ADVERTISEMENT

ಮತ್ತೆ 3 ಐಎಎಸ್‌ ಅಧಿಕಾರಿಗಳಿಗೆ ಹಿಂಬಡ್ತಿ ಭೀತಿ

ಕೆಪಿಎಸ್‌ಸಿ: 1998ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಪಟ್ಟಿ ಮತ್ತೊಮ್ಮೆ ಪರಿಷ್ಕರಣೆ?

ರಾಜೇಶ್ ರೈ ಚಟ್ಲ
Published 10 ಏಪ್ರಿಲ್ 2019, 19:46 IST
Last Updated 10 ಏಪ್ರಿಲ್ 2019, 19:46 IST
   

ಬೆಂಗಳೂರು: ಈಗಾಗಲೇ ಪರಿಷ್ಕರಿಸಿ, ರಾಜ್ಯಪತ್ರದಲ್ಲಿ ಪ್ರಕಟಿಸಿದ 1998ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ 383 ಹುದ್ದೆಗಳ ಆಯ್ಕೆ ಪಟ್ಟಿಯನ್ನು ಮತ್ತೊಮ್ಮೆ ಪರಿಷ್ಕರಿಸಲೇಬೇಕಾದ ಅನಿವಾರ್ಯತೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಎದುರಾಗಿದೆ.

ಮತ್ತೊಮ್ಮೆ ಪರಿಷ್ಕರಿಸಿದರೆ, ಈ ಸಾಲಿನಲ್ಲಿ ಉಪವಿಭಾಗಾಧಿಕಾರಿ ಹುದ್ದೆಗೆ ನೇಮಕಗೊಂಡ ಅಭ್ಯರ್ಥಿಗಳ ಪೈಕಿ ಮತ್ತೆ ಐವರು ಅಧಿಕಾರಿಗಳು ಇತರ ಇಲಾಖೆಗಳಿಗೆ ಸ್ಥಾನಪಲ್ಲಟಗೊಳ್ಳುವ ಸಾಧ್ಯತೆ ಇದೆ. ಅಲ್ಲದೆ, ಈ ಸಾಲಿನಲ್ಲಿ ಸೇವಾ ಜ್ಯೇಷ್ಠತೆಯ ಆಧಾರದಲ್ಲಿ ಐಎಎಸ್‌ ಬಡ್ತಿಗೆ ಪಡೆದ ಮೂವರು ಅಧಿಕಾರಿಗಳ ಹುದ್ದೆಗೂ ಸಂಚಕಾರ ಬರುವ ಸಂಭವವಿದೆ.

ಈ ಹಿಂದೆ ಹೈಕೋರ್ಟ್‌ ನೀಡಿದ ಆದೇಶದ ಅನ್ವಯ ಇದೇ ಫೆ. 25ರಂದು ಪರಿಷ್ಕೃತ ಆಯ್ಕೆ ಪಟ್ಟಿಯನ್ನು ಕೆಪಿಎಸ್‌ಸಿ ರಾಜ್ಯಪತ್ರದಲ್ಲಿ ಪ್ರಕಟಿಸಿತ್ತು. ಈ ಪಟ್ಟಿ ಪ್ರಕಾರ, ಈ ಸಾಲಿನಲ್ಲಿ ಉಪವಿಭಾಗಾಧಿಕಾರಿ ಹುದ್ದೆಗಳಿಗೆ ನೇಮಕಗೊಂಡಿದ್ದ ಒಟ್ಟು 20 ಅಭ್ಯರ್ಥಿಗಳ ಪೈಕಿ, ಎಂಟು ಅಧಿಕಾರಿಗಳು ಇತರ ಇಲಾಖೆಗಳಿಗೆ ಸ್ಥಾನ ಪಲ್ಲಟಗೊಳ್ಳಲಿದ್ದು, ಅವರಲ್ಲಿ ಐಎಎಸ್‌ಗೆ ಬಡ್ತಿ ಪಡೆದು ಏಳು ಅಧಿಕಾರಿಗಳು ಹಿಂಬಡ್ತಿ ಪಡೆಯುವುದು ಖಚಿತವಾಗಿದೆ.

