ADVERTISEMENT

ಮೂಲ ಪರಿಹಾರಕ್ಕಿಂತ ಬಡ್ಡಿಯೇ ಹೆಚ್ಚು !

ಮುಡಾದಲ್ಲಿ ಭೂ ಸ್ವಾಧೀನ ಪರಿಹಾರ ದುರ್ಬಳಕೆ ಆರೋಪ

ಹೊನಕೆರೆ ನಂಜುಂಡೇಗೌಡ
Published 13 ಮಾರ್ಚ್ 2019, 19:51 IST
Last Updated 13 ಮಾರ್ಚ್ 2019, 19:51 IST
ಜಮೀನು ಸ್ವಾಧೀನ ಪ್ರಕರಣವೊಂದರಲ್ಲಿ ₹ 2 ಕೋಟಿ ಪರಿಹಾರಕ್ಕೆ ಆದೇಶವಾಗಿದ್ದು, ₹ 20 ಲಕ್ಷ ಪಾವತಿ ಮಾಡುವಂತೆ ಮೇಲಧಿಕಾರಿ ಹಾಕಿರುವ ಟಿಪ್ಪಣಿ. ಮುಂದಿನ ವರ್ಷ ಬಾಕಿ ಹಣಕ್ಕೆ ಶೇ 15 ಬಡ್ಡಿ ಸೇರಿದರೆ ₹ 2.08 ಲಕ್ಷ ಆಗಲಿದೆ
ಜಮೀನು ಸ್ವಾಧೀನ ಪ್ರಕರಣವೊಂದರಲ್ಲಿ ₹ 2 ಕೋಟಿ ಪರಿಹಾರಕ್ಕೆ ಆದೇಶವಾಗಿದ್ದು, ₹ 20 ಲಕ್ಷ ಪಾವತಿ ಮಾಡುವಂತೆ ಮೇಲಧಿಕಾರಿ ಹಾಕಿರುವ ಟಿಪ್ಪಣಿ. ಮುಂದಿನ ವರ್ಷ ಬಾಕಿ ಹಣಕ್ಕೆ ಶೇ 15 ಬಡ್ಡಿ ಸೇರಿದರೆ ₹ 2.08 ಲಕ್ಷ ಆಗಲಿದೆ   

ಬೆಂಗಳೂರು: ‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ), ಬಡಾವಣೆಗಳ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಂಡಿರುವ ಜಮೀನುಗಳ ಪರಿಹಾರ ವಿತರಣೆ ನೆಪದಲ್ಲಿ ಕೋಟ್ಯಂತರ ರೂಪಾಯಿ ದುರ್ಬಳಕೆ ಆಗುತ್ತಿದೆ’ ಎಂಬ ಆರೋಪ ಕೇಳಿಬಂದಿದೆ.

‘ಬಡಾವಣೆಗಳನ್ನು ಅಭಿವೃದ್ಧಿಪಡಿಸಲು ‘ಮುಡಾ’ ವಶಪಡಿಸಿಕೊಂಡಿರುವ ಜಮೀನುಗಳಿಗೆ ನಿಗದಿಯಾದ ಪರಿಹಾರದ ಮೊತ್ತಕ್ಕಿಂತಲೂ ಹೆಚ್ಚು ಬಡ್ಡಿ ಪಾವತಿಸಲಾಗುತ್ತಿದೆ. ಕೆಲವು ಜಮೀನುಗಳ ಮಾಲೀಕರು, ಮಧ್ಯವರ್ತಿಗಳು ಮತ್ತು ಅಧಿಕಾರಿಗಳನ್ನೊಳಗೊಂಡ ವಿಷವರ್ತುಲ ಈ ಬಡ್ಡಿ ವ್ಯವಹಾರವನ್ನೇ ದಂಧೆ ಮಾಡಿಕೊಂಡಿವೆ’ ಎಂದು ಹೇಳಲಾಗುತ್ತಿದೆ.

