ADVERTISEMENT

ಕುರುಬ ಸಮುದಾಯ ಅವಮಾನಿಸಿದ ಆರೋಪಿ: ಬಳಗಾವಿ, ಪುಟ್ಟಸ್ವಾಮಿ ಮನೆಗೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2022, 19:30 IST
Last Updated 12 ನವೆಂಬರ್ 2022, 19:30 IST

ಬೆಂಗಳೂರು: ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಹಾಗೂ ಕುರುಬ ಸಮುದಾಯವನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ನಿವೃತ್ತ ಅಧಿಕಾರಿಗಳಾದ ಟಿ.ಬಿ. ಬಳಗಾವಿ ಹಾಗೂ ಎಸ್‌.ಪುಟ್ಟಸ್ವಾಮಿ ಮನೆಗಳಿಗೆ ಪ್ರದೇಶ ಕುರುಬರ ಸಂಘದ ನೇತೃತ್ವದಲ್ಲಿ ಸಮುದಾಯದ ಮುಖಂಡರು ಹಾಗೂ ಸದಸ್ಯರು ಶನಿವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಕೆ.ಎಸ್. ಈಶ್ವರಪ್ಪ ಅವರಿಗೆ ಸಚಿವ ಸ್ಥಾನ ನೀಡಬೇಕು ಹಾಗೂ ರಘುನಾಥರಾವ್ ಮಲ್ಕಾಪೂರೆ ಅವರನ್ನು ಸಭಾಪತಿ ಹುದ್ದೆಯಲ್ಲೇ ಮುಂದುವರಿಸಬೇಕು ಎಂದು ಆಗ್ರಹಿಸಿ ಬಳಗಾವಿ, ಪುಟ್ಟಸ್ವಾಮಿ ಮತ್ತು ಕೆ. ಮುಕುಡಪ್ಪ ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ್ದರು. ಆಗ, ಸಿದ್ದರಾಮಯ್ಯ, ಸ್ವಾಮೀಜಿ ಹಾಗೂ ಕುರುಬ ಸಮುದಾಯಕ್ಕೆ ಅವಮಾನ ಉಂಟುಮಾಡುವ ರೀತಿಯಲ್ಲಿ ಅಶ್ಲೀಲವಾಗಿ ಮಾತನಾಡಿರುವ ವಿಡಿಯೊ ಬಹಿರಂಗವಾಗಿತ್ತು. ಅದನ್ನು ವಿರೋಧಿಸಿ ಪ್ರತಿಭಟನೆ ನಡೆದಿದೆ.

ಬಸವೇಶ್ವರನಗರದ ಕೆಎಚ್‌ಬಿ ಕಾಲೊನಿಯಲ್ಲಿರುವ ಬಳಗಾವಿ ಮನೆ ಹಾಗೂ ಎಚ್‌ಎಸ್‌ಆರ್‌ ಬಡಾವಣೆಯಲ್ಲಿರುವ ಪುಟ್ಟಸ್ವಾಮಿ ಮನೆಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು, ಆಕ್ರೋಶ ವ್ಯಕ್ತಪಡಿಸಿದರು. ಪ್ರದೇಶ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಎಂ. ವೆಂಕಟೇಶಮೂರ್ತಿ ಸೇರಿದಂತೆ ಹಲವು ಮುಖಂಡರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಸಮುದಾಯವನ್ನು ಅವಮಾನಿಸಿರುವ ಇಬ್ಬರೂ ತಕ್ಷಣವೇ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಕೆಲಕಾಲ ಪ್ರತಿಭಟನೆ ನಡೆಸಿದ ಬಳಿಕ ಎಲ್ಲರನ್ನೂ ವಶಕ್ಕೆ ಪಡೆದ ಪೊಲೀಸರು, ಬೇರೆಡೆ ಕರೆದೊಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.