ADVERTISEMENT

ಕುಂದಾಪುರ: ಗುಜರಿ ಬಸ್‌ಗೆ ಸ್ಮಾರ್ಟ್‌ಕ್ಲಾಸ್‌ ರೂಪ!

ಬಗ್ವಾಡಿ ಗ್ರಾಮದ ಸೋದರರ ಪ್ರಯತ್ನ, ಇಂದು ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2022, 20:42 IST
Last Updated 11 ಮಾರ್ಚ್ 2022, 20:42 IST
ಉದ್ಘಾಟನೆಗೆ ಸಿದ್ಧವಾಗಿರುವ ಸ್ಮಾರ್ಟ್‌ ಕ್ಲಾಸ್‌ ಹೊಂದಿರುವ ಬಸ್‌
ಉದ್ಘಾಟನೆಗೆ ಸಿದ್ಧವಾಗಿರುವ ಸ್ಮಾರ್ಟ್‌ ಕ್ಲಾಸ್‌ ಹೊಂದಿರುವ ಬಸ್‌   

ಕುಂದಾಪುರ: ಗುಜರಿಗೆ ಸೇರಬೇಕಾಗಿದ್ದ ಕೆಎಸ್‌ಆರ್‌ಟಿಸಿಯ ಹಳೆಯ ಬಸ್ ಈಗ ಗ್ರಾಮೀಣ ಮಕ್ಕಳಿಗೆ ಅಕ್ಷರ ಕಲಿಕೆಯ ತಾಣವಾಗಿದೆ. ಹಳೆಯ ಬಸ್‌ ಅನ್ನು ಗ್ರಾಮೀಣ ಕಲಾವಿದರು ‘ಹೈಟೆಕ್‌ ಸ್ಮಾರ್ಟ್‌ಕ್ಲಾಸ್‌’ ಆಗಿ ಪರಿವರ್ತಿಸಿದ್ದಾರೆ.

ಸಹೋದರರಾದ ಪ್ರಶಾಂತ್ ಆಚಾರ್‌ ಹಾಗೂ ಪ್ರಕಾಶ್ ಆಚಾರ್‌ ಬಸ್‌ ಅನ್ನು ಶಾಲಾ ಕೊಠಡಿಯಾಗಿ ಪರಿವರ್ತಿಸಿದ್ದಾರೆ. ಮೆಕ್ಯಾನಿಕ್‌ ಆದ ಪ್ರಕಾಶ್ ಅವರು ಬಸ್‌ನ ಒಳಭಾಗವನ್ನು ಶಾಲಾ ಕೊಠಡಿಯಂತೆ ರೂಪಿಸಿದ್ದಾರೆ. ಇವರ ತಮ್ಮ, ಕಲಾವಿದ ಪ್ರಶಾಂತ್ ಆಚಾರ್ ಅವರು ಬಸ್‌ನ ಹೊರಭಾಗ ಮತ್ತು ಒಳಾಂಗಣವನ್ನು ಆಕರ್ಷಕವಾಗಿ ವಿನ್ಯಾಸಗೊಳಿಸಿದ್ದಾರೆ.

ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕು ಬಗ್ವಾಡಿ ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಹೈಟೆಕ್‌ ಸ್ಮಾರ್ಟ್‌ಕ್ಲಾಸ್‌ ಶನಿವಾರ ಉದ್ಘಾಟನೆಗೊಳ್ಳಲಿದೆ.

ADVERTISEMENT

ಕೋವಿಡ್‌, ಲಾಕ್‌ಡೌನ್‌ ವೇಳೆಯಲ್ಲಿ ಈ ಸಹೋದರರು ಬಸ್‌ ಅನ್ನು ಶಾಲಾ ಕೊಠಡಿಯಾಗಿ ಪರಿವರ್ತಿಸಿದ ಮಾದರಿ ತಯಾರಿಸಿದ್ದರು. ಆಗ, ಸಾರಿಗೆ ಸಚಿವರಾಗಿದ್ದ ಲಕ್ಷ್ಮಣ ಸವದಿ ಹಾಗೂ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಅವರು ಈ ಯತ್ನವನ್ನು ಶ್ಲಾಘಿಸಿ, ಇವರನ್ನು ಸನ್ಮಾನಿಸಿದ್ದರು. ಆಗ, ಗುಜರಿ ಬಸ್‌
ಒಂದನ್ನು ಕೊಡುಗೆ ನೀಡುವಂತೆ ಮಾಡಿದ್ದ ಮನವಿಗೆ ಸೂಕ್ತ ಸ್ಪಂದನೆ ಸಿಕ್ಕಿತ್ತು.

