ADVERTISEMENT

ಹುದ್ದೆ ಕಳೆದುಕೊಳ್ಳುವವರಿಗೂ ಬಡ್ತಿ?

ಕೆಪಿಎಸ್‌ಸಿ: 1998ನೇ ಸಾಲಿನ ಪರಿಷ್ಕೃತ ಪಟ್ಟಿಗೆ ಕಿಮ್ಮತ್ತಿಲ್ಲ

ರಾಜೇಶ್ ರೈ ಚಟ್ಲ
Published 5 ಸೆಪ್ಟೆಂಬರ್ 2019, 2:37 IST
Last Updated 5 ಸೆಪ್ಟೆಂಬರ್ 2019, 2:37 IST
   

ಬೆಂಗಳೂರು: 1998ನೇ ಸಾಲಿನ 383 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳಿಗೆ ಆಯ್ಕೆಯಾದವರ ಪಟ್ಟಿಯನ್ನು ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ) ಎರಡನೇ ಬಾರಿಗೆ ಪರಿಷ್ಕರಿಸಿ ಸಲ್ಲಿಸಿದ್ದರೂ, ಅದನ್ನು ಮುಚ್ಚಿಟ್ಟು ಹಳೆ ನೇಮಕಾತಿ ಪಟ್ಟಿ ಪ್ರಕಾರ ನೇಮಕಗೊಂಡು ವಿವಿಧ ಹುದ್ದೆಗಳಲ್ಲಿರುವ ಅಧಿಕಾರಿಗಳ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಿ ಕೆಎಎಸ್‌ ಹಿರಿಯ ಶ್ರೇಣಿಗೆ ಬಡ್ತಿ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.

ಈ ಸಾಲಿನ ವ್ಯಾಜ್ಯಕ್ಕೆ ಸಂಬಂಧಿಸಿ ಹೈಕೋರ್ಟ್‌ ನೀಡಿದ್ದ ತೀರ್ಪಿನಂತೆ ಪರಿಷ್ಕೃತ ಪಟ್ಟಿಯನ್ನು ಕೆಪಿಎಸ್‌ಸಿ ಸಿದ್ಧಪಡಿಸಿದೆ. ಈ ಪಟ್ಟಿಯ ಪ್ರಕಾರ, 36 ಅಧಿಕಾರಿಗಳು ಹುದ್ದೆ ಕಳೆದುಕೊಳ್ಳಲಿದ್ದು, ಅವರಲ್ಲಿ ಇಬ್ಬರು ಬಡ್ತಿಗೆ ಅರ್ಹರಾದವರ ಪಟ್ಟಿಯಲ್ಲಿದ್ದಾರೆ!

ಕೆಎಎಸ್‌ ಹಿರಿಯ ಶ್ರೇಣಿಯ 45 ಅಧಿಕಾರಿಗಳಿಗೆ ಆಯ್ಕೆ ಶ್ರೇಣಿಗೆ ಮತ್ತು ಕಿರಿಯ ಶ್ರೇಣಿಯ 106 ಅಧಿಕಾರಿಗಳಿಗೆ ಹಿರಿಯ ಶ್ರೇಣಿಗೆ ಬಡ್ತಿ ನೀಡಲು ಗುರುವಾರ (ಸೆ. 5) ಪದೋನ್ನತಿ ಸಮಿತಿ (ಡಿಪಿಸಿ) ಸಭೆ ನಡೆಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ನಿರ್ಧರಿಸಿದೆ.

ADVERTISEMENT

1998ನೇ ಸಾಲಿನ ಪರಿಷ್ಕೃತ ಆಯ್ಕೆ ಪಟ್ಟಿ ಜಾರಿಯಾದರೆ, ಉಪ ವಿಭಾಗಾಧಿಕಾರಿ (ಎ.ಸಿ) ಹುದ್ದೆಗೆ ಆಯ್ಕೆಯಾಗಿರುವ ಒಟ್ಟು 20 ಅಧಿಕಾರಿಗಳ ಪೈಕಿ 12 ಅಧಿಕಾರಿಗಳು (ಒಬ್ಬರು ಹುದ್ದೆಗೆ ಸೇರಿಲ್ಲ) ಬೇರೆ ಇಲಾಖೆಗೆ ಸ್ಥಾನಪಲ್ಲಟಗೊಳ್ಳಲಿದ್ದಾರೆ. ಅವರಲ್ಲಿ 11 ಅಧಿಕಾರಿಗಳು ಈಗಾಗಲೇ ಐಎಎಸ್‌ಗೆ ಬಡ್ತಿಗೊಂಡಿದ್ದು, ಅವರೆಲ್ಲರೂ ಹಿಂಬಡ್ತಿಗೊಂಡಿದ್ದಾರೆ. ಆದರೆ, ಈ ಅಧಿಕಾರಿಗಳು ಸಿಎಟಿಯಿಂದ ತಡೆಯಾಜ್ಞೆ ತಂದು ಐಎಎಸ್‌ ಹುದ್ದೆಯಲ್ಲೇ ಮುಂದುವರಿದಿದ್ದಾರೆ. ಆ 12 ಹುದ್ದೆಗಳಿಗೆ ಬೇರೆ ಇಲಾಖೆಯಲ್ಲಿರುವ ಅಧಿಕಾರಿಗಳು ನೇಮಕಗೊಳ್ಳಲಿದ್ದಾರೆ. ಈ ಪೈಕಿ ಎಂಟು ಅಧಿಕಾರಿಗಳು ಈಗಾಗಲೇ ಹುದ್ದೆಗೆ ವರದಿ ಮಾಡಿಕೊಂಡಿದ್ದು, ಉಳಿದ ನಾಲ್ವರಿಗೆ ಹೊಸ ಪರಿಷ್ಕೃತ ಪಟ್ಟಿ ಪ್ರಕಾರ ನೇಮಕಾತಿ ಆದೇಶ ನೀಡಬೇಕಾಗಿದೆ.

