ADVERTISEMENT

ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ವಿಧಿವಶ

​ಪ್ರಜಾವಾಣಿ ವಾರ್ತೆ
Published 19 ಜುಲೈ 2018, 4:57 IST
Last Updated 19 ಜುಲೈ 2018, 4:57 IST
ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ
ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ   

ಉಡುಪಿ:ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶೀರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ (55) ಗುರುವಾರ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

ತೀವ್ರ ರಕ್ತವಾಂತಿ ಹಾಗೂ ಹೊಟ್ಟೆನೋವಿನಿಂದ ಬಳಲುತ್ತಿದ್ದ ಅವರನ್ನು ಬುಧವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದ್ದಕ್ಕಿದ್ದಂತೆ ಶ್ರೀಗಳ ಆರೋಗ್ಯ ಸ್ಥಿತಿ ಬಿಗಡಾಯಿಸಿದ್ದರಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಉಸಿರಾಟದ ಸಮಸ್ಯೆ ಎದುರಾಗಿದ್ದರಿಂದ ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ಸ್ಪಷ್ಟಪಡಿಸಿದ್ದಾರೆ.

ADVERTISEMENT

ಶ್ರೀಗಳ ಪಾರ್ಥಿವ ಶರೀರವನ್ನು ಗುರುವಾರ ಶೀರೂರಿನ ಮೂಲಮಠಕ್ಕೆ ಕೊಂಡೊಯ್ಯಲಾಗುವುದು. ಸ್ವಾಮೀಜಿಗಳು, ಗಣ್ಯರು, ರಾಜಕೀಯ ಮುಖಂಡರು ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ವಿವಾದದ ಸುಳಿಯಲ್ಲಿ

ಈಚೆಗೆ ಪಟ್ಟದ ದೇವರ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಉಡುಪಿಯ ಅಷ್ಟಮಠಗಳಲ್ಲಿ ಬಂಡಾಯ ಭುಗಿಲೆದ್ದಿತ್ತು. ಶೀರೂರು ಶ್ರೀಗಳು ಪೂಜೆ ಸಲ್ಲಿಸಲು ಶ್ರೀಕೃಷ್ಣ ಮಠಕ್ಕೆ ಒಪ್ಪಿಸಿದ್ದ ಪಟ್ಟದ ದೇವರನ್ನು ಮರಳಿಸಲು ಇತರ ಮಠಾಧೀಶರು ನಿರಾಕರಿಸಿದ್ದರು. ಶಿಷ್ಯ ಸ್ವೀಕಾರ ಮಾಡಿಕೊಳ್ಳದ ಹೊರತು ಪಟ್ಟದ ದೇವರನ್ನು ಶೀರೂರು ಶ್ರೀಗಳಿಗೆ ಕೊಡುವುದಿಲ್ಲ ಎಂದು ಪಟ್ಟು ಹಿಡಿದ್ದರು. ಮಠಾಧೀಶರ ಈ ನಡೆಯ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದ ಶೀರೂರು ಶ್ರೀಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು. ಈಚೆಗೆ ಕೆವಿಯಟ್ ಸಲ್ಲಿಸಿ, ಪಟ್ಟದ ದೇವರನ್ನು ಕೊಡದಿದ್ದರೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವುದಾಗಿಯೂ ಎಚ್ಚರಿಕೆಯನ್ನು ನೀಡಿದ್ದರು.

ಈ ಬೆಳವಣಿಗೆಗಳ ಮಧ್ಯೆಯೇ ಶೀರೂರು ಶ್ರೀಗಳಿಗೆ ತೀವ್ರ ಅನಾರೋಗ್ಯ ಉಂಟಾಗಿ ಮೃತಪಟ್ಟಿರುವುದು, ಸಹಸ್ರಾರು ಭಕ್ತರನ್ನು ದಿಗ್ಭ್ರಾಂತರನ್ನಾಗಿ ಮಾಡಿದೆ.‌

