ADVERTISEMENT

ಕೆಎಸ್‌ಒಯು: 75 ಸಾವಿರ ಅಭ್ಯರ್ಥಿಗಳಿಗಿಲ್ಲ ಪ್ರಮಾಣಪತ್ರ

2012–13 ಮುತ್ತು 2013–14ನೇ ಸಾಲಿನಲ್ಲಿ ವ್ಯಾಸಂಗ * ಪರೀಕ್ಷೆ ಬರೆದಿದ್ದ ಸಿ.ಟಿ. ರವಿ, ಡಿ.ಕೆ. ಶಿವಕುಮಾರ್, ಉಮಾಶ್ರೀ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2020, 19:30 IST
Last Updated 25 ಡಿಸೆಂಬರ್ 2020, 19:30 IST
ಕೆಎಸ್‌ಒಯು
ಕೆಎಸ್‌ಒಯು   

ಬೆಂಗಳೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ (ಕೆಎಸ್‌ಒಯು) 2012–13 ಮತ್ತು 2013–14ನೇ ಸಾಲಿನಲ್ಲಿ ಪರೀಕ್ಷೆ ತೆಗೆದುಕೊಂಡ 75 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಈವರೆಗೆ ಪ್ರಮಾಣಪತ್ರವನ್ನೇ ವಿತರಿಸಿಲ್ಲ. ಈ ಸಾಲಿನಲ್ಲಿ ಪರೀಕ್ಷೆ ಬರೆದವರ ಪೈಕಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾಂಗ್ರೆಸ್‌ ನಾಯಕಿ ಉಮಾಶ್ರೀ ಅವರಂತಹ ಗಣ್ಯರೂ ಇರುವುದು ವಿಶೇಷ.

ಈ ಅಭ್ಯರ್ಥಿಗಳಿಗೆ ಪದವಿ ಪ್ರಮಾಣಪತ್ರವನ್ನು ವಿತರಿಸುವಂತೆ ರಾಜ್ಯಪಾಲ ವಜುಭಾಯಿ ವಾಲಾ ಅವರು 2020ರ ಜೂನ್‌ನಲ್ಲಿಯೇ ಉನ್ನತ ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದರು. ಆದರೂ, ರಾಜ್ಯಸರ್ಕಾರ ಈವರೆಗೆ ಈ ನಿಟ್ಟಿನಲ್ಲಿ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಅಭ್ಯರ್ಥಿಗಳು ದೂರಿದ್ದಾರೆ. ಪ್ರಮಾಣಪತ್ರ ಸಿಗದ ಕಾರಣ ಖಾಸಗಿ ಮತ್ತು ಸರ್ಕಾರಿ ವಲಯದಲ್ಲಿ ಅನೇಕ ಉದ್ಯೋಗಾವಕಾಶಗಳನ್ನು ಕಳೆದುಕೊಳ್ಳುವಂತಾಗಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

‘2012–13 ಮತ್ತು 2013–14ನೇ ಸಾಲಿನಲ್ಲಿ ಕಲೆ, ವಾಣಿಜ್ಯದಂತಹ ತಾಂತ್ರಿಕೇತರ ಕೋರ್ಸ್‌ಗಳಲ್ಲಿ ಪದವಿ ಪ್ರಮಾಣ ಪತ್ರ ವಿತರಿಸಲು ಒಮ್ಮೆ ಅವಕಾಶ ನೀಡುವಂತೆ ಕೆಎಸ್‌ಒಯು ಪ್ರಸ್ತಾವ ಸಲ್ಲಿಸಿದೆ. ಈ ನಿಟ್ಟಿನಲ್ಲಿ ಸರ್ಕಾರ ನಿರ್ದಿಷ್ಟ ಆದೇಶ ನೀಡಬೇಕು’ ಎಂದು ರಾಜ್ಯಪಾಲರು ಸರ್ಕಾರಕ್ಕೆ ಬರೆದ ಪತ್ರದಲ್ಲಿ ನಿರ್ದೇಶನ ನೀಡಿದ್ದರು. ಆದರೆ, ಈ ಪತ್ರ ಬರೆದು 7 ತಿಂಗಳು ಕಳೆದರೂ ಉನ್ನತ ಶಿಕ್ಷಣ ಇಲಾಖೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

ADVERTISEMENT

ಅಧಿವೇಶನದಲ್ಲೂ ಪ್ರಸ್ತಾಪ:ಇತ್ತೀಚೆಗೆ ನಡೆದ ವಿಧಾನಸಭೆ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್‌ ಸದಸ್ಯ ಮರಿತಿಬ್ಬೇಗೌಡ ಈ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಿದ್ದರು. ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರವನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು.

ವಿವಾದವೇನು ?

ವಿಶ್ವವಿದ್ಯಾಲಯದ ವ್ಯಾಪ್ತಿ ಮತ್ತು ಪ್ರದೇಶ ನಿಯಮ ಮೀರಿ ಪ್ರಾದೇಶಿಕ ಅಧ್ಯಯನ ಕೇಂದ್ರಗಳಿಗೆ ಅನುಮತಿ ನೀಡಲಾಗಿದೆ. ಇದು ನಿಯಮ ಬಾಹಿರ ಎಂದಿದ್ದ ವಿಶ್ವವಿದ್ಯಾಲಯ ಅನುದಾನ ಆಯೋಗವು 2012–13 ಮತ್ತು 2013–14ನೇ ಸಾಲಿನಲ್ಲಿ ಬ್ಯಾಚ್‌ಗಳಿಗೆ ನೀಡಿದ್ದ ಅನುಮತಿಯನ್ನು ರದ್ದುಗೊಳಿಸಿತ್ತು. ಈ ಕುರಿತು ತನಿಖೆಗೆ ರಾಜ್ಯಪಾಲರು ಆದೇಶಿಸಿದ್ದರು. ಅಧ್ಯಯನ ಕೇಂದ್ರದ ಸ್ಥಾಪನೆ ವೇಳೆ ಅಕ್ರಮ ನಡೆದಿದ್ದು ತನಿಖೆಯಿಂದ ಸಾಬೀತಾಗಿತ್ತು. ಕೆಎಸ್‌ಒ ಆಗಿನ ಕುಲಪತಿ ಮತ್ತು ಇತರರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ತನಿಖಾ ಸಮಿತಿ ಶಿಫಾರಸು ಮಾಡಿತ್ತು.

‘ವಿಶ್ವವಿದ್ಯಾಲಯದ ಕುಲಪತಿ ಮತ್ತು ಅಧಿಕಾರಿಗಳು ನಡೆಸಿದ ಅಕ್ರಮದಿಂದ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ಅಕ್ರಮದಲ್ಲಿ ಭಾಗಿಯಾದವರು ಚೆನ್ನಾಗಿಯೇ ಇದ್ದಾರೆ. ಆದರೆ, ಏಳು ವರ್ಷಗಳಿಂದ ಪದವಿ ಪ್ರಮಾಣ ಪತ್ರ ಸಿಗದೆ ಅಭ್ಯರ್ಥಿಗಳು ಅವಕಾಶ ಕಳೆದುಕೊಳ್ಳುವಂತಾಗಿದೆ’ ಎಂದು ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಅಲಭ್ಯ

ಈ ಕುರಿತು ಪ್ರತಿಕ್ರಿಯೆ ಪಡೆಯಲು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತು. ಅವರು ಸಂಪರ್ಕಕ್ಕೆ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.