ADVERTISEMENT

40 ಸಾವಿರ ಪಂಪ್‌ಸೆಟ್‌ಗಳಿಗೆ ‘ಕುಸುಮ್‌’ ಅನುಮೋದನೆ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 22 ಜುಲೈ 2025, 16:26 IST
Last Updated 22 ಜುಲೈ 2025, 16:26 IST
<div class="paragraphs"><p>ಸಿದ್ದರಾಮಯ್ಯ</p></div>

ಸಿದ್ದರಾಮಯ್ಯ

   

ಬೆಂಗಳೂರು: ‘ಕುಸುಮ್‌ ಬಿ’ ಯೋಜನೆಯಡಿ 40 ಸಾವಿರ ಪಂಪ್‌ಸೆಟ್‌ಗಳಿಗೆ ಅನುಮೋದನೆ ನೀಡಲಾಗಿದ್ದು, ತ್ವರಿತಗತಿಯಲ್ಲಿ ಯೋಜನೆ ಅನುಷ್ಠಾನಗೊಳಿಸಲು ಕ್ರಮ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ನಗರದ ಶಕ್ತಿ ಭವನದಲ್ಲಿ ಮಂಗಳವಾರ ನಡೆದ ‘ಕುಸುಮ್‌ ಬಿ’ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ADVERTISEMENT

ಸುಮಾರು 25 ಸಾವಿರ ರೈತರು ಹೆಚ್ಚುವರಿಯಾಗಿ ಕುಸುಮ್‌ ಬಿ ಯೋಜನೆಯಡಿ ಅರ್ಜಿ ಸಲ್ಲಿಸಿದ್ದಾರೆ. ಈ ಯೋಜನೆಗಾಗಿ ರಾಜ್ಯ ಸರ್ಕಾರ ₹752 ಕೋಟಿ ವೆಚ್ಚ ಮಾಡಲಿದೆ ಎಂದರು.

ಕುಸುಮ್‌ಬಿ ಯೋಜನೆಯಡಿ ಸೋಲಾರ್ ಕೃಷಿ ಪಂಪ್‌ಸೆಟ್‌ ಅಳವಡಿಸಲು, ಕೇಂದ್ರ ಸರ್ಕಾರ ಶೇ 30, ರಾಜ್ಯ ಸರ್ಕಾರ ಶೇ 50 ರಷ್ಟು ಸಹಾಯಧನ ಒದಗಿಸಲಾಗುತ್ತಿದ್ದು, ಫಲಾನುಭವಿಗಳು ಶೇ 20 ರಷ್ಟು ಭರಿಸಬೇಕಿದೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ 4.5 ಲಕ್ಷ ಅನಧಿಕೃತ ಐಪಿ ಸೆಟ್‌ಗಳಿದ್ದು, ಆ ಪೈಕಿ 2 ಲಕ್ಷ ಐಪಿ ಸೆಟ್‌ ಸಂಪರ್ಕಗಳನ್ನು ಅಧಿಕೃತಗೊಳಿಸಲಾಗಿದೆ. ಅನಧಿಕೃತ ಐಪಿ ಸೆಟ್‌ಗಳನ್ನು ಕುಸುಮ್‌ಬಿ ಯೋಜನೆ ವ್ಯಾಪ್ತಿಗೆ ಆದ್ಯತೆ ಮೇರೆಗೆ ತರುವ ಬಗ್ಗೆ ಚರ್ಚೆ ನಡೆಯಿತು ಎಂದು ಅವರು ಹೇಳಿದರು.

ನೀರಾವರಿ ಪಂಪ್‌ಸೆಟ್‌ಗಳಿಗೆ 2024–25 ರ ಸಾಲಿನಲ್ಲಿ ₹12,785 ಕೋಟಿಗಳ ಅನುದಾನ ಹಂಚಿಕೆ ಆಗಿದ್ದು ಫೆಬ್ರುವರಿ 2025 ವರೆಗೆ ₹11,720 ಕೋಟಿ ಬಿಡುಗಡೆ ಆಗಿದೆ. 2025–26 ರಲ್ಲಿ ₹16,021 ಕೋಟಿ ಆಯವ್ಯಯ ಹಂಚಿಕೆ ಆಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಸಭೆಯಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್‌, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.