ADVERTISEMENT

ಕೆಆರ್‌ಎಸ್‌ ಬಳಿ ಪರೀಕ್ಷಾರ್ಥ ಸ್ಫೋಟಕ್ಕೆ ತಯಾರಿ

​ಪ್ರಜಾವಾಣಿ ವಾರ್ತೆ
Published 24 ಜನವರಿ 2019, 20:15 IST
Last Updated 24 ಜನವರಿ 2019, 20:15 IST
   

ಮಂಡ್ಯ: ಕಲ್ಲು ಗಣಿಗಾರಿಕೆಯಿಂದ ಕೆಆರ್‌ಎಸ್‌ ಜಲಾಶಯಕ್ಕೆ ಉಂಟಾಗುವ ಪರಿಣಾಮಗಳ ಅಧ್ಯಯನಕ್ಕಾಗಿ ಜಲಾಶಯದ ಸುತ್ತಮುತ್ತ ಪರೀಕ್ಷಾರ್ಥ ಸ್ಫೋಟ ನಡೆಸಲು ಪುಣೆಯ ಕೇಂದ್ರ ಜಲ ಮತ್ತು ಶಕ್ತಿ ಸಂಶೋಧನಾ ಕೇಂದ್ರದ (ಸಿಡಬ್ಲ್ಯುಪಿಆರ್‌ಎಸ್‌) ತಂಡ ಜಿಲ್ಲೆಗೆ ಬಂದಿದೆ.

ಕಲ್ಲು ಗಣಿಗಾರಿಕೆಯಿಂದ ಜಲಾಶಯಕ್ಕೆ ಧಕ್ಕೆಯಾಗುವ ಸಂಭವವಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ವರದಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಜಲಾಶಯದ 20 ಕಿ.ಮೀ ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆ ನಡೆಸದಂತೆ ಜಿಲ್ಲಾಡಳಿತ ತಾತ್ಕಾಲಿಕ ನಿಷೇಧ ಹೇರಿತ್ತು. ಗಣಿಗಾರಿಕೆಯಿಂದ ಉಂಟಾಗುತ್ತಿರುವ ಪರಿಣಾಮಗಳ ಬಗ್ಗೆ ಉನ್ನತ ಮಟ್ಟದ ಸಂಸ್ಥೆಯಿಂದ ಅಧ್ಯಯನ ನಡೆಸಬೇಕು ಎಂದು ವಿವಿಧ ಸಂಘಟನೆಗಳು ಒತ್ತಾಯಿಸಿದ್ದವು.

ಅಧ್ಯಯನ ನಡೆಸುವಂತೆ ಕೋರಿ ಪುಣೆಯ ಸಿಡಬ್ಲ್ಯುಪಿಆರ್‌ಎಸ್‌ಗೆ ಮನವಿ ಸಲ್ಲಿಸಲಾಗಿತ್ತು. ಜ. 24ರಿಂದ 5 ದಿನಗಳ ಕಾಲ ಜಲಾಶಯದ ಉತ್ತರ ಭಾಗದಲ್ಲಿ ಪರೀಕ್ಷಾರ್ಥ ಸ್ಫೋಟ ನಡೆಯಲಿದೆ. ಸ್ಫೋಟದ ಸಂದರ್ಭದಲ್ಲಿ ಜನರು, ವಾಹನಗಳ ಓಡಾಟದ ಮೇಲೆ ನಿರ್ಬಂಧ ವಿಧಿಸಿ ಜಿಲ್ಲಾಡಳಿತ ಆದೇಶಿಸಿದೆ.

ADVERTISEMENT

ಸಿಡಬ್ಲ್ಯುಪಿಆರ್‌ಎಸ್ ತಂಡ ಜಿಲ್ಲೆಗೆ ಬಂದಿದ್ದು ಶುಕ್ರವಾರ ಬೆಳಿಗ್ಗೆ ಪರೀಕ್ಷಾ ಸ್ಫೋಟ ನಡೆಸಲಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಮೂಲಗಳು ತಿಳಿಸಿವೆ.

