ADVERTISEMENT

ನನ್ನ ಹೆಸರಿನ ಬಳಕೆ ಹಿಂದಿನ ಮರ್ಮ ಗೊತ್ತಿಲ್ಲ: ಶಾಸಕಿ ಲಕ್ಷ್ಮಿ ಹೆಬ್ಬಾಳಕರ

ರಮೇಶ ಜಾರಕಿಹೊಳಿ ಹೇಳಿಕೆಗೆ ಲಕ್ಷ್ಮಿ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2018, 20:02 IST
Last Updated 22 ಅಕ್ಟೋಬರ್ 2018, 20:02 IST
ಲಕ್ಷ್ಮಿ ಹೆಬ್ಬಾಳಕರ
ಲಕ್ಷ್ಮಿ ಹೆಬ್ಬಾಳಕರ   

ಬಾಗಲಕೋಟೆ: ‘ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ನಾನೊಬ್ಬಳೇ ಬೆಂಬಲಿಗಳಲ್ಲ. ಅವರದ್ದೇ ಆದ ದೊಡ್ಡ ಪಡೆ ಇದೆ. ಇಡೀ ರಾಜ್ಯದಲ್ಲಿ ಸಾಕಷ್ಟು ಬೆಂಬಲಿಗರು ಇದ್ದಾರೆ. ಅವರಲ್ಲಿ ನಾನೂ ಒಬ್ಬಳು. ಆದರೆ ಸಚಿವ ರಮೇಶ ಜಾರಕಿಹೊಳಿ ಪದೇ ಪದೇ ನನ್ನ ಹೆಸರು ಬಳಕೆ ಮಾಡುವುದರ ಹಿಂದಿನ ಮರ್ಮ ಗೊತ್ತಾಗುತ್ತಿಲ್ಲ’ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

ಶಿವಕುಮಾರ್‌ ಅವರನ್ನು ಟೀಕಿಸುವಾಗ ಸಚಿವ ರಮೇಶ ಜಾರಕಿಹೊಳಿ ತಮ್ಮ ಹೆಸರು ಪ್ರಸ್ತಾಪಿಸಿರುವ ಬಗ್ಗೆ ಮಾಧ್ಯಮದವರು ಸೋಮವಾರ ಇಲ್ಲಿ ಕೇಳಿದ ಪ್ರಶ್ನೆಗೆ ಲಕ್ಷ್ಮಿ ಮೇಲಿನಂತೆ ಪ್ರತಿಕ್ರಿಯಿಸಿದರು.

‘ರಮೇಶ ಜಾರಕಿಹೊಳಿ ಸಾಹೇಬ್ರು ದೊಡ್ಡವರು. ಅವರ ಬಗ್ಗೆ ಮಾತನಾಡುವಷ್ಟು ದೊಡ್ಡವಳಲ್ಲ. ನನ್ನನ್ನು ಕಾಲ ಕಸ ಅಂದರು.. ಶೋಪೀಸ್ ಅಂದರು, ಸ್ಲಮ್‌ನಿಂದ ಬಂದಿರುವೆ ಎಂದರು. ಆದರೂ ನನ್ನ ಪಾಡಿಗೆ ನಾನಿದ್ದೇನೆ. ಅವರು ನಮ್ಮ ಜಿಲ್ಲೆಯ ದೊಡ್ಡ ನಾಯಕರು. ಅವರಿಗೆ ದೇವರು ಒಳ್ಳೆಯದು ಮಾಡಲಿ. ನನ್ನ ಶ್ರಮ, ಧರ್ಮ ನನ್ನ ಕಾಪಾಡುತ್ತೆ. ಉಳಿದದ್ದು ಆ ದೇವರು ನೋಡಿಕೊಳ್ಳುತ್ತಾನೆ’ ಎಂದು ಹೇಳಿದರು.

ADVERTISEMENT

ಸಿದ್ದರಾಮಯ್ಯ ಹಲ್ಲಿಲ್ಲದ ಹಾವು ಎಂಬ ಶೋಭಾ ಕರಂದ್ಲಾಜೆ ಹೇಳಿಕೆಗೆ ಪ್ರತಿಕ್ರಿಯಿಸಿದ ಲಕ್ಷ್ಮಿ, ‘ಶೋಭಕ್ಕ ಉದ್ವೇಗದಲ್ಲಿ ಮಾತಾಡಿದ್ದಾರೆ. ಜನ ನಮ್ಮನ್ನು ನೋಡ್ತಿರ್ತಾರೆ. ಉದ್ವೇಗಕ್ಕೆ ಒಳಗಾಗಬಾರದು. ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು ಎಂಬುದನ್ನು ಅರಿತು ಮಾತಾಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.