ADVERTISEMENT

ಬಿಎಸ್‌ವೈ ಸಹೃದಯ ಮಾತು: ಎಚ್‌ಡಿಕೆ

ನಿಖಿಲ್‌ ವಿವಾಹ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2020, 17:56 IST
Last Updated 19 ಏಪ್ರಿಲ್ 2020, 17:56 IST
ಎಚ್‌.ಡಿ.ಕುಮಾರಸ್ವಾಮಿ
ಎಚ್‌.ಡಿ.ಕುಮಾರಸ್ವಾಮಿ   

ಬೆಂಗಳೂರು:‘ರಾಜ್ಯ ರಾಜಕಾರಣದ ದೊಡ್ಡ ಕುಟುಂಬ ಸರಳವಾಗಿ ವಿವಾಹ ಸಮಾರಂಭ ಮಾಡಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸಹೃದಯದ ಮಾತುಗಳನ್ನು ಆಡಿದ್ದಾರೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಇದೇ 17 ರಂದು ನಿಖಿಲ್‌ ಅವರ ವಿವಾಹ ರಾಮನಗರದ ತೋಟದ ಮನೆಯಲ್ಲಿ ನಡೆದಿತ್ತು. ಅಲ್ಲಿ ಸೇರಿದ್ದ ಜನ ಸಂಖ್ಯೆ ಹಿನ್ನೆಲೆಯಲ್ಲಿ ಅಂತರ ಕಾಯ್ದುಕೊಂಡಿಲ್ಲ ಎಂಬ ಟೀಕೆಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿಬಂದಿತ್ತು. ಅದಕ್ಕೆ ಸರಣಿ ಟ್ವೀಟ್‌ಗಳ ಮೂಲಕ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

‘ನನ್ನ ಪುತ್ರ ನಿಖಿಲ್‌ ವಿವಾಹದಲ್ಲಿ ವ್ಯಕ್ತಿಗಳ ನಡುವೆ ಅಂತರ ಕಾಯ್ದುಕೊಂಡರೂ, ನಿಯಮ ಪಾಲಿಸಿದ್ದರೂ ಇದ್ಯಾವುದೂ ಪಾಲನೆ ಆಗಿಲ್ಲ ಎಂಬ ಚರ್ಚೆ ನಡೆಯುತ್ತಿವೆ. ರಾಜಕೀಯ ದ್ವೇಷಕ್ಕಾಗಿ ಶುಭ ಸಮಾರಂಭದ ವಿಚಾರದಲ್ಲೂ ವಿಷ ಕಾರುವ ಮನಸ್ಥಿತಿಗಳು ರಾರಾಜಿಸಿವೆ. ಆದರೆ,ಯಡಿಯೂರಪ್ಪ ಅವರು ಇವೆಲ್ಲವನ್ನೂ ನಿರಾಕರಿಸುವ ಮೂಲಕ ಸತ್ಯದ ಪರ ನಿಂತಿದ್ದಾರೆ ’ಎಂದು ಅವರು ಹೇಳಿದ್ದಾರೆ.

ADVERTISEMENT

‘ನನ್ನ ಒಡನಾಡಿಗಳು, ಹಿತೈಷಿಗಳು, ನನ್ನ ಜನ, ಕಾರ್ಯಕರ್ತರೊಂದಿಗೆ ಒಟ್ಟಿಗೆ ಸೇರಲು ವೈಯಕ್ತಿಕವಾಗಿ ನನಗೆ ಇದ್ದ ಒಂದೇ ಒಂದು ಸುವರ್ಣ ಅವಕಾಶವನ್ನು ಕೈಚೆಲ್ಲಿ ನಿಖಿಲ್ ವಿವಾಹವನ್ನು ಲಾಕ್‌ಡೌನ್‌ ನಿಯಮ ಪಾಲಿಸಿ ಸರಳವಾಗಿ ನಡೆಸಲಾಯಿತು’ ಎಂದಿದ್ದಾರೆ.

ನಿಖಿಲ್ ವಿವಾಹದಲ್ಲೂ ರಾಜಕೀಯ ಹುಡುಕಿದ ಸಾಮಾಜಿಕ ಮಾಧ್ಯಮದ ಕೆಲವು ಹುಳುಕು ಮನಸ್ಸಿನ ಮಂದಿ ತಮ್ಮ ಮನದಲ್ಲಿರುವ ವಿಷ ಕಾರಿಕೊಂಡಿದ್ದಾರೆ. ಅವರೆಲ್ಲರೂ ಶರಣರ ಈ ಮಾತನ್ನು ನೆನಪಿಟ್ಟುಕೊಳ್ಳಬೇಕು. ’ಮನದ ಕೋಪ ತನ್ನ ಅರಿವಿನ ಕೇಡು ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ ನೆರೆಯ ಮನೆಯ ಸುಡದು ಕೂಡಲಸಂಗಮದೇವ’ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.