ADVERTISEMENT

ಭೂ ಪರಿಹಾರ ಕಾಯ್ದೆ ತಿದ್ದುಪಡಿಗೆ ವಿರೋಧ: ರಾಜ್ಯಪಾಲರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2019, 20:15 IST
Last Updated 27 ಫೆಬ್ರುವರಿ 2019, 20:15 IST
ವಜುಭಾಯಿ ವಾಲಾ
ವಜುಭಾಯಿ ವಾಲಾ   

ಬೆಂಗಳೂರು: ರೈತರಿಗೆ ನ್ಯಾಯಯುತ ಪರಿಹಾರ ನೀಡಲು ಕೇಂದ್ರದಲ್ಲಿದ್ದ ಕಾಂಗ್ರೆಸ್‌ ನೇತೃತ್ವದ ಯು‍ಪಿಎ ಸರ್ಕಾರ ಜಾರಿಗೊಳಿಸಿದ್ದ ಕಾಯ್ದೆಗೆ ರಾಜ್ಯ ಸರ್ಕಾರ ತಂದಿರುವ ತಿದ್ದುಪಡಿಗೆ ತೀವ್ರ ವಿರೋಧ ವ್ಯಕ್ತವಾಗಿದೆ.

‘ರೈತರಿಗೆ ದುಪ್ಪಟ್ಟು ಪರಿಹಾರ ಇಲ್ಲ; ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತಂದ ಸರ್ಕಾರ’ ಎಂಬ ಶೀರ್ಷಿಕೆಯಡಿ ಇದೇ 25ರಂದು ‘ಪ್ರಜಾವಾಣಿ’ ವಿಶೇಷ ವರದಿ ಪ್ರಕಟಿಸಿತ್ತು.

ಈ ವರದಿ ಉಲ್ಲೇಖಿಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿರುವ 10ಕ್ಕೂ ಹೆಚ್ಚು ಮಾಜಿ ಶಾಸಕರು, ಮಸೂದೆಯನ್ನು ಅಂಗೀಕರಿಸದೇ ಸರ್ಕಾರಕ್ಕೆ ವಾಪಸು ಕಳುಹಿಸಬೇಕು ಎಂದು ಕೋರಿದ್ದಾರೆ.

ADVERTISEMENT

ಮಾಜಿ ಶಾಸಕರಾದ ವರ್ತೂರಿನ ಬಿ.ವಿ. ರಾಮಚಂದ್ರ ರೆಡ್ಡಿ, ಅರಭಾವಿಯ ಆರ್.ಎಂ. ಪಾಟೀಲ, ಸವದತ್ತಿಯ ಆರ್.ವಿ. ಪಾಟೀಲ, ಸಾಗರದ ಎಲ್.ಟಿ. ತಿಮ್ಮಪ್ಪ ಹೆಗಡೆ, ಚಿಕ್ಕನಾಯಕನಹಳ್ಳಿಯ ಬಿ. ಲಕ್ಕಪ್ಪ, ಚಿಕ್ಕೋಡಿಯ ಶಕುಂತಲ ಟಿ. ಚೌಗಲೆ, ಕೋಲಾರದ ಕೆ.ಎ. ನಿಸಾರ್ ಅಹಮದ್‌, ಗೋಕಾಕದ ಚಂದ್ರಶೇಖರ ನಾಯಕ್, ಕುಷ್ಟಗಿಯ ಹಸನ್‌ಸಾಬ್‌ ದೋತಿಹಾಳ, ತುರುವೇಕೆರೆ ಎಸ್. ರುದ್ರಪ್ಪ ಹಾಗೂ ಹುಲಸೂರಿನ ಶಿವಕಾಂತಾ ಚತುರೆ ಅವರು ಮನವಿಗೆ ಸಹಿ ಹಾಕಿದ್ದಾರೆ.

ಭೂ ಸ್ವಾಧೀನ ಪುನರ್ವಸತಿ, ಪುನರ್ ವ್ಯವಸ್ಥೆಯಲ್ಲಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕ ಹಕ್ಕು ಮಸೂದೆ ಬಗ್ಗೆ ವಿಧಾನಮಂಡಲದಲ್ಲಿ ಚರ್ಚೆಯನ್ನೇ ನಡೆಸದೇ ಅಂಗೀಕಾರ ಪಡೆಯಲಾಗಿದೆ.ಕರ್ನಾಟಕದಲ್ಲಿ ನಾಲ್ಕು ಕೋಟಿಗೂ ಹೆಚ್ಚಿನ ಸಂಖ್ಯೆಯ ರೈತರಿದ್ದಾರೆ. ಮಸೂದೆಗೆ ಅಂಕಿತ ಹಾಕಿದರೆ ರೈತರಿಗೆ ಅನ್ಯಾಯವಾಗಲಿದೆ ಎಂದೂ ಮನವಿಯಲ್ಲಿ ವಿವರಿಸಿದ್ದಾರೆ.