ಮಧ್ವ ಪರಂಪರೆಯ ಕಟ್ಟುಪಾಡುಗಳನ್ನು ಉಲ್ಲಂಘಿಸಿದ ಆರೋಪ ಹೊತ್ತಿದ್ದಶೀರೂರು ಸ್ವಾಮೀಜಿ, ಸಾರ್ವಜನಿಕವಾಗಿ ಡ್ರಮ್‌ ಬಾರಿಸಿ ಎಲ್ಲರ ಹುಬ್ಬೇರಿಸಿದ್ದರು. ಯತಿಗಳು ಹೀಗೆ ಬದುಕಬೇಕು ಎಂಬ ಕಟ್ಟಳೆಯನ್ನು ಮೀರಿ, ಇತರ ಮಠಾಧೀಶರ ಕೆಂಗಣ್ಣಿಗೆ ಗುರಿಯಾಗಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿದ್ದರು. ಜತೆಗೆ, ಅಷ್ಠಮಠದ ಸ್ವಾಮೀಜಿಗಳಿಗೆ ಮಕ್ಕಳಿದ್ದಾರೆ ಎನ್ನಲಾದ ಶೀರೂರು ಶ್ರೀಗಳು ವಿಡಿಯೋ ದೊಡ್ಡ ಸುದ್ದಿಯಾಗಿತ್ತು.

ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ

‘ಪಟ್ಟದ ದೇವರಿಗಾಗಿ ಕ್ರಿಮಿನಲ್‌ ಪ್ರಕರಣ ದಾಖಲಿಸಲೂ ಸಿದ್ಧ’ ಎಂದಿದ್ದ ಶ್ರೀಗಳು
‘ಶ್ರೀಕೃಷ್ಣ ನನ್ನ ಸ್ವತ್ತಲ್ಲ, ರಾಮ ದೇವರೂ ಸಹ ನನ್ನ ಸ್ವತ್ತಲ್ಲ. ಆದರೆ, ವಿಠಲ ದೇವರು ಮಾತ್ರ ನನ್ನ ಸ್ವತ್ತು. ಪಟ್ಟದ ದೇವರನ್ನು ಪಡೆಯಲು ಅವಶ್ಯಕತೆ ಬಿದ್ದರೆ ಕ್ರಿಮಿನಲ್‌ ಪ್ರಕರಣ ದಾಖಲಿಸಲೂ ಸಿದ್ಧ’ ಎಂದು ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ತಿಳಿಸಿದ್ದರು.

ಈ ಹಿಂದೆ ಶಿರೂರು ಮೂಲ ಮಠದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ್ದಶ್ರೀಗಳು, ‘ಜನರು ಬೇರೆ ಊರಿಗೆ ತೆರಳುವ ಸಂದರ್ಭ ತಮ್ಮಲ್ಲಿರುವ ಆಭರಣ ಹಾಗೂ ಬೆಲೆಬಾಳುವ ವಸ್ತುಗಳನ್ನು ನಂಬಿಕಸ್ಥರಿಗೆ ನೀಡುವುದು ಸಹಜ. ಹಾಗೆಯೇ, ಊರಿಗೆ ಮರಳಿದ ನಂತರ ಅವರ ಸ್ವತ್ತು ಮರಳಿಸುವುದು ಅವರ ಧರ್ಮ. ಒಂದು ವೇಳೆ ಸ್ವತ್ತನ್ನು ನಿರಾಕರಿಸಿದರೆ ಅದು ದರೋಡೆಯಂತೆ. ಅಂತೆಯೇ ಕೃಷ್ಣ ಮಠದಲ್ಲಿ ಪೂಜೆಗೆ ಇಟ್ಟಿರುವ ಪಟ್ಟದ ದೇವರನ್ನು ಕೊಡಲು ನಿರಾಕರಿಸುತ್ತಿರುವುದು ಸಹ ದರೋಡೆಗೆ ಸಮಾನ’ ಎಂದಿದ್ದರು.

