ADVERTISEMENT

ಕೃಷ್ಣಾ ನದಿ: ತಗ್ಗಿದ ನೀರಿನ ಹರಿವು

ತೀರದ ಗ್ರಾಮಗಳಲ್ಲಿ ನೆರೆ ಆತಂಕವೂ ಕಡಿಮೆ: ಮಣ್ಣು ಕುಸಿದು ಹೆದ್ದಾರಿ ಬಂದ್

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2020, 20:14 IST
Last Updated 23 ಆಗಸ್ಟ್ 2020, 20:14 IST
ಕೃಷ್ಣಾ ನದಿ
ಕೃಷ್ಣಾ ನದಿ   

ಬೆಂಗಳೂರು: ನೆರೆಯ ಮಹಾರಾಷ್ಟ್ರದಲ್ಲಿ ಮಳೆ ಕಡಿಮೆ ಆದಂತೆ ರಾಜ್ಯದಲ್ಲಿ ಕೃಷ್ಣಾ ನದಿಯಲ್ಲಿಯೂ ನೀರಿನ ಹರಿವಿನ ಪ್ರಮಾಣ ಇಳಿಮುಖವಾಗಿದ್ದು, ನೆರೆ ಭೀತಿ ಆತಂಕವೂ ಕಡಿಮೆ ಆಗಿದೆ. ಬಾಗಲಕೋಟೆಯಲ್ಲಿ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಮಣ್ಣು ಕುಸಿದು ಎರಡು ಲಾರಿಗಳು ಸಿಲುಕಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ.

ಇತ್ತ, ನಾರಾಯಣಪುರದ ಬಸವಸಾಗರ ಜಲಾಶಯದಿಂದಲೂ ಕೃಷ್ಣಾ ನದಿಗೆ ಬಿಡಲಾಗುತ್ತಿದ್ದ ನೀರಿನ ಪ್ರಮಾಣ ಇಳಿಸಿದ್ದು, ದೇವದುರ್ಗ ತಾಲ್ಲೂಕಿನ ಹೂವಿನಹೆಡಗಿ ಸೇತುವೆ ಬಳಿ ಸಂಚಾರ ಸಾಮಾನ್ಯ ಸ್ಥಿತಿಗೆ ಮರಳಿದೆ. ಕರಾವಳಿ ಜಿಲ್ಲೆಗಳಲ್ಲಿಯೂ ಮಳೆ ಪ್ರಮಾಣ ಕಡಿಮೆಯಾಗಿದೆ.

ರಾಜಾಪುರ ಬ್ಯಾರೇಜ್‌ನಿಂದ 1.23 ಲಕ್ಷ ಕ್ಯುಸೆಕ್ ಹಾಗೂ ದೂಧ್‌ಗಂಗಾ ನದಿಯಿಂದ 25,344 ಕ್ಯುಸೆಕ್‌ ಸೇರಿ 1.49 ಲಕ್ಷ ಕ್ಯುಸೆಕ್‌ ನೀರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ ಸೇರಿಕೊಳ್ಳುತ್ತಿದೆ. ಘಟಪ್ರಭಾ ಜಲಾಶಯದಿಂದ ಹೊರ ಬಿಡುತ್ತಿರುವ ನೀರಿನ ಪ್ರಮಾಣವೂ ಇಳಿಕೆಯಾಗಿದೆ.

ADVERTISEMENT

ಮಲಪ್ರಭಾ ಜಲಾಶಯದಿಂದ ಭಾನುವಾರ 8,339 ಕ್ಯುಸೆಕ್‌ ನೀರನ್ನು ನದಿಗೆ ಹರಿಸಲಾಗಿದೆ. ಶನಿವಾರ ಮುನವಳ್ಳಿಯ ಹಳೆಯ ಸೇತುವೆ ಮತ್ತೆ ಮುಳುಗಡೆಯಾಗಿತ್ತು. ಹೊಸಪೇಟೆಯ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಭಾರಿ ಇಳಿಮುಖವಾಗಿದೆ. ಭಾನುವಾರ 12 ಕ್ರಸ್ಟ್‌ಗೇಟ್‌ಗಳಿಂದ 29,753 ಕ್ಯುಸೆಕ್‌ ನೀರು ನದಿಗೆ ಹರಿಸಲಾಯಿತು.

