಾಯಾಲಯಗಳಲ್ಲಿ ಪ್ರಥಮ ದರ್ಜೆ ಸಹಾಯಕ ಮತ್ತು ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ ದಾಖಲಾತಿಗಳ ಪರಿಶೀಲನೆಗೆ ಅಧಿಕಾರಿ, ಸಿಬ್ಬಂದಿಯನ್ನು ನೇಮಿಸಲಾಗಿದೆ‘ ಎಂದು ಕೆಪಿಎಸ್‌ಸಿ ಮೂಲಗಳು ತಿಳಿಸಿವೆ.

ಗ್ರೂಪ್‌ ‘ಸಿ‘ ನೇಮಕಾತಿ ಬಗ್ಗೆ ಪ್ರತಿಕ್ರಿಯೆ ಪಡೆಯಲು ಕೆಪಿಎಸ್‌ಸಿ ಕಾರ್ಯದರ್ಶಿಗೆ ಕರೆ ಮಾಡಿದರೂ ಅವರು ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.