ADVERTISEMENT

ನೇಮಕಾತಿ ವಿಳಂಬ ತಡೆಗೆ ಕ್ರಮ: ಮೂರು ಪರೀಕ್ಷಾ ಘಟಕಕ್ಕೆ ಕೆಪಿಎಸ್‌ಸಿ ಪ್ರಸ್ತಾವ

ನೇಮಕಾತಿ ವಿಳಂಬ ತಡೆಗೆ ಕ್ರಮ: 8 ತಿಂಗಳಲ್ಲಿ ಫಲಿತಾಂಶ ನೀಡುವ ಯೋಜನೆ

ರಾಜೇಶ್ ರೈ ಚಟ್ಲ
Published 10 ಸೆಪ್ಟೆಂಬರ್ 2022, 19:37 IST
Last Updated 10 ಸೆಪ್ಟೆಂಬರ್ 2022, 19:37 IST
ಕೆಪಿಎಸ್‌ಸಿ
ಕೆಪಿಎಸ್‌ಸಿ    

ಬೆಂಗಳೂರು: ಖಾಲಿ ಹುದ್ದೆಗಳ ಭರ್ತಿಗೆ ನಡೆಸುವ ನೇಮಕಾತಿಯಲ್ಲಿನ ವಿಳಂಬ ತಡೆಯಲು ಮುಂದಾಗಿರುವ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ), ಮೂರು ಪ್ರತ್ಯೇಕ ‘ಪರೀಕ್ಷಾ ನಿಯಂತ್ರಣ ಘಟಕ’ ಸ್ಥಾಪಿಸುವ ಪ್ರಸ್ತಾವವನ್ನು ರಾಜ್ಯ ಸರ್ಕಾರದ ಮುಂದಿಟ್ಟಿದೆ.

ಈ ಮೂಲಕ, ಕೆಎಎಸ್‌ ಹುದ್ದೆಗಳೂ ಸೇರಿದಂತೆ ಯಾವುದೇ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ ಎಂಟೇ ತಿಂಗಳಲ್ಲಿ ಅಂತಿಮ ಆಯ್ಕೆ ಪಟ್ಟಿಯನ್ನು ಸರ್ಕಾರಕ್ಕೆ ರವಾನಿಸುವ ಯೋಜನೆ ಹೊಂದಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಕೆಪಿಎಸ್‌ಸಿ ಕಾರ್ಯದರ್ಶಿ ವಿಕಾಸ್‌ ಕಿಶೋರ್‌ ಸುರಳ್ಕರ್‌, ‘ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಮೂರು ಪರೀಕ್ಷಾ ಘಟಕಗಳನ್ನು ಸ್ಥಾಪಿಸುವ ದಿಸೆಯಲ್ಲಿ 112 ಹೊಸ ಹುದ್ದೆಗಳನ್ನು ಸೃಜಿಸಲು ಮತ್ತು ಈಗಾಗಲೇ ಮಂಜೂರಾಗಿರುವ 322 ಹುದ್ದೆಗಳ ಪೈಕಿ ಖಾಲಿ ಇರುವ 140 ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದರು.

