ADVERTISEMENT

ಮುಖ್ಯಮಂತ್ರಿ ನಡೆ ಅಕ್ಷಮ್ಯ

ಇಂಗ್ಲಿಷ್‌ ಶಾಲೆ ಆರಂಭಿಸುವ ನಿಲುವಿನಿಂದ ಸರ್ಕಾರಕ್ಕೆ ಗಂಡಾಂತರ– ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2019, 19:27 IST
Last Updated 8 ಜನವರಿ 2019, 19:27 IST
ಕುಂ.ವೀರಭದ್ರಪ್ಪ
ಕುಂ.ವೀರಭದ್ರಪ್ಪ   

ಅಂಕೋಲಾ: ‘ಕನ್ನಡ ಸಾಹಿತ್ಯ ಪರಂಪರೆ, ಸಂಸ್ಕೃತಿಯ ಮೇಲೆ ಗದಾಪ್ರಹಾರ ಮಾಡಲು ಹೊರಟಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ನಡೆ ಅಕ್ಷಮ್ಯವಾಗಿದೆ. ಅವರ ಈ ನಡೆಯಿಂದ ಸಮ್ಮಿಶ್ರ ಸರಕಾರಕ್ಕೆ ಗಂಡಾಂತರ ಎದುರಾಗಲಿದೆ’ ಎಂದು ಸಾಹಿತಿ ಕುಂ.ವೀರಭದ್ರಪ್ಪ ಮಂಗಳವಾರ ಇಲ್ಲಿ
ಅಭಿಪ್ರಾಯಪಟ್ಟರು.

ಅಂಕೋಲಾ ತಾಲ್ಲೂಕು ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ‘ಕನ್ನಡ ಭಾಷೆ ಏನೆಂಬುದರ ಅರಿವಿಲ್ಲದೇ ಮುಖ್ಯಮಂತ್ರಿ, ಕನ್ನಡ ಭಾಷೆಗೆ ಸಮಾಧಿ ಕಟ್ಟಿ ಇಂಗ್ಲಿಷ್‌ ಪೋಷಿಸಲು ಹೊರಟಿರುವ ಒಳ ಮರ್ಮ ಅರ್ಥವಾಗುತ್ತಿಲ್ಲ. ಅವರ ಈ ನೀತಿ ಸಮಿಶ್ರ ಸರ್ಕಾರಕ್ಕೆ ಗಂಡಾಂತರವಾಗಬಹುದು ಎಂದು ಎಚ್ಚರಿಸಿದರು.

ರೇವಣ್ಣ ಹೇಳಿಕೆಗೆ ಕಿಡಿ: ‘ರಾಜ್ಯದಲ್ಲಿ ಒಂದು ಸಾವಿರ ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು ಆರಂಭಿಸುವುದಾಗಿ ಕುಮಾರಸ್ವಾಮಿ ಹೇಳಿದರೆ, ಸಚಿವರೂ ಆಗಿರುವ ಇವರಣ್ಣ ರೇವಣ್ಣ ‘ಒಂದು ಸಾವಿರವಲ್ಲ; ಎರಡು ಸಾವಿರ ಶಾಲೆ ಆರಂಭಿಸಲಿ’ ಎಂದಿದ್ದಾರೆ. ಅಲ್ಲದೇ ಅದಕ್ಕಾಗಿ ಲೋಕೋಪಯೋಗಿ ಇಲಾಖೆಯ ಹಣವನ್ನು ಬಳಸುವಂತೆ ಹೇಳಿದ್ದಾರೆ. ಇಂತಹ ಹೇಳಿಕೆಗಳು ಸುಸಂಸ್ಕೃತ ರಾಜಕಾರಣಿ ಹೇಳುವಂಥದ್ದಲ್ಲ. ಅಲ್ಲಿರುವುದು ಸರ್ಕಾರದ ಹಣ. ದೇವೇಗೌಡರ ಮನೆಯದಲ್ಲ’ ಎಂದು ವಾಗ್ದಾಳಿ ನಡೆಸಿದರು.

ADVERTISEMENT

ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ಓದಿಸಿದವರು ಮಾತ್ರ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಬೇಕು ಇಲ್ಲವೇ ಆ ಗೌರವವನ್ನು ನಿರಾಕರಿಸಬೇಕು ಎಂದು ಆಗ್ರಹಿಸಿದ ಕುಂ.ವೀರಭದ್ರಪ್ಪ, ‘ಇಂಗ್ಲಿಷ್‌ ಮಾಧ್ಯಮ ಶಾಲೆಗಳಿಗೆ ಕಳುಹಿಸುತ್ತಿರುವ ಮಹನೀಯರು ವೇದಿಕೆಯಲ್ಲಿದ್ದರೆ ದಯವಿಟ್ಟು ನಿರ್ಗಮಿಸಿ’ ಎಂದು ಹೇಳಿದರು.

ಅವರ ಈ ಮಾತಿನಿಂದ, ವೇದಿಕೆಯಲ್ಲಿದ್ದ ಕೆಲವರಿಗೆ ಇರುಸು ಮುರುಸು ಉಂಟಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.