ADVERTISEMENT

ತಲೆದಂಡದ ರಾಜಕೀಯ ಕೊನೆಗೊಳ್ಳಲಿ

ರಾಜ್ಯಸಭಾ ಸದಸ್ಯ ಎಲ್‌.ಹನುಮಂತಯ್ಯ ಅಭಿಮತ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2018, 19:33 IST
Last Updated 14 ಅಕ್ಟೋಬರ್ 2018, 19:33 IST
ಎಲ್‌.ಹನುಮಂತಯ್ಯ ಅವರು ಬಂಡಾಯ ಸಾಹಿತ್ಯ ಸಂವಾದದ ಸಮಾರೋಪ ಭಾಷಣ ಮಾಡಿದರು. ರೈತ ಮುಖಂಡ ನುಲೇನೂರು ಶಂಕರಪ್ಪ, ಮಲ್ಲಿಕಾರ್ಜುನಯ್ಯ, ಚಂದ್ರಶೇಖರ ಪಾಟೀಲ, ಬಿ.ಎಲ್‌.ವೇಣು ಇದ್ದಾರೆ.
ಎಲ್‌.ಹನುಮಂತಯ್ಯ ಅವರು ಬಂಡಾಯ ಸಾಹಿತ್ಯ ಸಂವಾದದ ಸಮಾರೋಪ ಭಾಷಣ ಮಾಡಿದರು. ರೈತ ಮುಖಂಡ ನುಲೇನೂರು ಶಂಕರಪ್ಪ, ಮಲ್ಲಿಕಾರ್ಜುನಯ್ಯ, ಚಂದ್ರಶೇಖರ ಪಾಟೀಲ, ಬಿ.ಎಲ್‌.ವೇಣು ಇದ್ದಾರೆ.   

ಚಿತ್ರದುರ್ಗ: ಪ್ರಭುತ್ವದ ರಾಗವನ್ನು ಪುನರುಚ್ಚರಿಸದ ಭಿನ್ನ ದನಿಯನ್ನು ಅಡಗಿಸುವ ತಲೆದಂಡದ ರಾಜಕೀಯ ಕೊನೆಗೊಳ್ಳಬೇಕು ಎಂದು ರಾಜ್ಯಸಭಾ ಸದಸ್ಯ ಎಲ್‌.ಹನುಮಂತಯ್ಯ ಅಭಿಪ್ರಾಯಪಟ್ಟರು.

ಎರಡು ದಿನ ನಡೆದ ಬಂಡಾಯ ಸಾಹಿತ್ಯ ಸಂವಾದದ ಸಮಾರೋಪ ಭಾಷಣ ಮಾಡಿದ ಅವರು, ‘ಪ್ರಭುತ್ವದ ಪರವಾಗಿ ಲಾಲಿ ಹಾಡಿದವರನ್ನು ದೇಶ ವಿರೋಧಿಗಳೆಂದು ಬಿಂಬಿಸುವ ಹುನ್ನಾರ ವ್ಯವಸ್ಥಿತವಾಗಿ ನಡೆಯುತ್ತಿದೆ. ಸರ್ಕಾರದ ವಿರುದ್ಧ ಮಾತನಾಡಿದವರನ್ನು ಗೃಹ ಬಂಧನದಲ್ಲಿ ಇಡಲಾಗಿದೆ. ಈ ಧೋರಣೆ ಮುಂದುವರಿದರೆ ಬಂಧನಕ್ಕೆ ಒಳಗಾಗುವವರ ಸಂಖ್ಯೆ ಹೆಚ್ಚಾಗುವ ಅಪಾಯವಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಸಮಾಜ ಏಕಮುಖಿಯಾಗಿ ಚಲಿಸಲು ಆರಂಭಿಸಿದೆ. ಸುಳ್ಳು ಭರವಸೆಗಳು ವಿಜೃಂಭಿಸುತ್ತಿವೆ. ಸರ್ವಾಧಿಕಾರದ ಕರಾಳ ಮುಖ ಗೋಚರಿಸತೊಡಗಿದೆ. ಸಂವಾದಕ್ಕೆ ಅವಕಾಶ ಇಲ್ಲದಂತಹ ವಾತಾವರಣನ್ನು ನಿರ್ಮಿಸಿ ಪ್ರಜಾಪ್ರಭುತ್ವದ ಆಶಯಗಳನ್ನು ಮಣ್ಣುಪಾಲು ಮಾಡಲಾಗುತ್ತಿದೆ’ ಎಂದು ಟೀಕಿಸಿದರು.

ADVERTISEMENT

ಚಿತ್ರದುರ್ಗ ಅಭಿವೃದ್ಧಿಯಾಗದಿದ್ದರೂ ಊರ ತುಂಬ ಮಠಗಳು ಎದ್ದುನಿಂತಿವೆ. ಜಾತಿಗೊಂದು ಮಠ ಕಟ್ಟಿದರೆ ಜಾತಿ ವಿನಾಶ ಆಗುವುದಾದರೂ ಹೇಗೆ? ಗೋಸ್ವಾಮಿ, ರೇಪಿಸ್ಟು ಸ್ವಾಮಿ, ಪಾಪಿಸ್ಟ ಸ್ವಾಮಿಗಳಿಂದ ನಾಡು ಉದ್ದಾರವಾಗದು’ ಎಂದು ಬಿ.ಎಲ್‌.ವೇಣು ಆಕ್ರೋಶ ಹೊರಹಾಕಿದರು.

‘ಪರಪ್ಪನ ಅಗ್ರಹಾರದಿಂದ ಹೊರಗೆ ಬರುವ ರಾಜಕಾರಣಿಗೆ ಮಠಾಧೀಶರೊಬ್ಬರು ಹೂಹಾರ ಹಾಕಿ ಸ್ವಾಗತಿಸುತ್ತಾರೆ. ಮುಖ್ಯಮಂತ್ರಿ ಹುದ್ದೆಯಿಂದ ಕೆಳಗೆ ಇಳಿಸುವ ಪ್ರಯತ್ನದ ವಿರುದ್ಧ ಬಹಿರಂಗ ಎಚ್ಚರಿಕೆ ನೀಡಿದ್ದಾರೆ. ಸಿನಿಮಾವೊಂದಕ್ಕೆ ತಮ್ಮ ಜಾತಿಯ ನಟನೇ ನಾಯಕನಾಗಬೇಕೆಂದುಹೇಳುವವರು ಮಠಾಧೀಶರು ಹೇಗಾಗುತ್ತಾರೆ’ ಎಂದು ಖಾರವಾಗಿ ಪ್ರಶ್ನಿಸಿದರು.

***

ಎಡ–ಬಲದ ನಡುವೆ ಇರುವ ಸಮನ್ವಯಕಾರರದು ಡೋಂಗಿ ನಿಲುವು. ನಿರ್ಣಾಯಕ ಕಾಲದಲ್ಲಿ ನಿಂತಿದ್ದೇವೆ. ಖಚಿತ ನಿಲುವು ಸ್ಪಷ್ಟಪಡಿಸಿ
-ಚಂದ್ರಶೇಖರ ಪಾಟೀಲ
ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.