ADVERTISEMENT

ಜಮೀನ್ದಾರಿ ಪದ್ಧತಿ ಮರುಕಳಿಸಲಿ: ರೈತ ಸಂಘ

​ಪ್ರಜಾವಾಣಿ ವಾರ್ತೆ
Published 13 ಜೂನ್ 2020, 20:44 IST
Last Updated 13 ಜೂನ್ 2020, 20:44 IST
ಎನ್.ನಂಜೇಗೌಡ
ಎನ್.ನಂಜೇಗೌಡ   

ಬೆಂಗಳೂರು: ‘ಭೂಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ಭೂಮಿ ಕಳೆದುಕೊಳ್ಳಲಿರುವ ರೈತರು ಶ್ರೀಮಂತರ ಕೂಲಿ ಆಳುಗಳಾಗುತ್ತಾರೆ. ಇದರಿಂದ ಹಿಂದಿನ ಜಮೀನ್ದಾರಿ ಪದ್ಧತಿ ಮರುಕಳಿಸಲಿದ್ದು, ಸರ್ಕಾರ ಕೂಡಲೇ ತಿದ್ದುಪಡಿ ಕೈಬಿಡಬೇಕು’ ಎಂದು ರೈತ ಸಂಘದರಾಜ್ಯ ಸಂಚಾಲಕ ಎನ್.ನಂಜೇಗೌಡ ಒತ್ತಾಯಿಸಿದರು.

‘ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಈ ಕಾಯ್ದೆಗೆ ತಿದ್ದುಪಡಿ ತರುವಮೂಲಕ ಯಾರು ಬೇಕಾದರೂ ಬಂಡವಾಳ ಹೂಡಿ ಭೂಮಿ ಖರೀದಿಸಬಹುದು ಎನ್ನುತ್ತಿದೆ. ಒಂದು ಕುಟುಂಬಕ್ಕಿದ್ದ ಗರಿಷ್ಠ ಭೂ ಹಿಡುವಳಿ ಮಿತಿಯನ್ನು ದುಪ್ಪಟ್ಟುಗೊಳಿಸಿ, ನಿಜವಾದ ರೈತರನ್ನು ಬೀದಿಪಾಲು ಮಾಡಲು ಹೊರಟಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಭೂಸುಧಾರಣೆಗೆ ಸಂಬಂಧಪಟ್ಟ ಹಲವು ಪ್ರಕರಣಗಳು ದಶಕಗಳಿಂದಲೂ ನ್ಯಾಯಾಲಯಗಳಲ್ಲಿ ಇತ್ಯರ್ಥವಾಗದೆ
ಉಳಿದಿವೆ. ಕಾನೂನು ಉಲ್ಲಂಘಿಸಿ ಭೂಮಿ ಖರೀದಿಸಿದ ಪ್ರಕರಣಗಳಲ್ಲಿ ಜಮೀನು ಮುಟ್ಟುಗೋಲು ಮಾಡಿ ಸ್ವಾಧೀನಕ್ಕೆ ಪಡೆದಿರುವ ಅಂಕಿ ಅಂಶಗಳನ್ನು ಹೈಕೋರ್ಟ್‍ಗೆ ಸಲ್ಲಿಸಲು ಸರ್ಕಾರಕ್ಕೆ ಆದೇಶಿಸಲಾಗಿತ್ತು. ಆದರೆ, ಸರ್ಕಾರ ಮಾಹಿತಿ ನೀಡುವ ಬದಲು,
ಈ ಹೊಣೆಯಿಂದ ನುಣುಚಿಕೊಳ್ಳಲು ಕಾಯ್ದೆ ತಿದ್ದುಪಡಿಗೆ ಯತ್ನಿಸಿದೆ. ಕಾನೂನು ಉಲ್ಲಂಘಿಸಿರುವ 12,231 ಪ್ರಕರಣಗಳನ್ನು ವಜಾಗೊಳಿಸಿ, ಶ್ರೀಮಂತರಿಗೆ ಅನುಕೂಲ ಮಾಡಿಕೊಡುವ ಹುನ್ನಾರ ನಡೆದಿದೆ’ ಎಂದು ದೂರಿದರು.

ADVERTISEMENT

‘ಭೂಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ಕಾರ್ಪೊರೇಟ್ ಸಂಸ್ಥೆಗಳು, ಉದ್ಯಮಿಗಳು ಹಾಗೂ ಬಂಡವಾಳಶಾಹಿಗಳಿಗೆ ಅನುಕೂಲವಾಗಲಿದೆ. 78 ಲಕ್ಷ ಸಣ್ಣ ಹಾಗೂ ಅತೀ ಸಣ್ಣ ರೈತರು ಬೀದಿ ಪಾಲಾಗುತ್ತಾರೆ ಎನ್ನುವ ಕನಿಷ್ಠ ಜ್ಞಾನವೂ ಸರ್ಕಾರಕ್ಕಿಲ್ಲ. ತಿದ್ದುಪಡಿಯನ್ನು ಸರ್ಕಾರ ಕೂಡಲೇ ಕೈಬಿಡಬೇಕು. ಇದಕ್ಕೆ ರಾಜ್ಯಪಾಲರು ಸಹಿ ಹಾಕಬಾರದು’ ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.