ಉಡುಪಿಯ ಶ್ರೀಕೃಷ್ಣ ಮಠದ ಸಂಪ್ರದಾಯದ ಪ್ರಕಾರ ಅಷ್ಟ ಮಠಗಳಿಗೂ ಒಂದೊಂದು ಪಟ್ಟದ ದೇವರನ್ನು ಪೂಜಿಸುವುದು ಪ್ರತೀತಿ. ಪ್ರತಿನಿತ್ಯ ನಿಯಮ ನಿಷ್ಠೆಯಿಂದ ಪೂಜೆ ನಡೆಯಬೇಕು. ಒಂದು ವೇಳೆ ಮಠದ ಸ್ವಾಮೀಜಿ ಅನಾರೋಗ್ಯಕ್ಕೀಡಾದರೆ, ಬೇರೆಡೆಗೆ ತೆರಳಿದರೆ ಮೂರ್ತಿಯನ್ನು ಹೊಂದಿರುವ ಪೆಟ್ಟಿಗೆಯನ್ನು ಶ್ರೀಕೃಷ್ಣ ಮಠದಲ್ಲಿ ಇಡುತ್ತಾರೆ. ಸಂಪ್ರದಾಯದ ಪ್ರಕಾರ ದೇವರ ಪೆಟ್ಟಿಗೆಯನ್ನು ತೆರೆಯುವ ಅಧಿಕಾರ ಕೇವಲ ಸ್ವಾಮೀಜಿಗಳಿಗೆ ಮಾತ್ರ ಇರುತ್ತದೆ. ಮಠದಲ್ಲಿ ಕೆಲವು ಸ್ವಾಮೀಜಿಗಳು ವಿಮಾನದಲ್ಲಿ ತೆರಳುತ್ತಾರೆ. ಈ ವೇಳೆ ಪಟ್ಟದ ದೇವರನ್ನು ಅಲ್ಲಿನ ಸಿಬ್ಬಂದಿ ಮುಟ್ಟುತ್ತಾರೆ. ಇದು ಸರಿಯೇ ಎಂದು ಶ್ರೀಗಳು ಪ್ರಶ್ನಿಸಿದ್ದರು.‌

ಅಷ್ಟ ಮಠದಲ್ಲಿ ಏಳು ಸ್ವಾಮೀಜಿಗಳು ಒಂದಾಗಿ ಸಭೆ ನಡೆಸಿದ್ದಾರೆ. ಅವರಲ್ಲಿ ಒಬ್ಬರನ್ನು ನಾಯಕರನ್ನಾಗಿ ಮಾಡಿಕೊಂಡಿದ್ದಾರೆ. ಅವರು ಯಾರೆಂಬುವುದು ಎಲ್ಲರಿಗೂ ಗೊತ್ತಿದೆ ಎಂದು ಪೇಜಾವರ ಶ್ರೀಗಳ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದರು.
‘ಶಿಷ್ಯ ಸ್ವೀಕಾರ ಮಾಡದ ಹೊರತು ಪಟ್ಟದ ದೇವರನ್ನು ಕೊಡುವುದಿಲ್ಲ ಎಂದು ಹೇಳಲು ಅವರು ಯಾರು? ಈ ಬಗ್ಗೆ ಸಭೆಗೆ ಕರೆದರೂ ನಾನು ಹೋಗುವುದಿಲ್ಲ. ಶ್ರೀಕೃಷ್ಣ ಮುಖ್ಯಪ್ರಾಣವಾದ ನನ್ನ ಪಟ್ಟದ ದೇವರನ್ನು ಪುನಃ ಮೂಲ ಮಠಕ್ಕೆ ಕರೆಸಿಕೊಳ್ಳುತ್ತಾನೆ’ ಎಂದು ಲಕ್ಷ್ಮೀವರ ತೀರ್ಥ ಸ್ವಾಮೀಜಿ ಹೇಳಿದ್ದರು.

‘ಶ್ರೀಕೃಷ್ಣ ಮಠದ ಒಳಗೆ ಪರ್ಯಾಯ ಮಠದ ವಿದ್ಯಾಧೀಶ ಸ್ವಾಮೀಜಿ ಅವರು ಗನ್‌ಮ್ಯಾನ್‌ ನೇಮಕ ಮಾಡಿಕೊಂಡಿದ್ದಾರೆ. ಆದರೆ, ನಿಜವಾಗಿ ಗನ್‌ಮ್ಯಾನ್‌ ಅಗತ್ಯವಿರುವುದು ನನಗೆ’ ಎಂದಿದ್ದರು.

