
ಬೆಂಗಳೂರು: ‘ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ (ಕೆಎಸ್‌ಎಲ್‌ಯು) 2025-2026ನೇ ಸಾಲಿನ ಪ್ರವೇಶಾತಿಗೆ ವಿದ್ಯಾರ್ಥಿಗಳಿಂದ ಕಾನೂನು ಬಾಹಿರವಾಗಿ ಅಧಿಕ ಶುಲ್ಕ ಸಂಗ್ರಹಿಸಲಾಗಿದೆ’ ಎಂದು ಆರೋಪಿಸಲಾದ ಅರ್ಜಿಗೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯದ ಕುಲಪತಿಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.
ಈ ಸಂಬಂಧ ನಗರದ ಬಿಎಂಎಸ್ ಕಾನೂನು ಕಾಲೇಜಿನ ವಿದ್ಯಾರ್ಥಿನಿ ಎನ್.ಪ್ರಿಯಾಂಕ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ಹೈಕೋರ್ಟ್ ವಕೀಲ ಎಚ್.ಪವನಚಂದ್ರ ಶೆಟ್ಟಿ ವಾದ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ಕೆಎಸ್‌ಎಲ್‌ಯು ಕುಲಪತಿ ಹಾಗೂ ಕುಲಸಚಿವರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆಯನ್ನು ಇದೇ 29ಕ್ಕೆ ಮುಂದೂಡಿತು.
ಆಕ್ಷೇಪ ಏನು?: ‘ಕರ್ನಾಟಕ ಕಾನೂನು ವಿಶ್ವವಿದ್ಯಾಲಯ 2025-26ನೇ ಸಾಲಿನ ಪ್ರವೇಶ ಶುಲ್ಕ ಪರಿಷ್ಕರಿಸಿ ಸುತ್ತೋಲೆ ಹೊರಡಿಸಿದ್ದು, ವಿದ್ಯಾರ್ಥಿಗಳಿಂದ ವಿವಿಧ ಬಗೆಯ ಶುಲ್ಕಗಳ ಹೆಸರಿನಲ್ಲಿ ಕಾನೂನುಬಾಹಿರವಾಗಿ ಅಧಿಕ ಪ್ರವೇಶ ಶುಲ್ಕ ಸಂಗ್ರಹಿಸಿದೆ. ಈ ರೀತಿ ಶುಲ್ಕ ವಿಧಿಸುವ ಅಧಿಕಾರ ಶೈಕ್ಷಣಿಕ ಮಂಡಳಿಗಾಗಲಿ, ಕುಲಪತಿಗಾಗಲಿ ಇಲ್ಲ. ಈ ಹಿಂದಿನ ಶೈಕ್ಷಣಿಕ ಸಾಲಿಗೆ ಹೋಲಿಸಿದರೆ 2025-26ನೇ ಸಾಲಿನಲ್ಲಿ ವಿದ್ಯಾರ್ಥಿಗಳಿಂದ ಅತ್ಯಧಿಕ ಮೊತ್ತದ ಹೆಚ್ಚುವರಿ ಶುಲ್ಕ ಸಂಗ್ರಹಿಸಲಾಗಿದೆ’ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.