ಕರ್ನಾಟಕ ಲೋಕಸೇವಾ ಆಯೋಗ
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸುತ್ತಿರುವ 2023-24ನೇ ಸಾಲಿನ 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ (ಕೆಎಸ್ಎಟಿ) ಮಧ್ಯಂತರ ತಡೆ ನೀಡಿದೆ.
ಈ ಸಂಬಂಧ ಡಿ.ಪವಿತ್ರಾ ಸೇರಿದಂತೆ ಇತರೆ 51 ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೆಎಸ್‌ಎಟಿ ನ್ಯಾಯಾಂಗ ಸದಸ್ಯ ಎಸ್.ವೈ.ವಟವಟಿ ಮತ್ತು ಆಡಳಿತ ಸದಸ್ಯೆ ಅಮಿತಾ ಪ್ರಸಾದ್ ಅವರಿದ್ದ ಪೀಠವು ಈ ಕುರಿತಂತೆ ಆದೇಶಿಸಿದ್ದು, ವಿಚಾರಣೆಯನ್ನು ಇದೇ 25ಕ್ಕೆ ಮುಂದೂಡಿದೆ.
ಪೂರ್ವಭಾವಿ ಪರೀಕ್ಷಾ ಫಲಿತಾಂಶವನ್ನು 2025ರ ಜನವರಿ 30ರಂದು ಪ್ರಕಟಿಸಿ ನೇಮಕ ಪ್ರಕ್ರಿಯೆ ಮುಂದುವರಿಸಲು ಅನುಮತಿ ನೀಡಿದ್ದ ಕೆಎಸ್‌ಎಟಿ ಇದೀಗ ಮುಖ್ಯ ಪರೀಕ್ಷೆ ನಡೆಸಲು; ಆಯೋಗವು ಜನವರಿ 29ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಮುಂದಿನ ವಿಚಾರಣೆವರೆಗೆ ಅಮಾನತ್ತಿನಲ್ಲಿ ಇರಿಸುವಂತೆ ಆದೇಶಿಸಿದೆ.
‘ಈ ಹಿಂದಿನ ದೋಷಗಳನ್ನು ಸರಿಪಡಿಸದೆ ಮುಖ್ಯ ಪರೀಕ್ಷೆ ನಡೆಸಲು ಕೆಪಿಎಸ್‌ಸಿ ಹೇಗೆ ಅಧಿಸೂಚನೆ ಹೊರಡಿಸಿದೆ’ ಎಂದು ಪ್ರಶ್ನಿಸಿರುವ ಪೀಠವು, ‘ಇಂತಹ ಸನ್ನಿವೇಶದಲ್ಲಿ ಮುಖ್ಯ ಪರೀಕ್ಷೆಗೆ ಕೆಪಿಎಸ್‌ಸಿ ಹೊರಡಿಸಿರುವ ಅಧಿಸೂಚನೆಯನ್ನು ಅಮಾನತಿಯಲ್ಲಿ ಇರಿಸುವುದೇ ಸೂಕ್ತ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.
‘ಮೇಲ್ನೋಟಕ್ಕೆ ಪ್ರಶ್ನೆಪತ್ರಿಕೆಗಳನ್ನು ಆಂಗ್ಲ ಭಾಷೆಯಿಂದ ಕನ್ನಡಕ್ಕೆ ಅನುವಾದ ಮಾಡುವಾಗ ದೋಷಗಳಾಗಿರುವುದು ಕಂಡು ಬಂದಿದೆ. ಆಯೋಗವೂ ಇದನ್ನು ಒಪ್ಪಿಕೊಂಡು ಆ ಬಗ್ಗೆ ಪರಿಶೀಲಿಸಲು ತಜ್ಞರ ಸಮಿತಿ ರಚನೆ ಮಾಡಿತ್ತು. ಅಂತೆಯೇ, ಸಮಿತಿ ನೀಡಿರುವ ವರದಿಯಲ್ಲಿ, ಪ್ರಶ್ನೆ ಪತ್ರಿಕೆ ಭಾಷಾಂತರದಲ್ಲಿ ದೋಷಗಳಾಗಿವೆ ಎಂಬುದನ್ನು ದೃಢಪಡಿಸಿದೆ. ಈ ವಿಚಾರವನ್ನು ಬಗೆಹರಿಸುವಂತೆಯೂ ಸಲಹೆ ನೀಡಿದೆ’ ಎಂಬ ಅಂಶವನ್ನು ಪೀಠವು ಉಲ್ಲೇಖಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.