ಶೀರೂರು ಶ್ರೀ ಕೆವಿಯಟ್ ಸಲ್ಲಿಕೆ
ಕೃಷ್ಣಮಠದಲ್ಲಿ ಪೂಜೆಗೆ ಇಟ್ಟಿರುವ ಪಟ್ಟದ ದೇವರನ್ನು ಕೊಡಲು ನಿರಾಕರಿಸುತ್ತಿರುವ ಮಠಾಧೀಶರ ವಿರುದ್ಧ ಶೀರೂರು ಶ್ರೀಗಳು ಉಡುಪಿ ನ್ಯಾಯಾಲಯಕ್ಕೆ ಕೆವಿಯಟ್‌ ಅರ್ಜಿ ಸಲ್ಲಿಸಿದ್ದರು.

ಶೀರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿಗಳು ಶಿಷ್ಯ ಸ್ವೀಕಾರ ಮಾಡದ ಹೊರತು ಪಟ್ಟದ ದೇವರನ್ನು ಕೊಡುವುದಿಲ್ಲ ಎಂದು ಮಠಾಧೀಶರು ನಿರ್ಣಯ ಕೈಗೊಂಡಿರುವ ಹಿನ್ನೆಲೆಯಲ್ಲಿ ಲಕ್ಷ್ಮೀವರತೀರ್ಥ ಶ್ರೀಗಳು ಕಾನೂನೂ ಹೋರಾಟಕ್ಕೆ ಮುಂದಾಗಿದ್ದರು. ಅಷ್ಟಮಠದ ಯತಿಗಳು ಪಟ್ಟದ ದೇವರನ್ನು ಹಸ್ತಾಂತರಿಸುವ ವಿಷಯದಲ್ಲಿ ನ್ಯಾಯಾಲಯದಲ್ಲಿ ದಾವೆ ಹೂಡಿದಲ್ಲಿ ಏಕಪಕ್ಷೀಯ ಆದೇಶ ನೀಡಬಾರದು ಎಂಬ ಮುಂಜಾಗ್ರತೆಯಿಂದಾಗಿ ಶೀರೂರು ಶ್ರೀಗಳು ಕೆವಿಯಟ್‌ ಸಲ್ಲಿಸಿದ್ದರು.

ಚಾತುರ್ಮಾಸ್ಯದೊಳಗೆ ಶೀರೂರು ಶ್ರೀಗಳ ಪ್ರಕರಣ ಇತ್ಯರ್ಥವಾಗುತ್ತದೆ ಎಂದು ಈಚೆಗೆ ಪಲಿಮಾರು ವಿದ್ಯಾಧೀಶ ಶ್ರೀಗಳು ಹೇಳಿದ್ದರು. ಶೀರೂರು ಶ್ರೀಗಳು ಕೆವಿಯಟ್ ಸಲ್ಲಿಸಿರುವುದರಿಂದ ಪ್ರಕರಣ ಸುಖಾಂತ್ಯ ಕಾಣುವ ಲಕ್ಷಣಗಳು ಕಾಣುತ್ತಿಲ್ಲ ಎಂದು ಮಠದ ಮೂಲಗಳು ತಿಳಿಸಿದ್ದವು.

