ADVERTISEMENT

ಕೆಎಸ್‌ಎಲ್‌ಯು ವೇಳಾಪಟ್ಟಿ ರದ್ದು

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2021, 18:17 IST
Last Updated 8 ಫೆಬ್ರುವರಿ 2021, 18:17 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಒಂದರಿಂದ ನಾಲ್ಕನೇ ವರ್ಷದ ಕಾನೂನು ವಿದ್ಯಾರ್ಥಿಗಳಿಗೆ ಮಧ್ಯಂತರ ಸೆಮಿಸ್ಟರ್ ಪರೀಕ್ಷೆ ನಡೆಸಲು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ(ಕೆಎಸ್‌ಎಲ್‌ಯು) ಹೊರಡಿಸಿದ್ದ ಸುತ್ತೋಲೆ ಮತ್ತು ವೇಳಾಪಟ್ಟಿಯನ್ನು ಹೈಕೋರ್ಟ್ ರದ್ದುಪಡಿಸಿದೆ. ಬೆಸ ಸಂಖ್ಯೆಯ(1,3,5,7) ಸೆಮಿಸ್ಟರ್‌ಗಳಿಗೆ ಮಾತ್ರ ವೇಳಾಪಟ್ಟಿ ಪ್ರಕಟಿಸಬಹುದು ಎಂದು ಹೇಳಿದೆ.

‘ಹಿಂದಿನ ಸೆಮಿಸ್ಟರ್‌ನ ಸಾಧನೆಯಲ್ಲಿ ಶೇ 50ರಷ್ಟು ಮತ್ತು ಆಂತರಿಕ ಮೌಲ್ಯಮಾಪನದ ಶೇ 50ರಷ್ಟು ಅಂಕಗಳನ್ನು ಆಧಾರವಾಗಿ ಇಟ್ಟುಕೊಂಡು ಸಾಧ್ಯವಾದರೆ ಸಮ ಸಂಖ್ಯೆಯ(2,4,6,8) ಸೆಮಿಸ್ಟರ್‌ ಪರೀಕ್ಷೆಯ ಮೌಲ್ಯಮಾಪನ ಮಾಡಬಹುದು. ಅಂಕಪಟ್ಟಿಯನ್ನೂ ಕೂಡ ನೀಡಬಹುದು’ ಎಂದು ನ್ಯಾಯಮೂರ್ತಿ ಆರ್.ದೇವದಾಸ್ ಅಭಿಪ್ರಾಯಪಟ್ಟರು.

ಭಾರತೀಯ ವಕೀಲರ ಪರಿಷತ್ತು(ಬಿಸಿಐ) 2020ರ ನವೆಂಬರ್‌ 9ರಂದು ಹೊರಡಿಸಿದ ಸುತ್ತೋಲೆ ಮತ್ತು ಕೆಎಸ್‌ಎಲ್‌ಯು ಹೊರಡಿಸಿದ ಸುತ್ತೋಲೆಯನ್ನು ಪೀಠ ರದ್ದುಪಡಿಸಿತು.

ADVERTISEMENT

5 ವರ್ಷಗಳ ಕಾನೂನು ಕೋರ್ಸ್‌ನ 1ನೇ ವರ್ಷದಿಂದ 4ನೇ ವರ್ಷದ ಪರೀಕ್ಷೆಗಳಿಗೆ ವಿದ್ಯಾರ್ಥಿಗಳಿಗೆ ಹೊಸ ವೇಳಾಪಟ್ಟಿ ಪ್ರಕಟಿಸಬಹುದು. ಅದು ಸಮ ಸೆಮಿಸ್ಟರ್‌ಗಳಿಗೆ ಮಾತ್ರ ಅನ್ವಯವಾಗುತ್ತದೆ ಎಂದು ಪೀಠ ಹೇಳಿತು.

ಬಿಐಸಿ ಮತ್ತು ಕೆಎಸ್‌ಎಲ್‌ಯು ಸುತ್ತೋಲೆ ಪ್ರಶ್ನಿಸಿ ಬೆಂಗಳೂರಿನ ಸೇಂಟ್ ಜೋಸೆಫ್ ಕಾನೂನು ಕಾಲೇಜಿನ 3ನೇ ವರ್ಷದ ಕಾನೂನು ವಿದ್ಯಾರ್ಥಿ ರಿತ್ವಿಕ್ ಬಾಲನಾಗರಾಜ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ‘ವಿವಿಧ ಕಾರಣಗಳಿಂದ ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳ ಮೇಲೆ ಈ ಪರೀಕ್ಷೆ ಪ್ರತಿಕೂಲ ಪರಿಣಾಮ ಬೀರುತ್ತದೆ’ ಎಂದು ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.