ADVERTISEMENT

‘ಸೆನೆಟರ್ ಪತ್ನಿಯ ಕ್ಷಮೆ ಕೇಳುವ ಮೋದಿ, ಸಂತ್ರಸ್ತರಿಗೆ ಸಾಂತ್ವನ ಹೇಳಿದ್ದಾರೆಯೇ?’

ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2019, 14:40 IST
Last Updated 24 ಸೆಪ್ಟೆಂಬರ್ 2019, 14:40 IST
   

ಬೆಳಗಾವಿ: ‘ಜನ್ಮದಿನದಂದು ಪತಿ ನಿಮ್ಮೊಂದಿಗಿರಲು ನನ್ನಿಂದಾಗಿ ಸಾಧ್ಯವಾಗಲಿಲ್ಲ. ಆದ್ದರಿಂದ ಕ್ಷಮೆ ಯಾಚಿಸುತ್ತೇನೆ ಎಂದು ಅಮೆರಿಕದ ಸೆನೆಟರ್‌ ಜಾನ್‌ ಕ್ರಾನಿಯೆ ಪತ್ನಿ ಸ್ಯಾಂಡಿಯ ಅವರಿಗೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕದಲ್ಲಿ ನೆರೆಯಿಂದ ಸಂತ್ರಸ್ತರಾದ ಲಕ್ಷಾಂತರ ಜನರಿಗೆ ಸಾಂತ್ವನ ಹೇಳಿ ಒಂದಾದರೂ ಟ್ವೀಟ್ ಮಾಡಿದ್ದಾರೆಯೇ?’ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಕೇಳಿದರು.

ಇಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಸರ್ಕಾರದ ಎದುರು ಭಿಕ್ಷೆ ಬೇಡಿದರೂ ಕಣ್ಣು ತೆರೆಯುತ್ತಿಲ್ಲ. ಬಿಜೆಪಿಯವರು ಜನರಿಗೆ ವಿಶ್ವಾಸ ದ್ರೋಹ ಮಾಡಿದ್ದಾರೆ. ಶಾಸಕರನ್ನು ಖರೀದಿಸಿ, ವಿಮಾನದಲ್ಲಿ ಕರೆದೊಯ್ಯುವುದಕ್ಕೆ, ಸ್ಟಾರ್‌ ಹೋಟೆಲ್‌ನಲ್ಲಿ ಅವರನ್ನು ಉಳಿಸುವುದಕ್ಕೆ ಹಣವಿತ್ತು. ಸಂತ್ರಸ್ತರಿಗೆ ಪರಿಹಾರ ಕೊಡಲು ಹಣವಿಲ್ಲವೇ? ಈ ಸರ್ಕಾರಕ್ಕೆ ದೃಷ್ಟಿ ಇಲ್ಲ, ಶ್ರವಣ ಶಕ್ತಿಯೂ ಇಲ್ಲ’ ಎಂದು ಟೀಕಿಸಿದರು.‌

ADVERTISEMENT

‘ಸಂಸದ ತೇಜಸ್ವಿ ಸೂರ್ಯಗೆ ಭಾಷಣ ಮಾಡಿಕೊಂಡು ಓಡಾಡುವುದಷ್ಟೇ ಗೊತ್ತು. ಸಾಮಾಜಿಕ ಮಾಧ್ಯಮದಲ್ಲಿ ಬ್ಯುಸಿಯಾಗಿರುವ ಅವರಿಗೆ, ಹಳ್ಳಿಗಳಲ್ಲಿ ಜನರ ಸಂಕಷ್ಟಗಳು ಗೊತ್ತಿಲ್ಲ’ ಎಂದು ಛೇಡಿಸಿದರು.

ಸರ್ಕಾರ ಕೊಚ್ಚಿ ಹೋಗಲಿದೆ:‘ಹಲವು ಜನಪರ ಯೋಜನೆ ನೀಡಿದರೂ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಲಾಗಲಿಲ್ಲ. ಕಿತ್ತೂರು ರಾಣಿ ಚನ್ನಮ್ಮನ ಬೆನ್ನಿಗೇ ಕೆಲವರು ಚೂರಿ ಹಾಕಿದರು. ಸಿದ್ದರಾಮಯ್ಯ ಯಾವ ಲೆಕ್ಕ?’ ಎಂದರು.

‘ನಮ್ಮ ಬಲ ಕುಗ್ಗಿಸಲು ಬಿಜೆಪಿಯವರು ಒಂದಾದ ಮೇಲೊಂದು ಅಸ್ತ್ರ ಪ್ರಯೋಗಿಸುತ್ತಿದ್ದಾರೆ. ಹೀಗಾಗಿ ಮುಖಂಡರೆಲ್ಲರೂ ಒಗ್ಗಟ್ಟಾಗಬೇಕು’ ಎಂದು ತಿಳಿಸಿದರು.

ನಾಯಕಿ ಉಮಾಶ್ರೀ ಮಾತನಾಡಿ, ‘ಸಂತ್ರಸ್ತರಿಗೆ ನೆರವಾಗುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಜನರ ಕಣ್ಣೀರಿನ ಕೋಡಿಯಲ್ಲಿ ಈ ಸರ್ಕಾರ ಕೊಚ್ಚಿ ಹೋಗಲಿದೆ. ದಾನಿಗಳು ನೀಡಿದ ನೆರವಿನಿಂದ ಜನರು ಉಳಿದಿದ್ದಾರೆಯೇ ಹೊರತು, ಸರ್ಕಾರ ಏನೂ ಕೊಟ್ಟಿಲ್ಲ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.