ಸದರಿ ಮಸೂದೆ ಬಗ್ಗೆ ವಿಧಾನಮಂಡಲದಲ್ಲಿ ಸುದೀರ್ಘ ಚರ್ಚೆ ನಡೆಸಿ ಮರು ಅನುಮೋದನೆ ಪಡೆಯಿರಿ ಎಂದು ಸೂಚಿಸಬೇಕು ಎಂದೂ ಕೋರಿದ್ದಾರೆ. ಪ್ರತಿ ಗಳಿಗೆಯೂ ರೈತರ ಅಭಿವೃದ್ಧಿ, ರೈತರ ಪರ ಎಂದು ಕನವರಿಸುತ್ತಿರುವ ಸರ್ಕಾರ ಈ ರೀತಿಯ ಮಸೂದೆಗೆ ಅಂಗೀಕಾರ ಪಡೆಯಲು ರಾಜ್ಯ

ಪಾಲರಿಗೆ ಕಳುಹಿಸಿರುವುದು ದುರದೃಷ್ಟಕರ. ಮನ ಮೋಹನಸಿಂಗ್‌ ನಾಯಕತ್ವದ ಯುಪಿಎ ಸರ್ಕಾರ ಜಾರಿಗೆ ತಂದಿರುವ ಕಾಯ್ದೆಯನ್ನು ಧಿಕ್ಕರಿಸಿ, ತಿದ್ದುಪಡಿ ಮಸೂದೆ ತಂದಿರುವುದು ಖಂಡನೀಯವಾಗಿದೆ. ಸರ್ಕಾರ ಒಂದು ವೇಳೆ ಕಾಯ್ದೆಯಾಗಿ ಜಾರಿ ಮಾಡಿದರೆ ರಾಜ್ಯದಾದ್ಯಂತ ಹೋರಾಟ ರೂಪಿಸಲು ಉದ್ದೇಶಿಸಲಾಗಿದೆ ಎಂದೂ ವಿವರಿಸಿದ್ದಾರೆ.

‘ಪುನರ್‌ವಸತಿ ಬದಲು ಇಡುಗಂಟು’
ಸರ್ಕಾರ ವಿವಿಧ ಉದ್ದೇಶಕ್ಕೆ ಜಮೀನು ಸ್ವಾಧೀನಪಡಿಸಿಕೊಂಡಾಗ ಭೂಮಿ ಕಳೆದುಕೊಳ್ಳುವವರಿಗೆ ಪುನರ್ವಸತಿ ಬದಲಾಗಿ ಇಡುಗಂಟು (ಲಮ್‌ಸಮ್) ಮೊತ್ತವನ್ನು ನೀಡಲಾಗುವುದು ಎಂದುಕಂದಾಯ ಇಲಾಖೆ ಉಪ ಕಾರ್ಯದರ್ಶಿ ಲಲಿತಾ ಎಚ್‌. ಹಂದಿಗೋಳ ತಿಳಿಸಿದ್ದಾರೆ.

ಈ ಇಡುಗಂಟು ಮೊತ್ತವು ಸಂತ್ರಸ್ತ ಕುಟುಂಬಗಳಿಗೆ ಅನಾನುಕೂಲವಾಗುವ ಮೊತ್ತವಾಗಿರುವುದಿಲ್ಲ. ಅದಕ್ಕಿಂತ ಹೆಚ್ಚಿನ ಮೊತ್ತವಾಗಿರುತ್ತದೆ ಎಂದು ಅವರು ನೀಡಿದ ಸ್ಪಷ್ಟನೆಯಲ್ಲಿ ತಿಳಿಸಿದ್ದಾರೆ.

ಭೂಸ್ವಾಧೀನ ಪ್ರಕ್ರಿಯೆಯನ್ನು ವಿಳಂಬವಿಲ್ಲದೇ ಕಡಿಮೆ ಅವಧಿಯಲ್ಲಿ ಕೈಗೊಳ್ಳುವ ಉದ್ದೇಶದಿಂದ ಮಸೂದೆಗೆ ತಿದ್ದುಪಡಿ ತರಲಾಗಿದೆ. ರೈತರಿಗೆ ಪರಿಹಾರ ನೀಡುವುದರಲ್ಲಿ ತಾರತಮ್ಯ ಮಾಡುವುದಿಲ್ಲ. ರಕ್ಷಣೆ, ರಸ್ತೆ, ಮೂಲಸೌಕರ್ಯ, ನೀರಾವರಿ ಮತ್ತಿತರ ಯೋಜನೆಗಳಿಗೆ ಬೇಕಾದ ಭೂಮಿಯನ್ನು ತ್ವರಿತಗತಿಯಲ್ಲಿ ಸ್ವಾಧೀನಪಡಿಸಿಕೊಳ್ಳುವುದಷ್ಟೇ ಮಸೂದೆ ಉದ್ದೇಶ. ಬೇರೆ ಯಾವುದೇ ದುರುದ್ದೇಶ ಇಲ್ಲ ಎಂದು ಅವರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.