ಹಳೆ ಪಟ್ಟಿ ಪ್ರಕಾರ (2006ರಲ್ಲಿ) ಒಟ್ಟು 50 ಜನ ತಹಶೀಲ್ದಾರ್‌ ಹುದ್ದೆಗೆ ನೇಮಕಗೊಂಡಿದ್ದು, ಅವರೆಲ್ಲ ಈಗ ಕೆಎಎಸ್‌ ಕಿರಿಯ ಶ್ರೇಣಿ ಹುದ್ದೆಯಲ್ಲಿದ್ದಾರೆ. ಪರಿಷ್ಕೃತ ಪಟ್ಟಿಯ ಪ್ರಕಾರ ಇವರಲ್ಲಿ 23 ಅಧಿಕಾರಿಗಳು ಬೇರೆ ಇಲಾಖೆಗೆ ಸ್ಥಾನಪಲ್ಲಟಗೊಳ್ಳುತ್ತಾರೆ. ಇಬ್ಬರು ಹುದ್ದೆ ಕಳೆದುಕೊಳ್ಳುತ್ತಾರೆ. ಈಗಾಗಲೇ ಸ್ಥಾನಪಲ್ಲಟಗೊಂಡು 11 ಅಧಿಕಾರಿಗಳು ತಹಶೀಲ್ದಾರ್‌ ಆಗಿ ಸೇರಿಕೊಂಡಿದ್ದಾರೆ. ಜ್ಯೇಷ್ಠತಾ ನಿಯಮಗಳ ಪ್ರಕಾರ ಈ ಅಧಿಕಾರಿಗಳು ಕೆಎಎಸ್‌ ಹಿರಿಯ ಶ್ರೇಣಿಗೆ ಬಡ್ತಿ ಪಡೆಯಲು ಅರ್ಹರಾಗುತ್ತಾರೆ. ಆದರೆ, ತಹಶೀಲ್ದಾರ್‌ ಹುದ್ದೆಯಿಂದ ಸ್ಥಾನಪಲ್ಲಟಗೊಳ್ಳುವವರಿಗೆ ಬಡ್ತಿ ನೀಡಲಾಗುತ್ತಿದೆ!

‘ಹೊಸ ಪಟ್ಟಿಯ ಪ್ರಕಾರವೇ ಅಧಿಕಾರಿಗಳು ನೇಮಿಸುವ ಕುರಿತಂತೆ ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಈ ಹಿಂದೆಯೇ ಪ್ರಮಾಣಪತ್ರ ಸಲ್ಲಿಸಿದೆ. ಆ ಪ್ರಕಾರ ಅಧಿಕಾರಿಗಳನ್ನು ಸ್ಥಾನಪಲ್ಲಟಗೊಳಿಸಿ, ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಬೇಕು. ಆದರೆ, ಪರಿಷ್ಕೃತ ಪಟ್ಟಿ‌ ಬದಿಗಿಟ್ಟು ಹಳೆ ಆಯ್ಕೆ ಪಟ್ಟಿಯ ಅನ್ವಯ ಬಡ್ತಿ ನೀಡುವುದು ಯಾವ ನ್ಯಾಯ’ ಎಂದು ಹೊಸ ಪಟ್ಟಿ ಪ್ರಕಾರ ಬಡ್ತಿ ನಿರೀಕ್ಷೆಯಲ್ಲಿರುವ ಅಧಿಕಾರಿಯೊಬ್ಬರು ಪ್ರಶ್ನಿಸಿದರು.

–ಉನ್ನತ ಶ್ರೇಣಿಗೆ ಬಡ್ತಿ: ಡಿಪಿಸಿ ಸಭೆ ಇಂದು

–1998ನೇ ಸಾಲಿನ ಅಧಿಕಾರಿಗಳ ಅಸಮಾಧಾನ

–ಹುದ್ದೆ ಕಳೆದುಕೊಳ್ಳುವ ಭೀತಿಯಲ್ಲಿರುವರೂ ಪಟ್ಟಿಯಲ್ಲಿ!

36 ಅಧಿಕಾರಿಗಳ ಹುದ್ದೆಗೆ ಕುತ್ತು

ಎರಡನೇ ಬಾರಿಗೆ ಪರಿಷ್ಕೃತಗೊಂಡಿರುವ ಆಯ್ಕೆ ಪಟ್ಟಿ ಪ್ರಕಾರ 36 ಅಧಿಕಾರಿಗಳು ಹುದ್ದೆಯನ್ನೇ ಕಳೆದುಕೊಳ್ಳಲಿದ್ದಾರೆ. ಅವರಲ್ಲಿ ಇಬ್ಬರು ತಹಶೀಲ್ದಾರ್‌ಗಳೂ ಇದ್ದಾರೆ. ಬಡ್ತಿ ನೀಡಲು ಸಿದ್ಧಪಡಿಸಿರುವ ಪಟ್ಟಿಯಲ್ಲಿ ಈ ಇಬ್ಬರ ಹೆಸರೂ ಇದೆ. ಹುದ್ದೆಯನ್ನೇ ಕಳೆದುಕೊಳ್ಳುವವರಿಗೂ ಬಡ್ತಿ ನೀಡಲು ನಿರ್ಧರಿಸಿರುವುದಕ್ಕೆ ಅಧಿಕಾರಿಗಳ ವಲಯದಲ್ಲೇ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.