ADVERTISEMENT

ಮಾಧುಸ್ವಾಮಿ ವಿರುದ್ಧ ಕುರುಬ ಸಂಘಟನೆಗಳ ಸಿಟ್ಟೇಕೆ? ಶಾಂತಿ ಸಭೆಯಲ್ಲಿ ಆಗಿದ್ದೇನು?

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2019, 13:13 IST
Last Updated 19 ನವೆಂಬರ್ 2019, 13:13 IST
   

ಬೆಂಗಳೂರು: ಕನಕ ಗುರುಪೀಠದಈಶ್ವರಾನಂದಪುರಿ ಸ್ವಾಮೀಜಿ ಅವರನ್ನು ಅಪಮಾನಿಸಿದ ಆರೋಪದ ಹಿನ್ನೆಲೆಯಲ್ಲಿ ಸಚಿವ ಜೆ.ಸಿ ಮಾಧುಸ್ವಾಮಿ ಅವರ ವಿರುದ್ಧ ಕುರುಬ ಸಮುದಾಯದ ಸಂಘಟನೆಗಳು ಆಕ್ರೋಶಗೊಂಡಿವೆ. ಹಲವೆಡೆ ಪ್ರತಿಭಟನೆಗಳೂ ನಡೆದಿವೆ. ಅವರುಸ್ವಾಮೀಜಿಯವರ ಕ್ಷಮೆ ಕೋರಬೇಕೆಂಬ ಒತ್ತಾಯಗಳೂ ಕೇಳಿ ಬಂದಿವೆ.

ಈ ನಡುವೆಯೇ ವಿವಾದಕ್ಕೆ ಸಂಬಂಧಿಸಿದಂತೆ ಹಾಲುಮತ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ರುದ್ರಣ್ಣ ಗುಳಿ ಅವರು ಸಚಿವರ ಜತೆ ಮಾತನಾಡಿದ ಆಡಿಯೊ ಸಹ ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ವೈರಲ್‌ ಆಗುತ್ತಿದೆ. ‘ನನ್ನ ನಿಷ್ಠೆ ನನ್ನ ಸಮುದಾಯಕ್ಕೆ ಮಾತ್ರವೇ,’ಎಂದು ಸಚಿವರು ಅದರಲ್ಲಿ ಹೇಳಿದ್ದಾರೆ.

ಅಷ್ಟಕ್ಕೂ ವಿವಾದ ಏನು?

ADVERTISEMENT

ಹುಳಿಯಾರು ಪಟ್ಟಣದ ಪೆಟ್ರೋಲ್‌ ಬಂಕ್‌ ವೃತ್ತದಲ್ಲಿ ಕನಕದಾಸರ ನಾಮಫಲಕ ಅಳವಡಿಕೆ ಸಂಬಂಧ ಎರಡು ಗುಂಪುಗಳ ನಡುವೆ ಸದ್ಯ ವಿವಾದ ಉದ್ಭವಿಸಿದ್ದು, ಈ ಕುರಿತು ಚರ್ಚೆ ನಡೆಸಲು ಈಚೆಗೆ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಶಾಂತಿಸಭೆ ಆಯೋಜಿಸಲಾಗಿತ್ತು. ಆದರೆ, ಸಭೆಯಲ್ಲಿ ಒಮ್ಮತ ಮೂಡದ ಕಾರಣ ಸಭೆ ಅಪೂರ್ಣಗೊಂಡಿತ್ತು. ಸಭೆಯಲ್ಲಿ ಕಾಗಿನೆಲೆ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಸೇರಿದಂತೆ ಕುರುಬ ಸಮಾಜದ ಮುಖಂಡರು ಭಾಗವಹಿಸಿದ್ದರು.

ಈ ಸಭೆಯಲ್ಲಿ ಮಾತನಾಡಿದ್ದ ಕನಕಗುರು ಪೀಠದಈಶ್ವರಾನಂದಪುರಿ ಸ್ವಾಮೀಜಿ,‘15 ವರ್ಷಗಳಿಂದ ಆ ವೃತ್ತವನ್ನು ಕನಕವೃತ್ತ ಎಂದು ಕರೆಯಲಾಗುತ್ತಿದೆ. ಈಗ ಆ ಸ್ಥಳಕ್ಕೆ ಡಾ.ಶಿವಕುಮಾರ ಸ್ವಾಮೀಜಿ ನಾಮಫಲಕ ಹಾಕಲು ಲಿಂಗಾಯತ ಸಮುದಾಯ ಮುಂದಾಗಿದೆ. ಈ ವೃತ್ತಕನಕವೃತ್ತ ಎಂದು ಮುಂದುವರೆಯಲಿ ಎಂದು ಕುರುಬ ಸಮುದಾಯದವರು ಒತ್ತಾಯಿಸುತ್ತಿದ್ದಾರೆ’ ಎಂದು ಶಾಂತಿ ಸಭೆಯಲ್ಲಿ ಹೇಳಿದರು.

ಅಲ್ಲದೇ,‘ವೃತ್ತಕ್ಕೆ ಕನಕದಾಸರ ಹೆಸರು ಇಡಲೇಬೇಕು. ಇಲ್ಲದಿದ್ದರೆ ನಾವು ಹೋರಾಟ ಮಾಡುತ್ತೇವೆ’ ಎಂದಿದ್ದರು.

ಆಗ ಸಿಟ್ಟಾದ ಮಾಧುಸ್ವಾಮಿ, ‘ನೀವು ಧಮ್ಕಿ ಹಾಕುತ್ತೀರ. ನಾನೂ ಹೋರಾಟಗಾರನೇ. ಕಾನೂನು ಬಿಟ್ಟು ಹೋಗುವುದಿಲ್ಲ. ಕಾನೂನಿಗೆ ಆದ್ಯತೆ ನೀಡುವೆ. ಇದು ನನ್ನ ಹೋರಾಟ’ ಎಂದರು.

ಸಭೆ ಗದ್ದಲದ ಗೂಡಾಗಿ ಯಾವುದೇ ತೀರ್ಮಾನ ತೆಗೆದುಕೊಳ್ಳಲು ವಿಫಲವಾಯಿತು.

ಸದ್ಯ ಈ ಬೆಳವಣಿಗೆ ಮಾಧುಸ್ವಾಮಿ ಅವರ ವಿರುದ್ಧ ಕುರುಬ ಸಂಘಟನೆಗಳು ತಿರುಗಿಬೀಳುವಂತೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.