ADVERTISEMENT

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷ ಪಟ್ಟದಿಂದ ಲಕ್ಷ್ಮಿ ಹೆಬ್ಬಾಳಕರಗೆ ಕೊಕ್‌?

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2018, 17:32 IST
Last Updated 1 ಅಕ್ಟೋಬರ್ 2018, 17:32 IST
ಲಕ್ಷ್ಮಿ ಹೆಬ್ಬಾಳಕರ
ಲಕ್ಷ್ಮಿ ಹೆಬ್ಬಾಳಕರ   

ಬೆಂಗಳೂರು: ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷ ಪಟ್ಟದಿಂದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರನ್ನು ಕೆಳಗಿಳಿಸಿ ಮತ್ತೊಬ್ಬರಿಗೆ ಅವ
ಕಾಶ ಕಲ್ಪಿಸಲು ತೆರೆಮರೆಯಲ್ಲಿ ಕಸರತ್ತು ಆರಂಭಗೊಂಡಿದೆ.

ಅದಕ್ಕೆ ಪೂರಕವಾಗಿ, ಹೆಬ್ಬಾಳಕರ ಅವರನ್ನು ಬದಲಿಸುವಂತೆ ಪಕ್ಷದ ಕೆಲವು ಮಹಿಳಾ ಕಾರ್ಯಕರ್ತೆಯರು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಸೋಮವಾರ ಭೇಟಿ ಮಾಡಿ ಮನವಿ ಮಾಡಿದ್ದಾರೆ.

ಹೆಬ್ಬಾಳಕರ ಅವರ ಅವಧಿ ಮುಗಿದು ಮೂರು ತಿಂಗಳು ಕಳೆದಿದೆ. ಮತ್ತೆ ಅವರನ್ನೇ ಮುಂದುವರಿಸಲು ಯತ್ನಗಳು ನಡೆಯುತ್ತಿವೆ. ಇದಕ್ಕೆ ಅವ
ಕಾಶ ನೀಡಬಾರದು ಎಂದು ಸುಶೀಲಾ ಮತ್ತು ಪ್ರಭಾವತಿ ಎಂಬವರ ನೇತೃತ್ವದಲ್ಲಿ ಕಾರ್ಯಕರ್ತೆಯರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು.

ADVERTISEMENT

ಪಕ್ಷದಲ್ಲಿ ಒಬ್ಬರಿಗೆ ಒಂದೇ ಹುದ್ದೆ ಎಂಬ ನಿಯಮವಿದೆ. ಅದರಂತೆ, ಹೆಬ್ಬಾಳಕರ ಬದಲು, ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಇತರ ಒಬ್ಬರಿಗೆ ಆ ಸ್ಥಾನ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ರಾಜ್ಯ ರಾಜಕೀಯದಲ್ಲಿ ಲಕ್ಷ್ಮಿ ಹೆಬ್ಬಾಳಕರ ವಿವಾದಾತ್ಮಕ ಹೇಳಿಕೆಗಳಿಂದ ಪ್ರಚಾರದಲ್ಲಿರುವ ಶಾಸಕಿ. ಇತ್ತೀಚೆಗಷ್ಟೇ ಜಾರಕಿಹೊಳಿ ಸಹೋದರರ ವಿರುದ್ಧ ಸೆಟೆದು ನಿಲ್ಲುವ ಮೂಲಕ ಗಮನಸೆಳೆದಿದ್ದರು. ಸಮ್ಮಿಶ್ರ ಸರ್ಕಾರ ಇನ್ನೇನು ಉರುಳಲಿದೆ ಎನ್ನುವಷ್ಟರಮಟ್ಟಿಗೆ ಅವರು ಸುದ್ದಿಯಾಗಿದ್ದರು. ಪರೋಕ್ಷವಾಗಿ ಜಾರಕಿಹೊಳಿ ಸಹೋದರರ ವಿರುದ್ಧ ಅವರು ಹೇಳಿಕೆ ನೀಡುತ್ತಿರುವುದು ಪಕ್ಷದ ನಾಯಕರಿಗೆ ಮುಜುಗರ ತಂದಿದೆ. ಸಚಿವ ಡಿ.ಕೆ. ಶಿವಕುಮಾರ್‌ ಮತ್ತು ಎಐಸಿಸಿ ಮುಖಂಡರು ಬೆನ್ನಿಗಿದ್ದಾರೆ ಎಂಬ ಧೋರಣೆಯಿಂದ ಹೆಬ್ಬಾಳಕರ ವ್ಯಾಪ್ತಿ ಮೀರಿ ಮಾತನಾಡುತ್ತಿದ್ದಾರೆ ಎಂಬ ಆರೋಪವೂ ಇದೆ.

ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ: ಮಹಿಳಾ ಘಟಕದ ಅಧ್ಯಕ್ಷ ಸ್ಥಾನದ ಮೇಲೆ ಹಲವರು ಕಣ್ಣಿಟ್ಟಿದ್ದಾರೆ. ಎಸ್.ಟಿ ಕೋಟಾದಲ್ಲಿ ಹೊಸಕೋಟೆಯ ಕಮಲಾಕ್ಷಿ, ಹಿಂದುಳಿದ ವರ್ಗದಡಿ ಮೈಸೂರಿನ‌ ಪುಷ್ಪಾ ಅಮರನಾಥ್, ಒಕ್ಕಲಿಗ ಕೋಟಾದಲ್ಲಿ ತುಮಕೂರಿನ ಗೀತಾ ಹಾಗೂ ಕುರುಬ ಕೋಟಾದಲ್ಲಿ ನಾಗಲಕ್ಷ್ಮಿ ಚೌಧರಿ ಲಾಬಿ ನಡೆಸಿದ್ದಾರೆ ಎನ್ನಲಾಗಿದೆ.

ವೀರಶೈವ ಲಿಂಗಾಯತ ಸಮುದಾಯ ಹೆಬ್ಬಾಳಕರ ಅವರ ಬೆನ್ನಿಗೆ ನಿಲ್ಲಲಿದೆಯೋ ಅಥವಾ ಹೈಕಮಾಂಡ್ ಮೇಲೆ ಪ್ರಭಾವ ಬೀರಿ ಅವರು ತಮ್ಮ ಸ್ಥಾನ ಉಳಿಸಿಕೊಳುತ್ತಾರೆಯೇ ಎನ್ನುವುದು ಸದ್ಯದ ಕುತೂಹಲ‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.