ಏನಿದು ವಿವಾದ?
ಅಷ್ಟಮಠಗಳ ಯತಿಗಳು ಪ್ರತ್ಯೇಕವಾಗಿ ಪಟ್ಟದ ದೇವರನ್ನು ಪೂಜಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಅದರಂತೆ, ಶೀರೂರು ಮಠಕ್ಕೆ ‘ಶ್ರೀಅನ್ನವಿಠ್ಠಲ’ ಪಟ್ಟದ ದೇವರು. ಲಕ್ಷ್ಮೀವರ ತೀರ್ಥರಿಗೆ ಈಚೆಗೆ ಅನಾರೋಗ್ಯ ಕಾಡಿದ್ದರಿಂದ ಪಟ್ಟದ ದೇವರಿಗೆ ಪೂಜೆ ಸಲ್ಲಿಸಲು ಸಾಧ್ಯವಾಗದ ಕಾರಣ ಕೃಷ್ಣಮಠಕ್ಕೆ ಒಪ್ಪಿಸಿದ್ದರು. ಚೇತರಿಸಿಕೊಂಡ ಬಳಿಕ ಮರಳಿ ಪಟ್ಟದ ದೇವರನ್ನು ಪಡೆಯಲು ಹೋದಾಗ, ಮಠದ ಸಂಪ್ರದಾಯಗಳಿಗೆ ಬದ್ಧವಾಗಿ ಶಿಷ್ಯಸ್ವೀಕಾರ ಮಾಡದ ಹೊರತು ಪಟ್ಟದ ದೇವರನ್ನು ಹಿಂದಿರುಸಲು ಸಾಧ್ಯವಿಲ್ಲ ಎಂದು ಕೆಲವು ಮಠಾಧೀಶರು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿದ್ದವು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಶೀರೂರು ಶ್ರೀಗಳು ಹೇಳಿಕೆ ನೀಡಿ ಸುದ್ದಿಯಾಗಿದ್ದರು. ಕೊನೆಯ ಘಳಿಗೆಯಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಈಚೆಗೆ, ಅಷ್ಟಮಠಾಧೀಶರಿಗೆ ಮಕ್ಕಳಿದ್ದಾರೆ ಎಂದು ಶೀರೂರು ಶ್ರೀಗಳು ಹೇಳಿದ್ದಾರೆ ಎನ್ನಲಾದ ವಿಡಿಯೊ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು.

ಸಂಗೀತ ತರಬೇತಿ ಅಕಾಡೆಮಿ ನಿರ್ಮಾಣಕ್ಕೆ ಶೀರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಈಚೆಗೆ ಶಿಲಾನ್ಯಾಸ ನೇರವೇರಿಸಿದ್ದರು. –ಪ್ರಜಾವಾಣಿ ಚಿತ್ರ
ಸಂಗೀತ ತರಬೇತಿ ಅಕಾಡೆಮಿ ನಿರ್ಮಾಣ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅಂತರ ರಾಷ್ಟ್ರೀಯ ಖ್ಯಾತಿ ಡ್ರಮ್ಸ್‌ ವಾದಕ ಶಿವಮಣಿ ತಮ್ಮ ಕೈಚಳಕದಿಂದ ವಿವಿಧ ಶೈಲಿಯಲ್ಲಿ ಡ್ರಮ್ ಬಾರಿಸಿದರು.
ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ

ಪುತ್ತಿಗೆ ಶ್ರೀಗಳ ವಿಚಾರ ಭಿನ್ನ– ಪೇಜಾವರ ಶ್ರೀ
ಶೀರೂರು ಮಠದ ಲಕ್ಷ್ಮೀವರ ಸ್ವಾಮೀಜಿ ವಿಚಾರ ಹಾಗೂ ಪುತ್ತಿಗೆ ಮಠದ ಸುಗುಣೇಂದ್ರ ಶ್ರೀಗಳ ವಿಚಾರ ಭಿನ್ನ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದರು.

ಶೀರೂರು ಶ್ರೀಗಳು ಸನ್ಯಾಸಧರ್ಮ ಪಾಲಿಸುತ್ತಿಲ್ಲ ಎಂಬ ವಿಚಾರ ಈಗಾಗಲೇ ಬಹಿರಂಗವಾಗಿದೆ. ಆದರೆ, ಪುತ್ತಿಗೆ ಸುಗುಣೇಂದ್ರತೀರ್ಥ ಶ್ರೀಗಳು ಸೀಮೋಲ್ಲಂಘನ (ವಿದೇಶ ಪ್ರವಾಸ) ಮಾಡಿದ್ದರೂ ಅವರು ಯತಿಧರ್ಮದಿಂದ ದೂರವಾಗಿರಲಿಲ್ಲ ಎಂದು ಪೇಜಾವರ ಶ್ರೀಗಳು ಸಮರ್ಥಿಸಿಕೊಂಡಿದ್ದರು.

ಸನ್ಯಾಸಿ ಅಲ್ಲದವರು ಪಟ್ಟದ ದೇವರಿಗೆ ಪೂಜೆ ಮಾಡುವುದು ಸರಿಯಲ್ಲ. ಶೀರೂರು ಶ್ರೀಗಳಿಗೆ ಪಟ್ಟದ ದೇವರನ್ನು ಕೊಡಲು ಅನ್ಯ ಕಾರಣಗಳಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.