ADVERTISEMENT

ಕಾವೇರಿ: ಸಿದ್ದರಾಮಯ್ಯ ಜತೆ ಮಾತುಕತೆ ನಡೆಸುವಂತೆ ಸ್ಟಾಲಿನ್‌ಗೆ ಲಹರ್‌ ಸಿಂಗ್ ಪತ್ರ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2023, 16:30 IST
Last Updated 17 ಸೆಪ್ಟೆಂಬರ್ 2023, 16:30 IST
   

ಬೆಂಗಳೂರು: ಕಾವೇರಿ ನದಿ ನೀರು ಬಿಡುವ ಸಂಬಂಧ ಉಂಟಾಗಿರುವ ಬಿಕ್ಕಟ್ಟು ಬಗೆಹರಿಸಿಕೊಳ್ಳಲು  ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಮಾತುಕತೆ ನಡೆಸುವಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರಿಗೆ ಬಿಜೆಪಿ ರಾಜ್ಯಸಭಾ ಸದಸ್ಯ ಲಹರ್‌ ಸಿಂಗ್ ಸಿರೋಯಾ ಪತ್ರ ಬರೆದಿದ್ದಾರೆ.

ಕೇಂದ್ರ ಸರ್ಕಾರ ಅಥವಾ ಸುಪ್ರೀಂಕೋರ್ಟ್‌ಗೆ ಮೊರೆ ಹೋಗುವುದರಿಂದ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅದರ ಬದಲು ಇಬ್ಬರೂ ಕುಳಿತು ಮಾತುಕತೆ ನಡೆಸುವುದೇ ಸೂಕ್ತ ಎಂದು ಪತ್ರದಲ್ಲಿ ಸಲಹೆ ನೀಡಿದ್ದಾರೆ.

ಕರ್ನಾಟಕದಲ್ಲಿ ಈ ಬಾರಿ ಮಳೆ ಬಂದಿಲ್ಲ. ಅಣೆಕಟ್ಟೆಗಳು ಖಾಲಿ ಇವೆ. ಶೇ 75 ರಷ್ಟು ತಾಲ್ಲೂಕುಗಳು ಬರಗಾಲಕ್ಕೆ ತುತ್ತಾಗಿವೆ. ಕುಡಿಯುವ ನೀರಿನ ಸಮಸ್ಯೆಯೂ ತೀವ್ರವಾಗಿದೆ. ಕರ್ನಾಟಕದ  ಪರಿಸ್ಥಿತಿಯನ್ನು ತಮಿಳುನಾಡು ಅರ್ಥ ಮಾಡಿಕೊಳ್ಳಬೇಕು. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ನಗರಗಳಲ್ಲಿ ಅನ್ಯ ರಾಜ್ಯಗಳ ವಲಸಿಗರ ಸಂಖ್ಯೆಯೂ ಹೆಚ್ಚಾಗಿದೆ. ವಲಸೆ ಎಲ್ಲ ರಾಜ್ಯಗಳಲ್ಲೂ ಇದೆ. ತಮಿಳುನಾಡಿನ ಜನರ ಕರ್ನಾಟಕದಲ್ಲಿ ಭಾರಿ ಸಂಖ್ಯೆಯಲ್ಲಿದ್ದಾರೆ. ಇವೆಲ್ಲವನ್ನೂ ತಮಿಳುನಾಡು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಪತ್ರದಲ್ಲಿ ಹೇಳಿದ್ದಾರೆ.

ADVERTISEMENT

ಕಾವೇರಿಯಲ್ಲಿ ನೀರು ಸೀಮಿತ ಪ್ರಮಾಣದಲ್ಲಿ ಲಭ್ಯವಿದೆ. ಇದನ್ನು ತಮಿಳುನಾಡು ಅರ್ಥ ಮಾಡಿಕೊಳ್ಳಬೇಕು. ಇರುವುದರಲ್ಲೇ ಪರಸ್ಪರ ಸಹಮತದ ಮೂಲಕ ಹಂಚಿಕೊಳ್ಳಬೇಕು ಎಂದೂ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.