ADVERTISEMENT

‘ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆಪತ್ರಿಕೆ ತಯಾರಿ, ಮೌಲ್ಯಮಾಪನ, ಫಲಿತಾಂಶ ಪ್ರಕಟಿಸುವರೆಗಿನ ಎಲ್ಲ ಕೆಲಸಗಳು ನಿರ್ವಹಿಸಲು ಸದ್ಯ ಒಬ್ಬ ಪರೀಕ್ಷಾ ನಿಯಂತ್ರಕರ ಅಡಿಯಲ್ಲಿ ಒಂದು ಘಟಕ ಮಾತ್ರ ಇದೆ. ಆಯೋಗದಲ್ಲಿ ಜಂಟಿ ಪರೀಕ್ಷಾ ನಿಯಂತ್ರಕರಿದ್ದರೂ ಅವರು ಈ ಪರೀಕ್ಷಾ ನಿಯಂತ್ರಕರ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಅದರ ಬದಲು, ಇಬ್ಬರು ಜಂಟಿ ಪರೀಕ್ಷಾ ನಿಯಂತ್ರಕರ ಅಡಿಯಲ್ಲಿ ಸ್ವತಂತ್ರ ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ವಿವಿಧ ಇಲಾಖೆಗಳಿಂದ ಹುದ್ದೆಗಳ ನೇಮಕಾತಿಗೆ ಬರುವ 15ರಿಂದ 20 ಪ್ರಸ್ತಾವನೆಗಳಿಗೆ ಅಧಿಸೂಚನೆ ಹೊರಡಿಸಿ, ಎಲ್ಲ ಪ್ರಕ್ರಿಯೆ ಮುಗಿಸಿ ಅಂತಿಮ ಆಯ್ಕೆ ಪಟ್ಟಿ ಸಿದ್ಧಪಡಿಸಲು ಒಂದೇ ಪರೀಕ್ಷಾ ಘಟಕ ಇರುವುದರಿಂದ ಹೆಚ್ಚಿನ ಒತ್ತಡ ಬೀಳುತ್ತಿದೆ. ಹೀಗಾಗಿ, ಒಂದು ಅಧಿಸೂಚನೆಯ ಪ್ರಕ್ರಿಯೆ ಪೂರ್ಣಗೊಳಿಸಲು ಕನಿಷ್ಠ 3 ವರ್ಷ ತಗಲುತ್ತಿದೆ. ಪ್ರತ್ಯೇಕ ಘಟಕಗಳನ್ನು ಸ್ಥಾಪಿಸಿ, ಈ ಘಟಕಗಳಿಗೆ ಹಂಚಿಕೆ ಮಾಡಿ ದರೆ ನಿಗದಿತ ಅವಧಿಯಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿ ದರು. ‘ನೇಮಕಾತಿಗೆ ಅಧಿಸೂಚನೆಯಿಂದ ಆರಂಭಿಸಿ ಆಯ್ಕೆ ಪ್ರಕ್ರಿಯೆಯ ಎಲ್ಲಾ ಹಂತಗ ಳನ್ನು ಕೇಂದ್ರ ಲೋಕಸೇವಾ ಆಯೋಗದ ಮಾದರಿಯಲ್ಲಿ ಕೆಪಿಎಸ್‌ಸಿ ಕಾರ್ಯನಿರ್ವವಹಿಸಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ, ಸದ್ಯ ಇಲ್ಲಿರುವ ವ್ಯವಸ್ಥೆಯಲ್ಲಿ ಯುಪಿಎಸ್‌ಸಿ ರೀತಿಯಲ್ಲಿ ಕೆಲಸ ನಿರ್ವಹಣೆ ಅಸಾಧ್ಯ. 90ರ ದಶಕದ ವ್ಯವಸ್ಥೆ ಇನ್ನೂ ಇದೆ. ಹಳೆ ಕಂಪ್ಯೂಟರ್‌ ಬದಲಿಸಿ, ಆಧುನಿಕ ತಂತ್ರಜ್ಞಾನ ಅಳವಡಿಸಿ
ಕೊಳ್ಳಲು ಉದ್ದೇಶಿಸಲಾಗಿದೆ’ ಎಂದರು.

***

Caption

ಆಯೋಗದ ಚಟುವಟಿಕೆಗೆ ಚುರುಕು ಕೊಡುವ ಉದ್ದೇಶದಿಂದ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ‌. ಹೊಸದಾಗಿ ತಾಂತ್ರಿಕ ಪರಿಣತರು ಸೇರಿದಂತೆ 21 ತಜ್ಞರನ್ನು ನೇಮಿಸಿಕೊಳ್ಳಲು ಉದ್ದೇಶಿಸಲಾಗಿದೆ

- ವಿಕಾಸ್‌ ಕಿಶೋರ್‌ ಸುರಳ್ಕರ್‌, ಕೆಪಿಎಸ್‌ಸಿ, ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.