ADVERTISEMENT

ವಿವಿಧ ಇಲಾಖೆಗಳಿಗೆ 115 ಕೆಎಎಸ್ ಅಧಿಕಾರಿಗಳ ಸ್ಥಾನಪಲ್ಲಟ

​ಪ್ರಜಾವಾಣಿ ವಾರ್ತೆ
Published 7 ಮೇ 2019, 10:42 IST
Last Updated 7 ಮೇ 2019, 10:42 IST
   

ಬೆಂಗಳೂರು: 1998ನೇ ಸಾಲಿನ ಕೆಪಿಎಸ್‌ಸಿ (ಕರ್ನಾಟಕ ಲೋಕಸೇವಾ ಆಯೋಗ) ಪರಿಷ್ಕೃತ ಪಟ್ಟಿಯ ಪ್ರಕಾರ ವಿವಿಧ ಇಲಾಖೆಗಳಿಗೆ ಸ್ಥಾನ ಪಲ್ಲಟಗೊಳ್ಳಲಿರುವ 115 ಅಧಿಕಾರಿಗಳ ಪಟ್ಟಿಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸೋಮವಾರ ಅಂತರ್ಜಾಲದಲ್ಲಿ ಪ್ರಕಟಿಸಿದೆ. ಆದರೆ‌ ಯಾವ ಅಧಿಕಾರಿಗೂ ವೈಯಕ್ತಿಕ ಆದೇಶ ನೀಡಿಲ್ಲ.

ಪರಿಷ್ಕೃತ ಪಟ್ಟಿಯ ಪ್ರಕಾರ ವಿವಿಧ ವಿಭಾಗಗಳ 46 ಅಧಿಕಾರಿಗಳು ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. ಈ ಪೈಕಿ, ಹೆಚ್ಚು ಅಂಕ ಗಳಿಸಿದ್ದರೂ 19 ಅಧಿಕಾರಿಗಳು ಸದ್ಯ ಕೆಲಸ ಮಾಡುವ ಇಲಾಖೆಯಲ್ಲೇ ಮುಂದುವರಿಯುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಅವರಿಗೆ ಬದಲಾಗುವ ಹುದ್ದೆ ತೋರಿಸಿಲ್ಲ. ಉಳಿದ 27 ಅಧಿಕಾರಿಗಳು ಪರಿಷ್ಕೃತ ಪಟ್ಟಿಯಂತೆ ತಮಗೆ ಮಂಜೂರಾದ ಹೊಸ ಇಲಾಖೆಗೆ ಸ್ಥಾನಪಲ್ಲಟಗೊಳ್ಳಲಿದ್ದಾರೆ.

65 ಅಧಿಕಾರಿಗಳು ಕಡಿಮೆ ಅಂಕಗಳನ್ನು ಪಡೆದಿದ್ದು, ಅವರೆಲ್ಲ ಹೊಸ ಇಲಾಖೆಗೆ ಸ್ಥಾನಪಲ್ಲಟಗೊಳ್ಳಲಿದ್ದಾರೆ. ಈ ಪೈಕಿ ಏಳು ಅಧಿಕಾರಿಗಳು ಕೆಪಿಎಸ್‌ಸಿ ಪ್ರಕಟಿಸಿದ್ದ ರಾಜ್ಯಪತ್ರಕ್ಕೆ ಸಿಎಟಿಯಿಂದ ತಡೆ ಆದೇಶ ತಂದಿದ್ದಾರೆ.

ADVERTISEMENT

ಉಳಿದ ನಾಲ್ವರು ಅಧಿಕಾರಿಗಳ ಅಂಕಗಳಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ. ಆದರೂ, ಅವರ ಇಲಾಖೆಗಳು ಬದಲಾಗಲಿವೆ. ಈ ಅಧಿಕಾರಿಗಳನ್ನು ಬೇರೆ ಇಲಾಖೆಗಳಿಗೆ ಸ್ಥಳಾಂತರಗೊಳಿಸಲಾಗುವುದು. ಈ ಎಲ್ಲರ ಪಟ್ಟಿಯನ್ನು ಸರ್ಕಾರ ಸಿದ್ಧಪಡಿಸಿದೆ.

ಹೈಕೋರ್ಟ್‌ನಲ್ಲಿ ವ್ಯಾಜ್ಯ: ಕೆಪಿಎಸ್‌ಸಿ 2019ರ ಜನವರಿ 25ರಂದು ಗೆಜೆಟ್‌ನಲ್ಲಿ ಪ್ರಕಟಿಸಿರುವ ಪಟ್ಟಿಯಂತೆ 140 ಅಧಿಕಾರಿಗಳ ಸ್ಥಾನಪಲ್ಲಟಕ್ಕೆ ಸಂಬಂಧಿಸಿದ ಆದೇಶವನ್ನು ರಾಜ್ಯ ಸರ್ಕಾರ ಇತ್ತೀಚೆಗಷ್ಟೇ ಹೈಕೋರ್ಟ್‌ಗೆ ಸಲ್ಲಿಸಿತ್ತು.

‘140 ಅಧಿಕಾರಿಗಳಲ್ಲಿ ಕೆಲವರು ರಾಜೀನಾಮೆ ಸಲ್ಲಿಸಿದ್ದಾರೆ. ಕೆಲವರು ಮೃತಪಟ್ಟಿದ್ದಾರೆ. ಇನ್ನೂ ಕೆಲವರು ನಿವೃತ್ತಿ ಆಗಿದ್ದಾರೆ. ಹೀಗಾಗಿ, ಒಟ್ಟು 115 ಅಧಿಕಾರಿಗಳ ಸ್ಥಾನಪಲ್ಲಟದ ಆದೇಶ ಪ್ರಕಟಿಸಲಾಗಿದೆ’ ಎಂದು ಅಡ್ವೊಕೇಟ್ ಜನರಲ್ ಉದಯ ಹೊಳ್ಳ ಅವರು ನ್ಯಾಯಪೀಠಕ್ಕೆ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.