ADVERTISEMENT

ಆದರೆ, ಪಟ್ಟಿ ಪರಿಷ್ಕರಿಸುವ ಸಂದರ್ಭದಲ್ಲಿ ಕೋರ್ಟ್‌ ನೀಡಿರುವ ತೀರ್ಪಿನಂತೆ 91 ಅಭ್ಯರ್ಥಿಗಳ ಮೂರನೇ ಮೌಲ್ಯ ಮಾಪನ ಅಂಕಗಳನ್ನೂ‌ ಕೆಪಿಎಸ್‌ಸಿ ಪರಿಗಣಿಸಿರಲಿಲ್ಲ. ಅದರ ಬದಲು, ಈ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿತ್ತು. ಆದರೆ, ತೀರ್ಪು ಮರು ಪರಿಶೀಲನೆ ನಿರಾಕರಿಸಿದ್ದ ಹೈಕೋರ್ಟ್‌, ಎಲ್ಲ ಮೇಲ್ಮನವಿಗಳನ್ನು ವಜಾ ಮಾಡಿತ್ತು. ಹೈಕೋರ್ಟ್ ಆದೇಶವನ್ನೇ ಸುಪ್ರೀಂ ಕೋರ್ಟ್‌ ಕೂಡಾ ಎತ್ತಿ ಹಿಡಿದಿತ್ತು.

ಮೂರನೇ ಮೌಲ್ಯಮಾಪನದ ಅಂಕವನ್ನು ಪರಿಗಣಿಸಿಲ್ಲ ಎಂದು 91 ಅಭ್ಯರ್ಥಿಗಳ ಪೈಕಿ ಒಬ್ಬರಾದ ಯಾಸ್ಮಿನ್‌ ಬೇಗಂ ವಾಲೀಕಾರ ಅವರು ಹೈಕೋರ್ಟ್‌ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮತ್ತು ಎಚ್‌. ಟಿ ನರೇಂದ್ರ ಪ್ರಸಾದ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಈ ಸಂಬಂಧ ಪ್ರತಿವಾದಿಗಳಾದ ಕೆಪಿಎಸ್‌ಸಿ ಕಾರ್ಯದರ್ಶಿ ಆರ್‌.ಆರ್‌. ಜನ್ನು ಅವರಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮತ್ತೊಂದು ನ್ಯಾಯಾಂಗ ನಿಂದನೆ ಅರ್ಜಿಗೆ ಸಂಬಂಧಿಸಿದಂತೆ ಈಗಾಗಲೇ ಪರಿಷ್ಕರಿಸಿರುವ ಆಯ್ಕೆ ಪಟ್ಟಿಯ ಪ್ರಕಾರ ತೆಗೆದುಕೊಂಡ ಕ್ರಮದ ಕುರಿತು ಇದೇ 15ರಂದು ರಾಜ್ಯ ಸರ್ಕಾರ ಅನುಸರಣಾ ವರದಿ ಸಲ್ಲಿಸಬೇಕಿದೆ.

ವ್ಯಕ್ತಿತ್ವ ಸಂದರ್ಶನ: ಆದರೆ, ಈ 91 ಅಭ್ಯರ್ಥಿಗಳ ಪೈಕಿ 82 ಅಭ್ಯರ್ಥಿಗಳಿಗೆ ಮಾತ್ರ ಕೆಪಿಎಸ್‌ಸಿ ವ್ಯಕ್ತಿತ್ವ ಪರೀಕ್ಷೆ (ಸಂದರ್ಶನ) ನಡೆಸಿದೆ. ಪಟ್ಟಿ ಮತ್ತೆ ಪರಿಷ್ಕರಿಸಬೇಕಾದರೆ ಉಳಿದ ಒಂಬತ್ತು ಅಭ್ಯರ್ಥಿಗಳ ವ್ಯಕ್ತಿತ್ವ ಪರೀಕ್ಷೆ ನಡೆಸಬೇಕಾಗುತ್ತದೆ ಎಂದು ಕೆಪಿಎಸ್‌ಸಿ ಮೂಲಗಳು ತಿಳಿಸಿವೆ.