ಕಳೆದೆರಡು ದಶಕಗಳಲ್ಲಿ ವಿವಿಧೆಡೆ ಬಡಾವಣೆ ಅಭಿವೃದ್ಧಿಪಡಿಸಲು ‘ಮುಡಾ’ 646 ಎಕರೆ ಭೂಮಿ ಸ್ವಾಧೀನ
ಪಡಿಸಿಕೊಂಡಿತ್ತು. ಇದಕ್ಕೆ ಪರಿಹಾರವನ್ನೂ ನಿಗದಿಪಡಿಸಿತ್ತು. ತಮ್ಮ ಜಮೀನುಗಳಿಗೆ ನಿಗದಿಪಡಿಸಿದ ಪರಿಹಾರದ ಹಣ ಸಾಲದೆಂದು ರೈತರು ಕೋರ್ಟ್‌ ಮೆಟ್ಟಿಲು ಏರಿದ್ದರು. ಆನಂತರ, ಈ ಜಮೀನುಗಳಿಗೆ ಒಟ್ಟು ₹ 170 ಕೋಟಿ ಪರಿಹಾರ ನೀಡುವಂತೆ ಕೋರ್ಟ್‌ ಆದೇಶಿಸಿತ್ತು.

ADVERTISEMENT

ಕೋರ್ಟ್‌ ಡಿಕ್ರಿಯ ಬಳಿಕವೂ ನಗರಾಭಿವೃದ್ಧಿ ಪ್ರಾಧಿಕಾರ ಪೂರ್ಣ ಪರಿಹಾರ ವಿತರಿಸಿಲ್ಲ. ಡಿಕ್ರಿಯಾದ ಒಂದು ವರ್ಷದೊಳಗೆ ಪರಿಹಾರ ‍ಪಾವತಿಸಿದರೆ ಶೇ 9ರಷ್ಟು ಬಡ್ಡಿ ಸೇರಿಸಬೇಕು. ಎರಡನೇ ವರ್ಷದಿಂದ ಶೇ 15ರಷ್ಟು ಬಡ್ಡಿ ತೆರಬೇಕಾಗುತ್ತದೆ. ಸಹಕಾರಿ ಅಥವಾ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲೂ ಇಷ್ಟೊಂದು ಬಡ್ಡಿ ದೊರೆಯುವುದಿಲ್ಲ. ಹೀಗಾಗಿ, ಜಮೀನುಗಳ ಮಾಲೀಕರು ಪರಿಹಾರವನ್ನು ಪ್ರಾಧಿಕಾರದಲ್ಲೇ ಇಟ್ಟಿದ್ದಾರೆ. ಬರೀ ಬಡ್ಡಿ ಮಾತ್ರ ಪಡೆಯುತ್ತಿದ್ದಾರೆ. ಇದರಿಂದಾಗಿ ₹ 170 ಕೋಟಿ ಈಗ ₹ 577 ಕೋಟಿಯಾಗಿ ಬೆಳೆದಿದೆ. ‘ಮೂಗಿಗಿಂತಲೂ ಮೂಗುತಿ ಭಾರ’ ಎಂಬ ಗಾದೆಯಂತೆ ಬಡ್ಡಿಯೇ ₹ 407 ಕೋಟಿ ಆಗಿದೆ. ಪ್ರಾಧಿಕಾರ ಇದುವರೆಗೆ ಪರಿಹಾರದ ಬಾಬ್ತು ₹ 311 ಕೋಟಿ ಪಾವತಿಸಿದೆ. ಈ ಹಣ ಕೇವಲ ಬಡ್ಡಿಗೆ ಜಮೆ ಆಗುತ್ತಿದೆ ಎಂಬುದು ಗಮನಿಸಬೇಕಾದ ಸಂಗತಿ. ಇನ್ನೂ ₹266 ಕೋಟಿ ಪಾವತಿಗೆ ಬಾಕಿ ಇದೆ. ಈ ದಾಖಲೆ ‘ಪ್ರಜಾವಾಣಿ’ಗೆ ಲಭ್ಯವಾಗಿದೆ. ‘ಮುಡಾ’ ಹಣಕಾಸು ಸ್ಥಿತಿಗತಿ ಕುರಿತು ಕಾಲಕಾಲಕ್ಕೆ ಪರಿಶೀಲನೆ ನಡೆಸುತ್ತಿರುವ ಮಹಾಲೇಖಪಾಲರೂ, ಸ್ವಾಧೀನ
ಪಡಿಸಿಕೊಂಡ ಜಮೀನುಗಳಿಗೆ ಸಂಪೂರ್ಣ ಪರಿಹಾರ ವಿತರಿಸುವಂತೆ ಹೇಳಿದ್ದಾರೆ. 2015ರಲ್ಲಿ ಮುಡಾ ಅಧಿ
ಕಾರಿಗಳು ರೈತರ ಸಭೆ ಕರೆದಿದ್ದರು. ಈ ಸಭೆಯಲ್ಲಿ ಎಕರೆಗೆ ₹40 ಲಕ್ಷ ಪರಿಹಾರ ಕೊಡುವ ಪ್ರಸ್ತಾಪ ಇಡಲಾಗಿತ್ತು. ಒಂದಾವರ್ತಿಗೆ ಹಣ ಪಾವತಿಸುವ ಉದ್ದೇಶವೂ ಇತ್ತು. ಆದರೆ, ನಗರಾಭಿವೃದ್ಧಿ ಇಲಾಖೆ ಕಳುಹಿಸಿದ ಶಿಫಾರಸ್ಸನ್ನು ಹಣಕಾಸು ಇಲಾಖೆ ಮಾನ್ಯ ಮಾಡಲಿಲ್ಲ ಎಂದು ಅಧಿಕಾರಿ ಹೇಳಿದರು.

