ಮಂಡ್ಯ: ‘ಕೃಷ್ಣರಾಜಸಾಗರ ಅಣೆಕಟ್ಟೆ ನಿರ್ಮಾಣವಾದ 93 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜೂನ್‌ನಲ್ಲಿ ಭರ್ತಿಯಾಗಿದ್ದು, ಈ ಸುಸಂದರ್ಭದಲ್ಲೇ ಬಾಗಿನ ಸಲ್ಲಿಸುವ ಮೂಲಕ ಇತಿಹಾಸ ನಿರ್ಮಾಣವಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್ ಅಣೆಕಟ್ಟೆಗೆ ಸೋಮವಾರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರು ಹಾಗೂ ಶಾಸಕರೊಂದಿಗೆ ಬಾಗಿನ ಅರ್ಪಿಸಿದ ನಂತರ ಅವರು ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ‘ವಿಶೇಷ ಬಾಗಿನ’ದ ಬಗ್ಗೆ ಎಲ್ಲ ಜನರಿಗೂ ತಿಳಿಯಬೇಕೆಂದರೆ ಕೂಡಲೇ ‘ಶಿಲಾನ್ಯಾಸ’ ಮಾಡಿಸಬೇಕು ಎಂದು ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ ಅವರಿಗೆ ಸಿಎಂ ಸೂಚಿಸಿದರು.
‘93 ವರ್ಷಗಳಲ್ಲಿ 76 ಬಾರಿ ಅಣೆಕಟ್ಟೆ ಭರ್ತಿಯಾಗಿದೆ. 17 ಬಾರಿ ಭರ್ತಿಯಾಗಿಲ್ಲ. 2023-24ರಲ್ಲಿ ಬರಗಾಲವಿತ್ತು. ಹೀಗಾಗಿ ಆ ವರ್ಷ ಡ್ಯಾಂ ತುಂಬಲಿಲ್ಲ. ಈ ಕಾರಣಕ್ಕೇ ‘ಸಿದ್ದರಾಮಯ್ಯ ಅವರ ಕಾಲ್ಗುಣ ಚೆನ್ನಾಗಿಲ್ಲ, ಕಾಂಗ್ರೆಸ್ ಸರ್ಕಾರ ಬಂದ್ರೆ ಬರ ಬರುತ್ತದೆ’ ಎಂದು ವಿರೋಧ ಪಕ್ಷಗಳು ಟೀಕಿಸಿದ್ದವು. ಮಳೆ ಬರುವುದು, ಬಿಡುವುದು ಪ್ರಕೃತಿಯ ನಿಯಮ. ಪ್ರಕೃತಿ ವಿರುದ್ಧ ನಡೆಯಲು ಯಾರಿಗೂ ಸಾಧ್ಯವಿಲ್ಲ. ಇದನ್ನು ಅರ್ಥಮಾಡಿಕೊಳ್ಳದ ವಿರೋಧ ಪಕ್ಷದವರು ಮೂರ್ಖರು, ಮೂಢಾತ್ಮರು. ಹೀಗಾಗಿಯೇ ನಾವು ಮೂಢನಂಬಿಕೆ ವಿರುದ್ಧ ಕಾಯ್ದೆ ಜಾರಿಗೊಳಿಸಿದ್ದೇವೆ’ ಎಂದು ಹೇಳಿದರು.
ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಮಳೆ–ಬೆಳೆ ಚೆನ್ನಾಗಿ ಆಗುತ್ತಿದೆ. ಈ ಬಾರಿ ರಾಜ್ಯದ ಎಲ್ಲ ಜಲಾಶಯಗಳು ತುಂಬಿರುವುದರಿಂದ ನಾಲೆಗಳ ಮೂಲಕ ನೀರು ಹರಿಸಿ, ಎಲ್ಲ ಕೃಷಿ ಜಮೀನುಗಳಿಗೆ ಸಮರ್ಪಕವಾಗಿ ನೀರು ಕೊಡಲು ಕೂಡಲೇ ಕ್ರಮವಹಿಸುತ್ತೇವೆ ಎಂದು ಭರವಸೆ ನೀಡಿದರು.
‘ಕಾವೇರಿ ನೀರಾವರಿ ನಿಗಮಕ್ಕೆ ₹3 ಸಾವಿರ ಕೋಟಿ ಅನುದಾನ ನೀಡಿದ್ದೇನೆ. ನೀರಾವರಿ ಪ್ರದೇಶದ ಶಾಸಕರಿಗೆ ₹50ರಿಂದ ₹100 ಕೋಟಿ ಅನುದಾನ ಕೊಡಲು ಡಿಸಿಎಂ ಅವರಿಗೆ ಸೂಚಿಸಿದ್ದೇನೆ. ಈಗಾಗಲೇ ಅವರು ಕೊಡುತ್ತಿದ್ದಾರೆ. ನೀರಾವರಿಯೊಂದಕ್ಕೇ ₹25 ಸಾವಿರ ಕೋಟಿ ಕೊಟ್ಟಿದ್ದೇವೆ. ನಮ್ಮನ್ನು ಟೀಕೆ ಮಾಡುತ್ತಿರುವ ವಿರೋಧ ಪಕ್ಷದವರು ಅಧಿಕಾರದಲ್ಲಿದ್ದಾಗ ಇಷ್ಟೊಂದು ಅನುದಾನ ಕೊಟ್ಟಿದ್ರಾ?’ ಎಂದು ತರಾಟೆಗೆ ತೆಗೆದುಕೊಂಡರು.
‘ಅಭಿವೃದ್ಧಿಗೆ ಹಣ ಇಲ್ಲ, ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಬುರುಡೆ ಬಿಡುತ್ತಿರುವ ಬಿಜೆಪಿಯವರು ನಾಡಿನ ಜನರಿಗೆ ಉತ್ತರಿಸಬೇಕು. ಗ್ಯಾರಂಟಿ ಯೋಜನೆಗಳಿಗೆ ₹54 ಸಾವಿರ ಕೋಟಿ ನೀಡಿದ್ದೇವೆ. ರೈತರ ಪಂಪ್‌ಸೆಟ್‌ಗಳಿಗೆ ₹19 ಸಾವಿರ ಕೋಟಿ ಸಬ್ಸಿಡಿ ನೀಡಿದ್ದೇವೆ. ದಿವಾಳಿ ಆಗಿದ್ದರೆ ಇದಕ್ಕೆಲ್ಲ ಹಣ ಎಲ್ಲಿಂದ ಬಂತು’ ಎಂದು ಸಿಎಂ ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.