ಹೆದ್ದಾರಿ ಬಂದ್: ಬಾಗಲಕೋಟೆ ಬಳಿ ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಮಣ್ಣು ಕುಸಿದು ಭಾನುವಾರ ಮುಂಜಾನೆ ಎರಡು ಲಾರಿಗಳು ಸಿಲುಕಿಕೊಂಡಿವೆ. ಇದರಿಂದ ಹೆದ್ದಾರಿಯಲ್ಲಿ ಭಾರಿ ವಾಹನ ಸಂಚಾರ ಸ್ಥಗಿತಗೊಂಡಿತ್ತು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ರಾತ್ರಿ ಉತ್ತಮ, ಭಾನುವಾರ ಸಾಧಾರಣ ಮಳೆ ಸುರಿದಿದೆ. ಬಂಟ್ವಾಳ ತಾಲ್ಲೂಕಿನಲ್ಲಿ ಗರಿಷ್ಠ 4 ಸೆಂ.ಮೀ. ಮಳೆಯಾಗಿದ್ದು, ಸರಾಸರಿ 3 ಸೆಂ.ಮೀ. ಮಳೆ ದಾಖಲಾಗಿದೆ. ಉಡುಪಿ ಜಿಲ್ಲೆಯಲ್ಲೂ ಸಾಧಾರಣ ಮಳೆಯಾಗಿದೆ.

ಕೃಷ್ಣಾನದಿಯಲ್ಲಿ ಪ್ರವಾಹ ಇಳಿಮುಖ

ರಾಯಚೂರು ವರದಿ: ನಾರಾಯಣಪುರದ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಹೊರಬಿಡುವ ನೀರಿನ ಪ್ರಮಾಣವನ್ನು 77 ಸಾವಿರ ಕ್ಯುಸೆಕ್ ಗೆ ಇಳಿಸಲಾಗಿದೆ. ಲಿಂಗಸುಗೂರು ತಾಲ್ಲೂಕಿನ ಶೀಲಹಳ್ಳಿ ಸೇತುವೆ ಹಾಗೂ ದೇವದುರ್ಗ ತಾಲ್ಲೂಕಿನ ಹೂವಿನಹೆಡಗಿ ಸೇತುವೆಯಲ್ಲಿ ವಾಹನಗಳ ಸಂಚಾರ ಆರಂಭಗೊಂಡಿದೆ.

ಭದ್ರಾ ಜಲಾಶಯ ತುಂಬಲು 4 ಅಡಿ ಬಾಕಿ: ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ.ಭಾನುವಾರ ಆಗುಂಬೆಯಲ್ಲಿ 8.06 ಸೆಂ.ಮೀ ಹಾಗೂ ತೀರ್ಥಹಳ್ಳಿಯಲ್ಲಿ 2.74 ಸೆಂ.ಮೀ ಮಳೆಯಾಗಿದೆ.

ಹೊಸನಗರ, ಸಾಗರ, ಭದ್ರಾವತಿ, ಶಿಕಾರಿಪುರದಲ್ಲಿ ತುಂತುರು ಮಳೆಯಾಗಿದೆ. ಭದ್ರಾ ಜಲಾಶಯ‌ದ ನೀರಿನ ಮಟ್ಟ ಹೆಚ್ಚಿದ್ದು, 186 ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದ ಮಟ್ಟ 181.10 ಅಡಿಗೆ ತಲುಪಿದೆ. ಜಲಾಶಯ ಭರ್ತಿಯಾಗಲು ಕೇವಲ 3.90 ಅಡಿ ಮಾತ್ರ ಬಾಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.