‘ಹಣ ದುರುಪಯೋಗ ಆಗಿಲ್ಲ’

ಭೂ ಸ್ವಾಧೀನ ಪ್ರಕರಣಗಳ ಪರಿಹಾರ ವಿತರಣೆಯಲ್ಲಿ ಹಣದ ದುರುಪಯೋಗ ಆಗಿಲ್ಲ. ದುರ್ಬಳಕೆ ಆಗಿರುವ ಪ್ರಕರಣಗಳನ್ನು ಗಮನಕ್ಕೆ ತಂದರೆ ತನಿಖೆ ನಡೆಸಲು ಸಿದ್ಧ. ಕೆಲವು ಪ್ರಕರಣಗಳಲ್ಲಿ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ ಪರಿಹಾರ ನೀಡುವಂತೆಕೋರ್ಟ್‌ ಹೇಳಿದೆ. ನಿಯಮದ ಪ್ರಕಾರ ಸ್ವಾಧೀನ ದಿನಾಂಕದಿಂದ ಪರಿಹಾರ ವಿತರಿಸಲು ಅವಕಾಶವಿದೆ. ಈ ಕಾರಣಕ್ಕೆ ತೀರ್ಪು ಮರುಪರಿಶೀಲನೆಗೆ ವಿವಿಧ ನ್ಯಾಯಾಯಗಳಲ್ಲಿ ಅರ್ಜಿ ಸಲ್ಲಿಸಲಾಗಿದೆ" ಎಂದು ಪ್ರಾಧಿಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಸ್ವಾಧೀನ ದಿನಾಂಕದಿಂದ ಪರಿಹಾರ ವಿತರಿಸಿದರೆ ಪ್ರಾಧಿಕಾರಕ್ಕೆ ₹ 126 ಕೋಟಿ ಉಳಿಯಲಿದೆ ಎಂದೂ ಅವರು ಸ್ಪಷ್ಟಪಡಿಸಿದರು.

‘ತನಿಖೆ ನಡೆಯಲಿ’

ಬಡಾವಣೆ ಅಭಿವೃದ್ಧಿಪಡಿಸಲು ಸ್ವಾಧೀನಪಡಿಸಿಕೊಂಡಿರುವ ಜಮೀನುಗಳಿಗೆ ನೀಡಿರುವ ಪರಿಹಾರದ ಹಣದಲ್ಲಿ ಅಸಲಿಗಿಂತ ಬಡ್ಡಿ ಹೆಚ್ಚಿರುವ ಕುರಿತು ಸಮರ್ಪಕ ತನಿಖೆ ನಡೆಸುವಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನೌಕರರ ಸಂಘದ ಅಧ್ಯಕ್ಷ ಹಾಗೂ ನಗರ ಯೋಜನಾ ಸಹಾಯಕ ನಿರ್ದೇಶಕ (ನಿವೃತ್ತ) ಪಾ.ಶ್ರೀ. ನಟರಾಜ್‌ ಆಗ್ರಹಿಸಿದ್ದಾರೆ.

ರೈತರಿಗೆ ಪರಿಹಾರ ನೀಡಲು ಇಟ್ಟಿದ್ದ ಹಣವನ್ನು ತನಗೆ ಸಂಬಂಧವಿಲ್ಲದ ಕಾಮಗಾರಿಗಳಿಗೆ ಬಳಸುವ ಮೂಲಕ ಪ್ರಾಧಿಕಾರದ ಅಧಿಕಾರಿಗಳು ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ. ಅಧಿಕಾರಿಗಳಿಂದ ಹಣ ವಸೂಲು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.