‘91 ಅಭ್ಯರ್ಥಿಗಳ ಮೌಲ್ಯಮಾಪನ ಅಂಕಗಳನ್ನು ಪರಿಗಣಿಸಿ, ಒಂಬತ್ತು ಅಭ್ಯರ್ಥಿಗಳ ಸಂದರ್ಶನ ಮಾಡಿದ ಬಳಿಕ ಪಟ್ಟಿ ಪರಿಷ್ಕರಿಸಬೇಕಿತ್ತು. ಕೋರ್ಟ್‌ ತೀರ್ಪಿನಲ್ಲಿ ಈ ವಿಷಯ ಸ್ಪಷ್ಟವಾಗಿದೆ. ಅದನ್ನು ಪಾಲಿಸುವ ವಿಷಯದಲ್ಲಿ ಎಡವಿರುವುದರಿಂದ ಮತ್ತೊಮ್ಮೆ ಪಟ್ಟಿ ಪರಿಷ್ಕರಿಸಬೇಕಾದ ಅನಿವಾರ್ಯತೆ ಎದುರಾಗಿದೆ’ ಎಂದೂ ಮೂಲಗಳು ಹೇಳಿವೆ.

13 ವರ್ಷಗಳ ಬಳಿಕ ಸರ್ಕಾರಿ ಸೇವೆ!

1998ನೇ ಸಾಲಿನ ಪರಿಷ್ಕೃತ ಪಟ್ಟಿ ಪ್ರಕಾರ 28 ಅಧಿಕಾರಿಗಳನ್ನು ಅನರ್ಹರೆಂದು ಗುರುತಿಸಲಾಗಿದೆ. ಹೊಸತಾಗಿ 28 ಅಭ್ಯರ್ಥಿಗಳು ನೇಮಕಾತಿಗೆ ಅರ್ಹರಾಗಿದ್ದರು. ಈ ಪೈಕಿ ಒಬ್ಬ ಅಭ್ಯರ್ಥಿ ನಿಧನರಾಗಿದ್ದಾರೆ. ಇನ್ನೊಬ್ಬ ಅಭ್ಯರ್ಥಿಯ ನಿವೃತ್ತಿ ವಯಸ್ಸು ದಾಟಿದೆ. ಉಳಿದ 26 ಅಧಿಕಾರಿಗಳಿಗೆ ಕೋರ್ಟ್‌ ಆದೇಶದಂತೆ ನೇಮಕಾತಿ ಆದೇಶ ನೀಡಲಾಗಿದೆ. ಈ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಸುದೀರ್ಘ ಹೋರಾಟ ನಡೆಸಿದ ಶ್ರೀನಿವಾಸ ಸೇರಿದಂತೆ ಏಳು ಅಭ್ಯರ್ಥಿಗಳು ಬುಧವಾರ ಹುದ್ದೆಗೆ ಸೇರಿದ್ದಾರೆ.

***

91 ಅಭ್ಯರ್ಥಿಗಳ 3ನೇ ಮೌಲ್ಯಮಾಪನ ಅಂಕ ಪರಿಗಣಿಸಬೇಕೆಂದು ಹೈಕೋರ್ಟ್ ತೀರ್ಪು ನೀಡಿದ್ದರಿಂದ ಆಯ್ಕೆ ಪಟ್ಟಿ ಮತ್ತೆ ಪರಿಷ್ಕರಿಸಬೇಕಾಗುತ್ತದೆ.

–ಆರ್‌.ಆರ್‌. ಜನ್ನು, ಕೆಪಿಎಸ್‌ಸಿ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.