ನವದೆಹಲಿ: ಕೃಷ್ಣಾ ನದಿಗೆ ಸಂಬಂಧಿಸಿ ದೀರ್ಘಕಾಲದಿಂದ ಇರುವ ಅಂತರ-ರಾಜ್ಯ ಜಲ ವಿವಾದದ ಅಂತಿಮ ವರದಿ ಸಲ್ಲಿಸಲು ಕೃಷ್ಣಾ ಜಲವಿವಾದ ನ್ಯಾಯಮಂಡಳಿಗೆ ಮತ್ತೆ ಒಂದು ವರ್ಷ ಕಾಲಾವಕಾಶವನ್ನು ಕೇಂದ್ರ ಜಲಶಕ್ತಿ ಸಚಿವಾಲಯ ನೀಡಿದೆ.
ನ್ಯಾಯಮಂಡಳಿಯ ಅವಧಿಯನ್ನು 2026ರ ಜುಲೈ 31ರ ವರೆಗೆ ವಿಸ್ತರಿಸಿ ಬುಧವಾರ ಆದೇಶ ಹೊರಡಿಸಿದೆ.
ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರ ಪ್ರದೇಶದ ನಡುವಣ ನೀರು ಹಂಚಿಕೆ ವಿವಾದಗಳ ಮಧ್ಯಸ್ಥಿಕೆ ವಹಿಸಲು 2004ರಲ್ಲಿ ನ್ಯಾಯಮಂಡಳಿ ರಚಿಸಲಾಗಿತ್ತು. ನ್ಯಾಯಮಂಡಳಿ 2010ರಲ್ಲಿ ಆರಂಭಿಕ ವರದಿ ಸಲ್ಲಿಸಿತ್ತು. ಮೂರು ರಾಜ್ಯಗಳಿಗೆ ನೀರು ಹಂಚಿಕೆ ಮಾಡಿತ್ತು. ಆದರೆ, ವರದಿಯ ಕೆಲವೊಂದು ಅಂಶಗಳಿಗೆ ರಾಜ್ಯಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಬಳಿಕ ನ್ಯಾಯಮಂಡಳಿಯ ಅವಧಿಯನ್ನು ವಿಸ್ತರಿಸಲಾಗಿತ್ತು.
2014ರಲ್ಲಿ ಆಂಧ್ರ ಪ್ರದೇಶದ ವಿಭಜನೆಯು ಜಲವಿವಾದವನ್ನು ಮತ್ತಷ್ಟು ಜಟಿಲಗೊಳಿಸಿತು. ಹೊಸದಾಗಿ ರೂಪುಗೊಂಡ ತೆಲಂಗಾಣವು ಕೃಷ್ಣಾ ಜಲ ವಿವಾದದಲ್ಲಿ ಪಾಲುದಾರನಾಯಿತು. ಅಂದಿನಿಂದ, ನ್ಯಾಯಮಂಡಳಿಯ ಗಡುವನ್ನು ಅಧಿಸೂಚನೆಗಳ ಮೂಲಕ ಹಲವು ಬಾರಿ ವಿಸ್ತರಿಸಲಾಗಿದೆ.
‘ಆಯೋಗದ ಅವಧಿ ವಿಸ್ತರಣೆ: ರಾಜ್ಯಕ್ಕೆ ಅನ್ಯಾಯ’
ಬೆಂಗಳೂರು: ‘ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ–2ರ (ಬ್ರಿಜೇಶ್ ಕುಮಾರ್ ಆಯೋಗ) ಅವಧಿಯನ್ನು ಮತ್ತೊಂದು ವರ್ಷ ವಿಸ್ತರಿಸಿರುವ ಕೇಂದ್ರ ಸರ್ಕಾರದ ಕ್ರಮ ಕರ್ನಾಟಕಕ್ಕೆ ಆಘಾತ ತಂದಿದೆ’ ಎಂದು ಕಾನೂನು, ಗಡಿ ಮತ್ತು ಜಲ ವಿವಾದ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ತಿಳಿಸಿದ್ದಾರೆ.
‘ನ್ಯಾಯಮಂಡಳಿ–2ರ ಅಂತಿಮ ತೀರ್ಪನ್ನು ಕೇಂದ್ರ ಸರ್ಕಾರ ಗೆಜೆಟ್‌ನಲ್ಲಿ ಪ್ರಕಟಿಸಬೇಕೆಂದು ಕರ್ನಾಟಕ ಹತ್ತು ವರ್ಷಗಳಿಂದ ಒತ್ತಾಯ ಮಾಡುತ್ತಿದೆ. ಇತ್ಯರ್ಥವಾಗಿರುವ ಜಲ ವಿವಾದದಲ್ಲಿ ನ್ಯಾಯ ಅಪೇಕ್ಷಿಸುತ್ತಿದ್ದ ಕರ್ನಾಟಕಕ್ಕೆ ಕೇಂದ್ರದ ತೀರ್ಮಾನದಿಂದ ಅನ್ಯಾಯವಾಗಿದೆ’ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ. ‘ಕೇಂದ್ರ ಸರ್ಕಾರ ಗೆಜೆಟ್‌ನಲ್ಲಿ ಪ್ರಕಟಣೆ ಮಾಡದೇ ಇರುವುದರಿಂದ ಕರ್ನಾಟಕದ ಪಾಲಿನ 200 ಟಿಎಂಸಿ ಅಡಿ ನೀರು ರಾಜ್ಯಕ್ಕೆ ದಕ್ಕದೇ ಬಹುದೊಡ್ಡ ಅನ್ಯಾಯಕ್ಕೆ ಕಾರಣವಾಗಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.