ಬಸ್‌ನಲ್ಲಿ ಚಾಲಕನ ಆಸನ, ಇತರ ವ್ಯವಸ್ಥೆಗಳು ಮೂಲ ಸ್ವರೂಪದಲ್ಲೇ ಇವೆ. ಉಳಿದಂತೆ 25 ವಿದ್ಯಾರ್ಥಿಗಳು ಕುಳಿತುಕೊಳ್ಳುವಂತೆ ಬದಲಿಸಲಾಗಿದೆ. ಪಾಠ ಬೋಧನೆಗೆ ಪ್ರೊಜೆಕ್ಟರ್ ಇದೆ. ಕಿಟಕಿಗಳ ಮೇಲಿನ ಭಾಗದ ಗಾಜಿಗೆ ಸ್ವಾತಂತ್ರ್ಯ ಹೋರಾಟಗಾರರು, ಸಮಾಜ ಸುಧಾರಕರು, ಸಾಹಿತಿಗಳ ಭಾವಚಿತ್ರಗಳನ್ನು ಅಳವಡಿಸಲಾಗಿದೆ. ಗ್ರಂಥಾಲಯದ ವ್ಯವಸ್ಥೆಯೂ ಇದೆ. ಫ್ಯಾನ್‌, ಕೈ ತೊಳೆಯಲು ಬೇಸಿನ್ವ್ಯವಸ್ಥೆಯನ್ನು ಈ ‘ಸ್ಮಾರ್ಟ್‌ ಕ್ಲಾಸ್’ನಲ್ಲಿ ಕಾಣ
ಬಹುದು.ಕರಾವಳಿ ಪರಂಪರೆಯನ್ನು ಬಿಂಬಿಸುವ ರಥೋತ್ಸವ, ಯಕ್ಷಗಾನ, ಕೋಲದ ಚಿತ್ರಗಳಿವೆ. ಬಸ್‌ ತದ್ರೂಪು ಮಾದರಿ ಕುರಿತ ಪತ್ರಿಕಾ ವರದಿಗಳು, ಸಚಿವರು, ಅಧಿಕಾರಿಗಳ ಭೇಟಿಯ ವಿವರಹೊರಭಾಗದಲ್ಲಿದೆ.

‘ನಮ್ಮೂರ ಶಾಲೆಯಲ್ಲಿ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಳಕ್ಕೆ ಇದು ವಿನೂತನ ಪ್ರಯತ್ನವಾಗಿದೆ. ಪ್ಲೈವುಡ್, ಮ್ಯಾಟ್ ಜೋಡಣೆ, ಪೇಟಿಂಗ್ ಸೇರಿದಂತೆ ಅಂದಾಜು ₹2 ಲಕ್ಷದವರೆಗೆ ಖರ್ಚಾಗಿದೆ’ ಎಂದು ಸಹೋದರರು ತಿಳಿಸಿದ್ದಾರೆ.

ಈ ಶಾಲೆಯಲ್ಲಿ ಹಿಂದೆ 40 ಮಕ್ಕಳಿದ್ದವು. ಈಗ ಇದೀಗ 87 ಮಕ್ಕಳು ಇವೆ. ಶಾಲೆಗೆ ಅಗತ್ಯ ಶಿಕ್ಷಕರ ಹಾಗೂ ಕೊಠಡಿ ಕೊರತೆ ಇದೆ. ಸರ್ಕಾರ ಇತ್ತ ಗಮನಿಸಬೇಕು ಎಂದು ಶಾಲೆಯಹಳೆಯ ವಿದ್ಯಾರ್ಥಿರಾಧಾಕೃಷ್ಣ ಗಾಣಿಗ
ಅಭಿಪ್ರಾಯಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.