ದೂರು ದಾಖಲು: ಪರೀಕ್ಷಾರ್ಥ ಸ್ಫೋಟಕ್ಕೆ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಅನುಮತಿ ಪಡೆಯಬೇಕು. ಅರಣ್ಯ, ಪಕ್ಷಿಧಾಮಗಳಿರುವ ಸೂಕ್ಷ್ಮ ಪ್ರದೇಶದಲ್ಲಿ ಸ್ಫೋಟಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಆರ್‌ಟಿಐ ಕಾರ್ಯಕರ್ತ ಕೆ.ಆರ್‌.ರವೀಂದ್ರ ಗುರುವಾರ ಅರಣ್ಯ ಇಲಾಖೆಗೆ ದೂರು ಸಲ್ಲಿಸಿದ್ದಾರೆ.

‘ಕಲ್ಲು ಗಣಿಗಾರಿಕೆಯಿಂದ ಕೆಆರ್‌ಎಸ್‌ ಜಲಾಶಯಕ್ಕೆ ಧಕ್ಕೆ ಉಂಟಾಗುತ್ತಿದೆ ಎಂದು ಸರ್ಕಾರಿ ಸಂಸ್ಥೆಯೇ ವರದಿ ನೀಡಿದೆ. ಈಗ ಮತ್ತೊಮ್ಮೆ ಪರೀಕ್ಷೆ ನಡೆಸುವ ದೃಷ್ಟಿಯಿಂದ ಸ್ಫೋಟ ನಡೆಸಲು ಅನುಮತಿ ನೀಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಹಿಂದೊಮ್ಮೆ ಗಣಿ ಮಾಲೀಕರು, ಏಜೆನ್ಸಿಯೊಂದರಿಂದ ಪರೀಕ್ಷೆ ಮಾಡಿಸಿ ಕಲ್ಲು ಸ್ಫೋಟದಿಂದ ಜಲಾಶಯಕ್ಕೆ ಧಕ್ಕೆ ಇಲ್ಲ ಎಂಬ ವರದಿ ಪಡೆದಿದ್ದರು. ಗಣಿ ಧಣಿಗಳ ಒತ್ತಡಕ್ಕೆ ಮಣಿದು ಜಿಲ್ಲಾಧಿಕಾರಿ ಸಿಡಬ್ಲ್ಯುಪಿಆರ್‌ಎಸ್‌ ತಂಡದ ಅಧ್ಯಯನಕ್ಕೆ ಅನುಮತಿ ನೀಡಿದ್ದಾರೆ. ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ನೇತೃತ್ವದಲ್ಲೇ ಪರೀಕ್ಷೆ ನಡೆಯಬೇಕು’ ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

‘ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಅಧ್ಯಯನಕ್ಕೆ ಅನುಮತಿ ನೀಡಲಾಗಿದೆ. ಪರೀಕ್ಷಾರ್ಥ ಸ್ಫೋಟಕ್ಕೆ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಅನುಮತಿ ಅಗತ್ಯವಿಲ್ಲ’ ಎಂದು ಜಿಲ್ಲಾಧಿಕಾರಿ ಎನ್‌.ಮಂಜುಶ್ರೀ ‘ಪ್ರಜಾವಾಣಿ’ಗೆ ತಿಳಿಸಿದರು.

ಪುಣೆಯ ತಜ್ಞರಿಂದ ಈ ಪರೀಕ್ಷೆ

ಪುಣೆಯ ಸಿಡಬ್ಲ್ಯುಪಿಆರ್‌ಎಸ್‌ ತಂತ್ರಜ್ಞರು ಪರೀಕ್ಷೆಗಾಗಿ ಕೆಆರ್‌ಎಸ್‌ ಆಸುಪಾಸಿನಲ್ಲಿ ಕಲ್ಲು ಸ್ಫೋಟ ನಡೆಸಲಿದ್ದಾರೆ. ಸ್ಫೋಟದ ವಿವರ ಕೆಆರ್‌ಎಸ್‌ ಬಳಿ ಇರುವ ಉಪಗ್ರಹ ಆಧಾರಿತ ಭೂಕಂಪ ಭೂಮಾಪನ ಜಾಲ ಕೇಂದ್ರದಲ್ಲಿ ದಾಖಲಾಗಲಿದೆ. ಅಲ್ಲಿಯ ಮಾಹಿತಿ ಆಧಾರದ ಮೇಲೆ ಗಣಿಗಾರಿಕೆಯಿಂದ ಜಲಾಶಯಕ್ಕೆ ಉಂಟಾಗುವ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಿ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.