ADVERTISEMENT

ದಲಿತರನ್ನು ಮುಖ್ಯಮಂತ್ರಿ ಮಾಡಲು ಪಕ್ಷ ಸಿದ್ಧ: ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2022, 16:12 IST
Last Updated 5 ಏಪ್ರಿಲ್ 2022, 16:12 IST
ಎಚ್.ಡಿ.ಕುಮಾರಸ್ವಾಮಿ ಹಾಗೂ ಕೃಷಿ ಆರ್ಥಿಕ ತಜ್ಞ ಡಾ.ಪ್ರಕಾಶ್ ಕಮ್ಮರಡಿ ಚರ್ಚಿಸಿದರು. (ಎಡದಿಂದ) ರೈತಪರ ಹೋರಾಟಗಾರರಾದ ಪಚ್ಚೆ ನಂಜುಂಡಸ್ವಾಮಿ ಮತ್ತು ಡಾ.ಎಚ್.ವಿ.ವಾಸು ಇದ್ದರು–ಪ್ರಜಾವಾಣಿ ಚಿತ್ರ
ಎಚ್.ಡಿ.ಕುಮಾರಸ್ವಾಮಿ ಹಾಗೂ ಕೃಷಿ ಆರ್ಥಿಕ ತಜ್ಞ ಡಾ.ಪ್ರಕಾಶ್ ಕಮ್ಮರಡಿ ಚರ್ಚಿಸಿದರು. (ಎಡದಿಂದ) ರೈತಪರ ಹೋರಾಟಗಾರರಾದ ಪಚ್ಚೆ ನಂಜುಂಡಸ್ವಾಮಿ ಮತ್ತು ಡಾ.ಎಚ್.ವಿ.ವಾಸು ಇದ್ದರು–ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಅದ್ಯಾವ ಸ್ವಾಮಿಯೋ ಗೊತ್ತಿಲ್ಲ. ದಲಿತರೊಬ್ಬರನ್ನು ನಿಮ್ಮ ಪಕ್ಷದಿಂದ ಮುಖ್ಯಮಂತ್ರಿ ಮಾಡುತ್ತೀರಾ? ಮುಸ್ಲಿಂ ಸಮುದಾಯಕ್ಕೆ ಸೇರಿದವರನ್ನು ಉಪಮುಖ್ಯಮಂತ್ರಿ ಮಾಡುತ್ತೀರಾ? ಎಂದು ಸವಾಲು ಹಾಕಿದ್ದಾರೆ.ಕಾಲ ಕೂಡಿ ಬಂದರೆ ಮುಂದಿನ ಬಾರಿ ದಲಿತರನ್ನೇ ಮುಖ್ಯಮಂತ್ರಿ ಮಾಡಲು ತಯಾರಿದ್ದೇವೆ’ ಎಂದುಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

‘ಉಳುವ ಯೋಗಿಯ ನೋಡಲ್ಲಿ–ಕೃಷಿಕರ ಕಷ್ಟ ಮತ್ತು ಪರಿಹಾರಗಳು’ ಕುರಿತುಹಸಿರು ಸೇನೆ ಹಮ್ಮಿಕೊಂಡಿದ್ದ ರೈತ ಮುಖಂಡರೊಂದಿಗಿನ ಸಂವಾದದಲ್ಲಿ‌ಮಂಗಳವಾರ ಮಾತನಾಡಿದರು.

‘ನಾನು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ಬದುಕು ಕಟ್ಟಿಕೊಳ್ಳಲು ಆಗದ ಅದೆಷ್ಟೋ ಮಂದಿ ಈಗಲೂ ಸಹಾಯ ಬಯಸಿ ಮನೆ ಮುಂದೆ ನಿಲ್ಲುತ್ತಾರೆ. ಅವರಿಗೆ ಹಂಚಲು ನಿತ್ಯ ₹10 ಲಕ್ಷದಿಂದ ₹20 ಲಕ್ಷ ಎಲ್ಲಿಂದ ತರಲಿ. ಮುಖ್ಯಮಂತ್ರಿ ಆಗಿದ್ದಾಗ ಬೇರೆಯವರಂತೆ ನಾನೇನು ಹಣ, ಆಸ್ತಿ ಮಾಡಲಿಲ್ಲ’ ಎಂದರು.

ADVERTISEMENT

‘ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೋದಾಮು ಹಾಗೂ 30 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಕಟ್ಟುವ, ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಗುಣಮಟ್ಟದ ಶಿಕ್ಷಣವನ್ನು ಉಚಿತವಾಗಿ ನೀಡುವ ಆಲೋಚನೆ ಇದೆ. ಅದಕ್ಕೆ ನೀವು ನಮ್ಮ ಕೈಬಲಪಡಿಸಬೇಕು. ಶ್ರೀಲಂಕಾದಲ್ಲಿ ಆಹಾರಕ್ಕಾಗಿ ಹಾಹಾಕಾರ ಎದ್ದಿದೆ. ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ನಮಗೂ ಅದೇ ಪರಿಸ್ಥಿತಿ ಎದುರಾಗಲಿದೆ’ ಎಂದು ಟೀಕಿಸಿದರು.

‘ಹತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ರೈತ ಮುಖಂಡರನ್ನೇ ಪಕ್ಷದ ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸಲು ತಯಾರಿದ್ದೇನೆ. ರೈತ ಪರವಾಗಿ, ಪ್ರಾಮಾಣಿಕವಾಗಿ ಕೆಲಸ ಮಾಡುವ ಛಲ ಇರುವವರು ಈಗಿನಿಂದಲೇ ಸಿದ್ಧರಾಗಿ’ ಎಂದು ಕರೆ ನೀಡಿದರು.

‘ಇದೇ 16ರ ಹನುಮ ಜಯಂತಿಯಂದು ‘ಜನತಾ ಜಲಧಾರೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದೇವೆ. ಮತ ಗಳಿಕೆ ದೃಷ್ಟಿಯಿಂದ ಈ ಕಾರ್ಯಕ್ರಮ ರೂಪಿಸಿಲ್ಲ’ ಎಂದರು.

‘ನೀರಾವರಿ ಯೋಜನೆ ಪೂರ್ಣಗೊಳಿಸದಿದ್ದರೆ ಪಕ್ಷ ವಿಸರ್ಜನೆ’

‘ಜೆಡಿಎಸ್‌ ಅಧಿಕಾರಕ್ಕೆ ಬಂದರೆ ರಾಜ್ಯದ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುತ್ತೇವೆ. ಅದಕ್ಕೆ ಸುಮಾರು ₹5 ಲಕ್ಷ ಕೋಟಿ ಹಣ ಬೇಕು. ಅನುದಾನಕ್ಕಾಗಿ ಕೇಂದ್ರದ ಮುಂದೆ ಕೈಚಾಚದೆ ರಾಜ್ಯದಲ್ಲೇ ಸಂಪನ್ಮೂಲ ಕ್ರೋಡೀಕರಿಸುತ್ತೇವೆ. 5 ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸದಿದ್ದರೆ ಪಕ್ಷವನ್ನೇ ವಿಸರ್ಜಿಸುತ್ತೇವೆ’ ಎಂದರು.

‘ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಈಗಿನ ಸರ್ಕಾರದ ಬಳಿ ಹಣವಿಲ್ಲ. ಹೀಗಾಗಿ ತಮಿಳುನಾಡು, ಗೋವಾ ವಿರೋಧಿಸುತ್ತಿವೆ ಎಂಬ ನೆ‍ಪ ಹೇಳಿ ರೈತರನ್ನು ದಾರಿ ತಪ್ಪಿಸುತ್ತಿದೆ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.