ADVERTISEMENT

ಕಾಸರಗೋಡಿನ ಇಬ್ಬರು ವಶಕ್ಕೆ

ಶ್ರೀಲಂಕಾ ಬಾಂಬ್‌ ಸ್ಫೋಟ; ಐಎಸ್‌ ಸಂಪರ್ಕ

​ಪ್ರಜಾವಾಣಿ ವಾರ್ತೆ
Published 6 ಮೇ 2019, 19:39 IST
Last Updated 6 ಮೇ 2019, 19:39 IST

ಕಾಸರಗೋಡು: ಶ್ರೀಲಂಕಾ ಬಾಂಬ್ ಸ್ಫೋಟದ ಬಳಿಕ ಕಾಸರಗೋಡಿನಿಂದ ಎನ್‌ಐಎ ಕಸ್ಟಡಿಗೆ ಪಡೆದ ಇಬ್ಬರು, ಐಎಸ್ ಜತೆ ಸಂಬಂಧ ಹೊಂದಿರುವ ಬಗ್ಗೆ ಮಾಹಿತಿ ದೊರೆತಿದ್ದು, ಇಬ್ಬರನ್ನೂ ಆರೋಪಿಗಳೆಂದು ಘೋಷಿಸಲಾಗಿದೆ. ಐಎಸ್ ಸಂಘಟನೆ ಜತೆ ಸಂಬಂಧ ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಕಾಸರಗೋಡು ಕೂಡ್ಲು ಕಾಳ್ಯಂಗಾಡು ನಿವಾಸಿ ಅಹಮ್ಮದ್ ಅರಾಫತ್ (23) ಹಾಗೂ ವಿದ್ಯಾನಗರ ನಾಯಮ್ಮಾರಮೂಲೆ ಅಬೂಬಕ್ಕರ್ ಸಿದ್ದಿಕ್ (28) ಬಂಧಿತ ಆರೋಪಿಗಳು. ಶ್ರೀಲಂಕಾ ಸ್ಫೋಟದ ಹಿನ್ನೆಲೆಯಲ್ಲಿ ಇವರಿಬ್ಬರನ್ನೂ ಕೊಚ್ಚಿಯ ಎನ್‌ಐಎ ದಳ ಕಸ್ಟಡಿಗೆ ಪಡೆದಿತ್ತು.

ಶ್ರೀಲಂಕಾದಲ್ಲಿ ಆತ್ಮಾಹುತಿ ಸ್ಫೋಟ ನಡೆಸಿದ ತೌಹೀತ್ ಜಮಾಯತ್‌ನ ನಾಯಕ ಸಫ್ರಾನ್ ಹಾಶೀಂನ ಅಭಿಮಾನಿಗಳಾಗಿದ್ದು, ಹಾಶೀಂನ ಭಾಷಣದಿಂದ ಸ್ಫೂರ್ತಿ ಪಡೆದಿದ್ದರು ಎನ್ನಲಾಗಿದೆ. ಇವರಿಬ್ಬರ ಜತೆಗೆ ಕೊಲ್ಲಂ ನಿವಾಸಿ ಮೊಹಮ್ಮದ್ ಫೈಜಲ್ ಎಂಬಾತನನ್ನೂ ಐಎಸ್ ಸಂಬಂಧದ ಆಧಾರದಲ್ಲಿ ಆರೋಪಿ ಎಂದು ಘೋಷಿಸಲಾಗಿದೆ. ಈ ಬಗ್ಗೆ ಎನ್‌ಐಎ ತಂಡ, ಕೊಚ್ಚಿ ವಿಶೇಷ ನ್ಯಾಯಾಲಯದಲ್ಲಿ ವರದಿ ಸಲ್ಲಿಸಿದೆ.

ADVERTISEMENT

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಲ್ಘಾಟ್‌ನ ರಿಯಾಜ್ ಅಬೂಬಕ್ಕರ್ ಮೇಲೆಯೂ ಆರೋಪ ಹೊರಿಸಲಾಗಿದೆ. ನ್ಯಾಯಾಂಗ ಬಂಧನದಲ್ಲಿದ್ದ ಆತನನ್ನು ಹೆಚ್ಚಿನ ವಿಚಾರಣೆಗಾಗಿ ಎನ್‌ಐಎ ಕಸ್ಟಡಿಗೆ ಪಡೆದಿದೆ. ಜಹ್ರಾನ್ ಹಾಶೀಮ್ ಜತೆ ರಿಯಾಜ್ ವಿಚಾರ ವಿನಿಮಯ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.

ಕಾಸರಗೋಡಿನಿಂದ 2016 ರಲ್ಲಿ 20 ಮಂದಿ ಸಿರಿಯಾದ ಐಎಸ್ ಕೇಂದ್ರಕ್ಕೆ ಹೋಗಿದ್ದು, ಅದರ ಸೂತ್ರಧಾರನಾದ ತ್ರಿಕರಿಪುರದ ರಾಶೀದ್ ಜತೆ, ಕಾಸರಗೋಡಿನ ಇಬ್ಬರ ಸಹಿತ ನಾಲ್ವರು ಆರೋಪಿಗಳು ನಿಕಟ ಸಂಪರ್ಕ ಹೊಂದಿದ್ದರು ಎಂಬ ಆರೋಪದ ಮೇರೆಗೆ ಇವರನ್ನು ಬಂಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.