ADVERTISEMENT

ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆ | ಕುರುಬರು ಹಿಂದೂ ಎಂದೇ ಬರೆಯಿಸಿ: ರೇವಣ್ಣ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 15:58 IST
Last Updated 26 ಸೆಪ್ಟೆಂಬರ್ 2025, 15:58 IST
ಎಚ್‌.ಎಂ.ರೇವಣ್ಣ
ಎಚ್‌.ಎಂ.ರೇವಣ್ಣ   

ಬೆಂಗಳೂರು: ‘ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆಯಲ್ಲಿ ಕುರುಬ ಸಮುದಾಯದವರು ಧರ್ಮದ ಕಾಲಂನಲ್ಲಿ ‘ಹಿಂದೂ’ ಎಂದು, ಜಾತಿ ಕಾಲಂನಲ್ಲಿ ‘ಕುರುಬ’ ಎಂದೇ ಬರೆಯಿಸಬೇಕು’ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್‌.ಎಂ.ರೇವಣ್ಣ ಕರೆ ನೀಡಿದರು.

ಕರ್ನಾಟಕ ಕುರುಬರ ಜಾಗೃತಿ ಸಮಿತಿಯು ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕುರುಬ ಸಮುದಾಯದ ಎಲ್ಲರೂ ಸಮೀಕ್ಷೆಯಲ್ಲಿ ಭಾಗಿಯಾಗಬೇಕು. ಸಮುದಾಯದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಯ ಬಗ್ಗೆ ತಿಳಿದುಕೊಳ್ಳಲು ಇದು ನೆರವಾಗಲಿದೆ’ ಎಂದರು.

‘ಜಾತಿಯ ಕಾಲಂನಲ್ಲಿ ಎಲ್ಲರೂ ‘ಕುರುಬ’ ಎಂದೇ ಬರೆಯಿಸಬೇಕು ಎಂಬುದನ್ನು ಮರೆಯಬಾರದು. ಉಪಜಾತಿಯ ಕಾಲಂನಲ್ಲಿ ನಿಮ್ಮ ನಿಮ್ಮ ಉಪಜಾತಿಗಳ ಹೆಸರನ್ನು ಬರೆಯಿಸಬೇಕು. ನಿಮ್ಮ ಜಾತಿ ಪ್ರಮಾಣ ಪತ್ರದಲ್ಲಿ ಗೊಂಡ, ಜೇನು ಕುರುಬ, ಕಾಡು ಕುರುಬ, ಬೆಟ್ಟ ಕುರುಬ ಎಂದು ಇದ್ದರೆ, ಅದನ್ನೇ ಉಪಜಾತಿ ಕಾಲಂನಲ್ಲಿ ಬರೆಯಿಸಬೇಕು’ ಎಂದು ವಿವರಿಸಿದರು.

ADVERTISEMENT

‘ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಹಿಂದಿನ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರೇ, ಕುರುಬರನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಿ ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಅಂತಹ ಬದಲಾವಣೆ ಮಾಡುವ ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ ಮಾತ್ರ. ಆದರೆ ಈಗ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡುತ್ತಿದ್ದಾರೆ’ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಮಿತಿಯ ಸಂಚಾಲಕರಾದ ಟಿ.ಬಿ.ಬಳಗಾವಿ, ಬಿ.ಎಸ್‌.ಶಾಂತಕುಮಾರ್‌, ಸಿದ್ಧಣ್ಣ ಮೇಟಿ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.