ADVERTISEMENT

ವಕೀಲೆ ಕೊಲೆ: ವಕೀಲನಿಗೆ ಜೀವಾವಧಿ ಶಿಕ್ಷೆ

ಹೈಕೋರ್ಟ್‌ ಸಭಾಂಗಣದಲ್ಲೇ ನಡೆದಿದ್ದ ಕೃತ್ಯ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2018, 19:25 IST
Last Updated 27 ಅಕ್ಟೋಬರ್ 2018, 19:25 IST

ಬೆಂಗಳೂರು: ಹೈಕೋರ್ಟ್ ವಕೀಲೆ ನವೀನಾ ಎಂಬುವರನ್ನು ಕೊಲೆ ಮಾಡಿದ್ದ ಅಪರಾಧಿ ರಾಜಪ್ಪನಿಗೆ ಜೀವಾವಧಿ ಶಿಕ್ಷೆ (ಆಜೀವ) ವಿಧಿಸಿ ನಗರದ 63ನೇ ಸಿಸಿಎಚ್ ನ್ಯಾಯಾಲಯವು ಶನಿವಾರ ಆದೇಶ ಹೊರಡಿಸಿದೆ.

ಸಿಗಲಪಾಳ್ಯದ ರಾಜಪ್ಪ, ವಕೀಲನಾಗಿದ್ದ. 2010ರ ಜುಲೈ 8ರಂದು ಹೈಕೋರ್ಟ್‌ನ ಮೊದಲ ಮಹಡಿಯಲ್ಲಿರುವ 4ನೇ ಸಭಾಂಗಣದಲ್ಲೇ ನವೀನಾರನ್ನು ಚಾಕುವಿನಿಂದ ಇರಿದು ಕೊಂದಿದ್ದ. ಆ ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶ ಪರಮೇಶ್ವರ ಪ್ರಸನ್ನ ನಡೆಸಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಎಸ್.ವಾಣಿಶ್ರೀ ವಾದಿಸಿದ್ದರು.

‘ಕೊಲೆಯನ್ನು ಪ್ರತ್ಯಕ್ಷವಾಗಿ ಕಂಡಿದ್ದ ಕೆಲವು ಹಿರಿಯ ವಕೀಲರು, ಆರೋಪಿ ವಿರುದ್ಧ ಸಾಕ್ಷಿ ಹೇಳಿದ್ದರು. ಜೊತೆಗೆ, ವೈದ್ಯಕೀಯ ವರದಿ ಹಾಗೂ ತಜ್ಞರ ವರದಿಯಿಂದ ರಾಜಪ್ಪನೇ ಕೊಲೆಗಾರ ಎಂಬುದು ನ್ಯಾಯಾಲಯದಲ್ಲಿ ರುಜುವಾತಾಗಿದೆ’ ಎಂದು ಬಿ.ಎಸ್.ವಾಣಿಶ್ರೀ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಪ್ರಕರಣದ ವಿವರ: ಮೃತ ನವೀನಾ ಹಾಗೂ ಅಪರಾಧಿ ರಾಜಪ್ಪ, ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಯಾಗಲು ಸಹ ನಿರ್ಧರಿಸಿದ್ದರು. ವೃತ್ತಿ ಆರಂಭಿಸಿದ ದಿನದಿಂದಲೂ ಅವರಿಬ್ಬರು, ಬೇರೆ ಬೇರೆ ಹಿರಿಯ ವಕೀಲರ ಅಧೀನದಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದರು.

‘ಹಿರಿಯ ವಕೀಲರ ಜೊತೆಯಲ್ಲಿ ಅಕ್ರಮ ಸಂಬಂಧವಿಟ್ಟುಕೊಂಡಿದ್ದಾಳೆ’ ಎಂದು ನವೀನಾ ಮೇಲೆ ಅನುಮಾನಗೊಂಡಿದ್ದ ರಾಜಪ್ಪ, ಅವರ ಜೊತೆಗೆ ಜಗಳ ಮಾಡಲಾರಂಭಿಸಿದ್ದ. ‘ನವೀನಾ ನನ್ನನ್ನು ಮದುವೆಯಾಗಲು ನಿರಾಕರಿಸಬಹುದು’ ಎಂದು ತಿಳಿದಿದ್ದ ಅಪರಾಧಿ, ‘ಆಕೆ ನನ್ನನ್ನು ಬಿಟ್ಟು ಬೇರೆ ಯಾರನ್ನೂ ಮದುವೆಯಾಗಬಾರದು’ ಎಂದು ನಿರ್ಧರಿಸಿ ಕೊಲೆ ಮಾಡಿದ್ದ. ಆ ಸಂಬಂಧ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆತ್ಮಹತ್ಯೆಗೂ ಯತ್ನಿಸಿದ್ದ ರಾಜಪ್ಪ: ಚಾಕು ಜೊತೆಗೆ ವಿಷಮಿಶ್ರಿತ ಮದ್ಯವನ್ನು ತಂದಿದ್ದ ರಾಜಪ್ಪ, ನವೀನಾರನ್ನು ಕೊಲೆ ಮಾಡಿ ಪುರುಷರ ಶೌಚಾಲಯದೊಳಗೆ ಹೋಗಿದ್ದ. ಅಲ್ಲಿಯೇ ಮದ್ಯ ಕುಡಿದು ಚಾಕುವಿನಿಂದ ಎದೆ ಹಾಗೂ ಹೊಟ್ಟೆಗೆ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ.

ಶೌಚಾಲಯಕ್ಕೆ ಹೋಗುವ ವೇಳೆಯಲ್ಲಿ, ಆತನನ್ನು ಹಿಡಿಯಲು ಮುಂದಾಗಿದ್ದ ಹಿರಿಯ ವಕೀಲರಿಗೆ ಚಾಕು ತೋರಿಸಿ ಜೀವ ಬೆದರಿಕೆ ಹಾಕಿದ್ದ. ಆ ಬಗ್ಗೆ ವಿಧಾನಸೌಧ ಪೊಲೀಸರು, ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.